ಚನ್ನಪಟ್ಟಣ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ತಂದಿದ್ದು ನಾನೇ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ತಾಲ್ಲೂಕಿನ ಸಿಂಗರಾಜಿಪುರ ಗ್ರಾಮದಲ್ಲಿ ಶುಕ್ರವಾರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ ಮಾತನಾಡಿದರು. ಈ ಮಸೂದೆ ಅಂಗೀಕರಿಸಿದ್ದರಿಂದ ದೇಶದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ದೊರೆಯಿತು. ಇದರಿಂದ ಮಹಿಳೆಯರು ರಾಜಕೀಯವಾಗಿ ಪ್ರಗತಿ ಸಾಧಿಸಲು ಸಾಧ್ಯವಾಯಿತು ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಲಪಡಿಸಲು ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು. ಅವರು ಈ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲ. ನಿಖಿಲ್ ಸಾರ್ವಜನಿಕ ಸೇವೆಯಲ್ಲಿ ಅನುಭವ ಹೊಂದಿರುವ ಪ್ರತಿಭಾವಂತ ಯುವನಾಯಕ. ಭಾರತದ ಭವಿಷ್ಯವನ್ನು ರೂಪಿಸಲು ಯುವಕರನ್ನು ರಾಜಕೀಯಕ್ಕೆ ಪ್ರೇರೇಪಿಸಲು ಅವರ ಗೆಲುವು ಅಗತ್ಯವಾಗಿದೆ ಎಂದರು.
ದೇಶಾದ್ಯಂತ 80 ಕೋಟಿ ಜನರಿಗೆ ನರೇಂದ್ರ ಮೋದಿ ಅವರು ನೀಡುತ್ತಿರುವ ಅಕ್ಕಿಯ ಮೇಲೆ ಕಾಂಗ್ರೆಸ್ ತನ್ನ ಲೇಬಲ್ ಅಂಟಿಸುತ್ತಿದೆ. ಆದರೆ ನಿಮ್ಮ ಮನೆಗಳಿಗೆ ತಲುಪುವ ಅಕ್ಕಿಯನ್ನು ಮೋದಿ ಸರ್ಕಾರ ಒದಗಿಸುತ್ತದೆಯೇ ಹೊರತು ಕಾಂಗ್ರೆಸ್ ಅಲ್ಲ. ಭ್ರಷ್ಟ, ಹಿಂದೂ ವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಕಲಿಸಲು ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ನಂತರ ತಾಲ್ಲೂಕಿನ ಭೂಹಳ್ಳಿ, ನಗರದ ಶೇರು ಹೋಟೆಲ್ ಸರ್ಕಲ್ ಬಳಿ ಪ್ರಚಾರ ನಡೆಸಿದರು. ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಶಾಸಕ ಮಾಗಡಿ ಮಂಜುನಾಥ್, ಪಕ್ಷದ ಮುಸ್ಲಿಂ ಸಮುದಾಯದ ಮುಖಂಡ ಇಮ್ರಾನ್ ಪಾಷಾ, ಸ್ಥಳೀಯ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.