ಚನ್ನಪಟ್ಟಣ: ‘ನನ್ನನ್ನು ಸೋಲಿಸಲು ಇಡೀ ಸರ್ಕಾರವೇ ಕ್ಷೇತ್ರಕ್ಕೆ ಬರುತ್ತಿದೆ. ಅದು ಅವರ ಪಕ್ಷದ ಚುನಾವಣೆ ತಂತ್ರ. ಅವರ ಕೆಲಸ ಅವರು ಮಾಡಿಕೊಳ್ಳಲಿ. ನಮ್ಮ ಕೆಲಸ ನಾವು ಮಾಡೋಣ. ಅವರು ಏನೇ ಕುತಂತ್ರ ರಾಜಕಾರಣ ಮಾಡಿದರೂ ಚನ್ನಪಟ್ಟಣ ಜನತೆ ನನ್ನ ಕೈ ಬಿಡುವುದಿಲ್ಲ’ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಎಚ್. ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕುಂದ, ಹುಲುವಾಡಿ, ಆಣಿಗೆರೆ, ಎಚ್. ಬ್ಯಾಡರಹಳ್ಳಿ, ತೌಟನಹಳ್ಳಿ, ತೆಂಕನಹಳ್ಳಿ, ಗುಡ್ಡೆಹೊಸೂರು ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದ ಅವರು, ನಂತರ ಮಾಧ್ಯಮದವರ ಜೊತೆ ಮಾತನಾಡಿದರು.
‘ಎಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆಂಬ ಕಾಂಗ್ರೆಸ್ ನಾಯಕರ ಆರೋಪಗಳನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ನ.13ಕ್ಕೆ ಅವರ ಎಲ್ಲಾ ಆರೋಪಗಳಿಗೆ ಅವರೇ ಉತ್ತರ ಕೊಡಲಿದ್ದಾರೆ. ತೀರ್ಪು, ತೀರ್ಮಾನ ಕೊಡುವುದು ಕ್ಷೇತ್ರದ ಮತದಾರರು. ಎಲ್ಲವನ್ನೂ ಅವರಿಗೆ ಬಿಟ್ಟಿದ್ದೇನೆ. ಮತದಾರರ ಆಶೀರ್ವಾದ ನನ್ನ ಮೇಲೆ ಇದೆ’ ಎಂದು ಹೇಳಿದರು.
‘ಇಂದು ಬೇವೂರು ಜಿ.ಪಂ ವ್ಯಾಪ್ತಿಯಲ್ಲಿ ಪ್ರಚಾರ ಮಾಡ್ತಿದ್ದೇನೆ. ಇನ್ನೂ ಪ್ರಚಾರಕ್ಕೆ ಒಂದು ವಾರ ಮಾತ್ರ ಬಾಕಿ ಇದೆ. ಜನರ ಉತ್ಸಾಹ ನೋಡಿದರೆ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ. ಜನ ಕುಮಾರಸ್ವಾಮಿ ಹಾಗೂ ದೇವೇಗೌಡರ ಕೆಲಸಗಳ ಬಗ್ಗೆ ಮಾತನಾಡ್ತಿದ್ದಾರೆ’ ಎಂದರು.
‘ಇಂದು ನನ್ನ ಪತ್ನಿ ಕೂಡ ನನ್ನ ಪರ ಪ್ರಚಾರ ಮಾಡಿದ್ದಾರೆ. ವಿದ್ಯಾರ್ಥಿಗಳ ಬಳಿ ಮತಯಾಚನೆ ಮಾಡಿದ್ದಾರೆ. ಮಹಿಳಾ ಕಾರ್ಯಕರ್ತರು ಒತ್ತಾಯ ಮಾಡಿ ಪ್ರಚಾರಕ್ಕೆ ಕರೆತಂದಿದ್ದಾರೆ. ರೇವತಿ ಅವರ ತಾಯಿ ಕೂಡಾ ಸಾಮಂದಿಪುರು ಗ್ರಾಮದವರು. ಹಾಗಾಗಿ, ಅಲ್ಲಿಗೆ ಹೋಗಿದ್ದಾಗ ಅದರ ಬಗ್ಗೆ ಮಾತನಾಡಿದೆ ಅಷ್ಟೇ. ಅದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.