ADVERTISEMENT

ಚನ್ನಪಟ್ಟಣ ಉಪ ಚುನಾವಣೆ: ನಿಖಿಲ್ ಪರ ಕುಮಾರಸ್ವಾಮಿ- ಯಡಿಯೂರಪ್ಪ ಜಂಟಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 11:17 IST
Last Updated 6 ನವೆಂಬರ್ 2024, 11:17 IST
   

ಚನ್ನಪಟ್ಟಣ (ರಾಮನಗರ): ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ‌, ಅವರ ತಂದೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಜಂಟಿಯಾಗಿ ಪ್ರಚಾರ ನಡೆಸಿದರು.

ತಾಲ್ಲೂಕಿನ ಸೋಗಾಲದಲ್ಲಿ ತೆರೆದ ವಾಹನದಲ್ಲಿ ರೋಡ್ ಷೋ ನಡೆಸಿದ ಇಬ್ಬರೂ ನಾಯಕರು, ನಿಖಿಲ್‌ಗೆ ಮತ ಹಾಕುವಂತೆ ಮನವಿ ಮಾಡಿದರು.

ಯಡಿಯೂರಪ್ಪ ಮಾತನಾಡಿ, ನಿಮಗೆ ಕೈ ಜೋಡಿಸಿ ಪ್ರಾರ್ಥಿಸುವೆ. ಕುಮಾರಸ್ವಾಮಿ ಅವರ ಪುತ್ರನನ್ನು ಗೆಲ್ಲಿಸಿ ಕೊಡಿ. ನಾನು ಮತ್ತು ಕುಮಾರಸ್ವಾಮಿ ಒಗ್ಗೂಡಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದೆವು. ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಸೈಕಲ್, ಹಿರಿಯ ಜೀವಗಳಿಗರ ಸಂಧ್ಯಾ ಸುರಕ್ಷಾ ಯೋಜನೆ ತಂದೆವು.

ADVERTISEMENT

ಕೇಂದ್ರದ ಕಿಸಾನ್‌ಸಮ್ಮಾನ್ ಯೋಜನೆಗೆ ನಾವು ರಾಜ್ಯದಿಂದ ₹6 ಸಾವಿರ ಕೊಟ್ಟು ರೈತರಿಗೆ ಅನುಕೂಲ ಮಾಡಿಕೊಟ್ಟೆವು. ನಮ್ಮ ಅಧಿಕಾರಾವಧಿಯಲ್ಲಿ ಆದಷ್ಟು ಜನಪರ ಕೆಲಸಗಳನ್ನು ಮಾಡಿದೆವು. ನಿಖಲ್ ಅವರಿಗೆ ನೀವು ಆಶೀರ್ವಾದ ಮಾಡಿ, ಸೇವೆಗೆ ಅವಕಾಶ ಕಲ್ಪಿಸಬೇಕು ಎಂದರು.

ಕುಮಾರಸ್ವಾಮಿ ಮಾತನಾಡಿ, ನಿಖಿಲ್ ಸ್ಪರ್ಧೆ ದೈವದ ಇಚ್ಛೆ. ‌2018ರಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಒತ್ತಡದಿಂದಾಗಿ ಅವರಿಗೆ ಗೌರವ ಕೊಟ್ಟು ಇಲ್ಲಿಗೆ ಬಂದೆ. ನಾನು ನಾಮಪತ್ರ ಸಲ್ಲಿಸಿದರೂ ನೀವೇ ಚುನಾವಣೆ ಮಾಡಿ ಗೆಲ್ಲಿಸಿದ್ರಿ.

ನನ್ನ ಪರ್ಮನೆಂಟ್ ಟೂರಿಂಗ್ ಟಾಕೀಸ್ ರಾಮನಗರ. ನನಗೆ ಆ ರೀತಿ ಹೇಳಿದ ಸಚಿವಗೆ ತಾಕತ್ತಿದ್ದರೆ ಅವರ ಕ್ಷೇತ್ರ ಬಿಟ್ಟು ಬೇರೆ ಕಡೆ ನಿಂತು ಗೆಲ್ಲಲಿ ಎಂದು ಸವಾಲು ಹಾಕಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ದೆಹಲಿಗೆ ಕರೆದಿದ್ದರಿಂದ ಹಾಗೂ ಮಂಡ್ಯದಲ್ಲಿ ಕುಂದಿದ್ದ ಪಕ್ಷವನ್ನು ಮೇಲಕ್ಕೆತ್ತಲು ಅಲ್ಲಿಗೆ ಹೋದೆ. ಅವರು ಅಭಿಮಾನದಿಂದ ಗೆಲ್ಲಿಸಿ ದೆಹಲಿಗೆ ಕಳಿಸಿದರು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಯೋಗೇಶ್ವರ್ ನನ್ನ ಬಳಿ ಬಂದು ಟಿಕೆಟ್ ಕೇಳಿದರು. ಆಗ, ನಾನು ನಿಖಿಲ್ ನಿಲ್ಲಿಸುವ ಮಾತೇ ಇಲ್ಲ. ನಮ್ಮವರಿಗೆ ನೀನು‌ ತೊಂದರೆ ಕೊಟ್ಟಿದ್ದೀಯಾ. ಕ್ಷೇತ್ರಕ್ಕೆ ಹೋಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೂಚಿಸಿದೆ. ಆದರೆ, ಅವರು ನಮಗೆ ವಿಶ್ವಾಸದ್ರೋಹ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯರಾದ ಯಡಿಯೂರಪ್ಪ ಅವರ ಆಶೀರ್ವಾದದಿಂದ ಯೋಗೇಶ್ವರ್ ನಾಯಕನಾದರು. ಅವರಿಗೆ ರಕ್ಷಣೆ ಕೊಟ್ಟುಕೊಂಡು ಬಂದು ಬೆಳೆಸಿದರು. ಸದಾನಂದ ಗೌಡರು ಹದಿನೇಳು ಕೆರೆಗಳಿಗೆ ನೀರು ತುಂಬಿಸಲು ಹಣ ಕೊಟ್ಟರು. ಇಗ್ಗಲೂರು ಜಲಾಶಯವನ್ನು ದೇವೇಗೌಡರು ಕಟ್ಟದಿದ್ದರೆ ನೀರು ಹೇಗೆ ಬರುತ್ತಿತ್ತು. ಅವರು 17 ಕೆರೆಗಳಿಗೆ ನೀರು ತುಂಬಿಸಿದರೆ, ನಾನು 107 ಕೆರೆಗಳಿಗೆ ನೀರು ತುಂಬಿಸಿದೆ. ಎಲ್ಲಾ ಊರುಗಳಿಗೆ ಮೂಲಸೌಕರ್ಯ ಕಲ್ಪಿಸಿದೆ. ಸಿ.ಸಿ ರಸ್ತೆ, ಚರಂಡಿ ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಿದೆ ಎಂದರು.

ಕಾಂಗ್ರೆಸ್ ಸರ್ಕಾರ ಭಾಗ್ಯ ಲಕ್ಷ್ಮಿ ಬಾಂಡ್ ಹಣ ಕೊಡುತ್ತಿಲ್ಲ.‌ ಹಾಲಿನ ಪ್ರೋತ್ಸಾಹಧನ ಪಾವತಿಸಿಲ್ಲ. ಅಕ್ಕಿ ಕೊಡುತ್ತಿರುವುದರಿಂದ ಕೇಂದ್ರ ಸರ್ಕಾರದ ಮೋದಿ. ಬ್ಯಾಗ್ ಮಾತ್ರ ಕಾಂಗ್ರೆಸ್ ಸರ್ಕಾರದ್ದು. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಹೀಗೆ ಹಲವು ಸಮಸ್ಯೆಗಳು ರಾಜ್ಯದಲ್ಲಿ ತಾಂಡವಾಡುತ್ತಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ನನ್ನ ಕಣ್ಣೀರಿನ ಬಗ್ಗೆ ಕಾಂಗ್ರೆಸ್ ನವರು ವ್ಯಂಗ್ಯವಾಡುತ್ತಿದ್ದಾರೆ. ಕುಮಾರಸ್ವಾಮಿ ಕಣ್ಣೀರು ಹಾಕಿದ್ದು ಸ್ವಂತಕ್ಕಲ್ಲ. ರೈತರು ಹಾಗೂ ಬಡವರಿಗಾಗಿ. ನಿಖಿಲ್ ಸ್ಪರ್ಧೆಗೆ ಯಡಿಯೂರಪ್ಪ ಅವರ ಆಶೀರ್ವಾದ ಇದೆ‌‌. ಅವನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ನಾನು ದೇಶ ಸುತ್ತಿದರೆ ನಿಖಿಲ್ ನಿಮ್ಮ ಜೊತೆ ಇದ್ದು ಸೇವೆ ಮಾಡುತ್ತಾನೆ. ಅವನನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿ ಕೊಡಿ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.