ರಾಮನಗರ: ಪಕ್ಷಾಂತರದಿಂದಲೇ ರಾಜಕೀಯ ಅಸ್ತಿತ್ವ ಉಳಿಸಿಕೊಂಡು ಬಂದಿರುವ ಸಿ.ಪಿ.ಯೋಗೇಶ್ವರ್ ಅವರಿಗೆ ಪಕ್ಷಾಂತರ ಹೊಸದಲ್ಲ. ಇದು ಅವರ ಆರನೇ ಪಕ್ಷಾಂತರ.
25 ವರ್ಷದಿಂದ ರಾಜಕಾರಣದಲ್ಲಿರುವ ಯೋಗೇಶ್ವರ್ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷಗಳಿಗೆ ಹೋಗಿ ಬಂದಿದ್ದಾರೆ. ಒಮ್ಮೆ ಸಮಾಜವಾದಿ ಪಕ್ಷಕ್ಕೆ, ತಲಾ ಎರಡು ಸಲ ಕಾಂಗ್ರೆಸ್ ಮತ್ತು ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಅವರು ಇದೀಗ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ.
ಸಿನಿಮಾ ನಟ, ಚಿತ್ರ ನಿರ್ಮಾಣದ ಜೊತೆ ಉದ್ಯಮಿಯೂ ಆಗಿದ್ದ ಯೋಗೇಶ್ವರ್ ರಾಜಕೀಯ ಪಯಣ ಶುರುವಾಗಿದ್ದು ಕಾಂಗ್ರೆಸ್‌ನಿಂದ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಾರ್ಯದರ್ಶಿಯಾಗಿದ್ದ ಅವರು 1999ರ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದರು.
ಮೊದಲ ಚುನಾವಣೆಯಲ್ಲೇ ಬಂಡಾಯದ ಬಾವುಟ ಹಾರಿಸಿ ಗೆದ್ದು ಬಂದ ಅವರು ನಂತರ 2004 ಮತ್ತು 2008ರಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿ ಗೆಲುವು ಸಾಧಿಸಿದರು.
2008ರಲ್ಲಿ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ‘ಆಪರೇಷನ್ ಕಮಲ’ದಿಂದ ಒಂದೇ ವರ್ಷದಲ್ಲಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಮಾರನೇ ವರ್ಷ 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಸಿ. ಅಶ್ವಥ್ ವಿರುದ್ಧ ಪರಾಭಗೊಂಡರು.
ಜೆಡಿಎಸ್‌ನಿಂದ ಗೆದ್ದ ಎಂ.ಸಿ.ಅಶ್ವಥ್ ಸಹ ವರ್ಷದ ಬಳಿಕ 2010ರಲ್ಲಿ ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿ ಸೇರಿದರು. ಕ್ಷೇತ್ರಕ್ಕೆ 2011ರಲ್ಲಿ ಉಪ ಚುನಾವಣೆ ಎದುರಾಯಿತು. ಆಗ ಬಿಜೆಪಿಯಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದ ಯೋಗೇಶ್ವರ್, ಜೆಡಿಎಸ್‌ನ ಸಿಂ.ಲಿಂ. ನಾಗರಾಜು ವಿರುದ್ಧ ಜಯ ಸಾಧಿಸಿದರು. ಮುಖ್ಯಮಂತ್ರಿ ಸದಾನಂದಗೌಡ ಸಂಪುಟದಲ್ಲಿ 2013ರವರೆಗೆ ಅರಣ್ಯ ಸಚಿವರಾಗಿದ್ದರು.
2013ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಹೊತ್ತಿಗೆ ಮತ್ತೆ ಕಾಂಗ್ರೆಸ್‌ನತ್ತ ವಾಲಿದ ಯೋಗೇಶ್ವರ್ ಅವರಿಗೆ ಪಕ್ಷ ‘ಬಿ ಫಾರಂ’ ನೀಡಲಿಲ್ಲ. ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಾಗ ಸಮಾಜವಾದಿ ಪಕ್ಷದ (ಎಸ್‌ಪಿ) ಟಿಕೆಟ್ ತಂದು ಸ್ಪರ್ಧಿಸಿ ಗೆಲುವು ಸಾಧಿಸಿದರು. 2018ರ ಚುನಾವಣೆ ಸಂದರ್ಭದಲ್ಲಿ ಮತ್ತೆ ಬಿಜೆಪಿ ಸೇರಿದ ಅವರು ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸೋತರು.
ಸೋತರೂ ಸಚಿವ ಸ್ಥಾನ: ಆ ವರ್ಷ ಮತ್ತೆ ಅಧಿಕಾರ ಹಿಡಿದ ಬಿಜೆಪಿಯು, ಸೋತಿದ್ದ ಯೋಗೇಶ್ವರ್ ಅವರನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿ ಸಚಿವ ಸ್ಥಾನ ನೀಡಿತು. ಆಗ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿ.ಎಂ ಕುರ್ಚಿಗೆ ಕೂರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರಿಗೆ ಮತ್ತೆ ಸಚಿವನಾಗುವ ಭಾಗ್ಯ ಸಿಗಲಿಲ್ಲ.
2023ರ ಚುನಾವಣೆಯಲ್ಲಿ ಯೋಗೇಶ್ವರ್ ಮತ್ತೆ ಬಿಜೆಯಿಂದ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದರೂ ಗೆಲುವು ದಕ್ಕದೆ, ಪರಿಷತ್ ಸ್ಥಾನದಲ್ಲೇ ಮುಂದುವರಿದಿದ್ದರು. 2024 ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಿ ಗೆದ್ದಿದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ತೆರವಾಗಿರುವ ಸ್ಥಾನಕ್ಕೆ ನಡೆಯುತ್ತಿರುವ ಉಪ ಚುನಾವಣೆಗೆ ಸ್ಪರ್ಧಿಸಲು ಶುರುವಾದ ಟಿಕೆಟ್ ರಾಜಕಾರಣದಲ್ಲಿ ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.