ADVERTISEMENT

ಉಪ ಸಮರ: ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 0:26 IST
Last Updated 21 ಅಕ್ಟೋಬರ್ 2024, 0:26 IST
ಚನ್ನಪಟ್ಟಣದ ಹೊರವಲಯದ ಖಾಸಗಿ ಹೋಟೆಲ್ ವೊಂದರಲ್ಲಿ ಸಭೆ ನಡೆಸಿದ ತಾಲ್ಲೂಕು ಜೆಡಿಎಸ್ ಮುಖಂಡರು
ಚನ್ನಪಟ್ಟಣದ ಹೊರವಲಯದ ಖಾಸಗಿ ಹೋಟೆಲ್ ವೊಂದರಲ್ಲಿ ಸಭೆ ನಡೆಸಿದ ತಾಲ್ಲೂಕು ಜೆಡಿಎಸ್ ಮುಖಂಡರು   

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಅಂತಿಮಗೊಳಿಸಲು ಮೈತ್ರಿ ಪಕ್ಷದ ನಾಯಕರಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿರುವಂತೆಯೇ ಜೆಡಿಎಸ್ ಮುಖಂಡರು ಸಭೆ ಸೇರಿ ಯಾವುದೇ ಕಾರಣಕ್ಕೂ ಜೆಡಿಎಸ್ ಚಿಹ್ನೆ ಬಿಡಬಾರದು. ಪಕ್ಷದ ಚಿಹ್ನೆಯಡಿಯೇ ಚುನಾವಣೆ ನಡೆಯಬೇಕು ಎಂದು ನಿರ್ಧರಿಸಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ನೇತೃತ್ವದಲ್ಲಿ ಭಾನುವಾರ ಸಭೆ ನಡೆಸಿದ ಪಕ್ಷದ ಪ್ರಮುಖ ಮುಖಂಡರು ಈ ನಿರ್ಧಾರ ಕೈಗೊಂಡರು. ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಲು ತೀರ್ಮಾನಿಸಲಾಯಿತು.

ಜೆಡಿಎಸ್ ಚಿಹ್ನೆಗೆ ಟಿಕೆಟ್ ಉಳಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಚಿಹ್ನೆ ಬಿಡಬಾರದು. ಯಾರೇ ಅಭ್ಯರ್ಥಿ ಆಗಲಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಲಿ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟರೂ ಸರಿಯೇ. ಚುನಾವಣೆ ಜೆಡಿಎಸ್ ಚಿಹ್ನೆಯಡಿ ನಡೆಯಬೇಕು. ಈ ವಿಚಾರ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಕಳೆದ ಲೋಕಸಭೆ ಚುನಾವಣೆಯಲ್ಲಿ ಸಂಸದ ಡಾ.ಮಂಜುನಾಥ್, ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡಿದ್ದರು. ಆಗ ಜೆಡಿಎಸ್ ಪಕ್ಷದವರು ಬೆಂಬಲ ನೀಡಿದ್ದೇವೆ. 2018 ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜಯಗಳಿಸಿದೆ. ಹಾಗಾಗಿ ಈ ಉಪ ಚುನಾವಣೆಯಲ್ಲಿಯೂ ಪಕ್ಷಕ್ಕೆ ಟಿಕೆಟ್ ಕೊಡಬೇಕು. ಬಿಜೆಪಿಯವರು ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸುವ ಅಭ್ಯರ್ಥಿಗೆ ಬೆಂಬಲ ಕೊಡಬೇಕು ಎಂದು ಸಭೆಯಲ್ಲಿದ್ದ ಮುಖಂಡರು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಗೋವಿಂದಹಳ್ಳಿ ನಾಗರಾಜ್, ಪಂಚಮಿ ಪ್ರಸನ್ನ, ಹಾಪ್ ಕಾಮ್ಸ್ ದೇವರಾಜು, ಕುಕ್ಕೂರುದೊಡ್ಡಿ ಜಯರಾಮ್, ಪೀಹಳ್ಳಿದೊಡ್ಡಿ ಭಾನುಪ್ರಸಾದ್, ನಾಗವಾರ ರಂಗಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.