ಚನ್ನಪಟ್ಟಣ (ರಾಮನಗರ): ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರ ಸ್ವಗ್ರಾಮ ಚಕ್ಕೆರೆಯಲ್ಲಿ ಭಾನುವಾರ ಉಪ ಚುನಾವಣೆ ಪ್ರಚಾರ ರಂಗೇರಿತ್ತು. ಗ್ರಾಮಕ್ಕೆ ಒಂದೇ ದಿನ ದೌಡಾಯಿಸಿದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಗ್ರಾಮದಲ್ಲಿ ಮತಬೇಟೆ ನಡೆಸಿದರು. ಬೀದಿಗಳಲ್ಲಿ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶಿಸಿದರು.
ನಿಖಿಲ್ ಕುಮಾರಸ್ವಾಮಿ ಪರವಾಗಿ ಬೆಳಗ್ಗೆ ಗ್ರಾಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ ಯಾಚಿಸಿದರು. ಅವರಿಗೆ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸಾಥ್ ನೀಡಿದರು.
ಮತ್ತೊಂದು ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದ ನಿಖಿಲ್‌ಗೆ ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ವಿಶ್ವನಾಥ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಡಾ.ಅನ್ನದಾನಿ ಸೇರಿದಂತೆ ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಜೊತೆಯಾದರು.
ಸಿಪಿವೈ ದೌಡು: ತಮ್ಮ ಗ್ರಾಮದಲ್ಲಿ ಕುಮಾರಸ್ವಾಮಿ ಪ್ರಚಾರ ನಡೆಸಿ ಹೋದ ಬೆನ್ನಲ್ಲೇ ಪಕ್ಷದ ನಾಯಕರೊಂದಿಗೆ ಮಧ್ಯಾಹ್ನ ಗ್ರಾಮಕ್ಕೆ ಬಂದ ಯೋಗೇಶ್ವರ್, ಸಹ ಗ್ರಾಮದಲ್ಲಿ ಮತಯಾಚಿಸಿ ಶಕ್ತಿ ಪ್ರದರ್ಶಿಸಿದರು. ಪಶು ಸಂಗೋಪನೆ ಸಚಿವ ವೆಂಕಟೇಶ್, ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಸಂಸದರಾದ ಡಿ.ಕೆ.ಸುರೇಶ್, ಶಿವರಾಮೇಗೌಡ ಸೇರಿದಂತೆ ಹಲವರು ಸಿಪಿವೈ ಜತೆಗಿದ್ದರು. ಮತ್ತೊಂದೆಡೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಶಾಸಕರು ಹಾಗೂ ಸ್ಥಳೀಯ ಮುಖಂಡರು ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಿದರು.
ಯೋಗೇಶ್ವರ್ ನಮ್ಮ ಜತೆಗೆ ಇದ್ದುಕೊಂಡೇ ಕೈ ಕೊಟ್ಟಿದ್ದಾರೆ. ಅವರಿಗೆ ಉಪ ಚುನಾವಣೆ ಅಂದ್ರೆ ಇಷ್ಟ ಅನ್ಸುತ್ತೆ. ಅದಕ್ಕಾಗಿಯೇ ಪಕ್ಷಾಂತರ ಮಾಡುತ್ತಿರುತ್ತಾರೆ. ಹಾಗಾಗಿ ನಿಖಿಲ್ ಗೆಲ್ಲಿಸಿ ಸಿಪಿವೈಗೆ ಪಾಠ ಕಲಿಸಿವಿ. ಸೋಮಣ್ಣ ಕೇಂದ್ರ ಸಚಿವ
ನನ್ನ ಬಗ್ಗೆ ಯಾರೆಷ್ಟೇ ಕೀಳಾಗಿ ಮಾತನಾಡಿದರೂ ಪ್ರತಿಕ್ರಿಯಿಸಲಾರೆ. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನನಗೆ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದೆ. ನನ್ನ ಗೆಲುವೇ ಅವರಿಗೆ ಉತ್ತರನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ
ಈ ಚುನಾವಣೆ ಫಲಿತಾಂಶದಿಂದ ಸರ್ಕಾರವೇನು ಬದಲಾಗದು. ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲ ಸಮುದಾಯದವರನ್ನು ತಲುಪಿದ್ದು ಈ ಚುನಾವಣೆಯ ಫಲಿತಾಂಶ ನಮ್ಮ ಪರ ಬರುವುದರಲ್ಲಿ ಅನುಮಾನವಿಲ್ಲದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.