ADVERTISEMENT

Channapatna Bypoll | ಬಲಿಪಶು ಕಳಂಕದಿಂದ ಮುಕ್ತನಾಗಿದ್ದೇನೆ: ನಿಖಿಲ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 10:45 IST
Last Updated 23 ನವೆಂಬರ್ 2024, 10:45 IST
<div class="paragraphs"><p>ನಿಖಿಲ್ ಕುಮಾರಸ್ವಾಮಿ</p></div>

ನಿಖಿಲ್ ಕುಮಾರಸ್ವಾಮಿ

   

– ಫೇಸ್‌ಬುಕ್ ಚಿತ್ರ

ಬಿಡದಿ (ರಾಮನಗರ): ಬಲಿಪಶು ಕಳಂಕದಿಂದ ಮುಕ್ತನಾಗಿದ್ದೇನೆ ಎಂದು ಚನ್ನಪಟ್ಟಣ ಉಪಚುಣಾವಣೆಯಲ್ಲಿ ಸೋಲುನುಭವಿಸಿದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ADVERTISEMENT

ಬಿಡದಿಯಲ್ಲಿ ಮಾತನಾಡಿದ ಅವರು, ‘ಈ ಚುನಾವಣೆ ಸೇರಿದಂತೆ ಹಿಂದಿನ ಎರಡೂ ಚುನಾವಣೆಗಳಲ್ಲಿ ನಾನು ಪಕ್ಷದಿಂದ ಬಲಿಪಶುವಾಗಿಲ್ಲ. ಪಕ್ಷದಿಂದ ನಾನೇ ಹೊರತು, ನನ್ನಿಂದ ಪಕ್ಷವಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಸ್ಪರ್ಧಿಸಬೇಕಾಯಿತು’ ಎಂದಿದ್ದಾರೆ.

‘ಕಾರ್ಯಕರ್ತರ ಒತ್ತಡ ಮತ್ತು ಹಿರಿಯರ ನಾಯಕರ ಸಲಹೆಗೂ ಗೌರವ ಕೊಡದೆ ನಾನೇನಾದರೂ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದರೆ, ಈ ಚುನಾವಣೆ ನಿಖಿಲ್‌ಗೆ ಪೂರಕವಾಗಿಲ್ಲ. ಹಾಗಾಗಿ, ನಮ್ಮ ಕುಟುಂಬದವರು ಕಾರ್ಯಕರ್ತರನ್ನು ಬಲಿಪಶು ಮಾಡುತ್ತಿದ್ದಾರೆ ಎಂಬ ಕಳಂಕ ಬರುತ್ತಿತ್ತು. ಆದರೆ, ಈಗ ಆ ಕಳಂಕದಿಂದ ನಾನು ಮುಕ್ತನಾಗಿ ನಾನು ಮಲಗುತ್ತೇನೆ. ಸೋಲನ್ನು ನಾನು ಮತ್ತು ಪಕ್ಷ ಸ್ವೀಕರಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

‘ಖಾಲಿ ಮಾಡಿಸಿದೆವು ಎಂದು ಬೀಗಬಾರದು’

‘ಒಂದು ಚುನಾವಣೆಯ ಸೋಲಿನಿಂದ ನಮ್ಮನ್ನು ಜಿಲ್ಲೆಯಿಂದ ಖಾಲಿ ಮಾಡಿಸಿದೆವು ಅಥವಾ ರಾಜಕೀಯವಾಗಿ ನಾವು ಪ್ರಬಲವಾದೆವು ಎಂದು ಯಾರೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಾಗಲೂ ನಾವು ಹಾಗೆ ಹೇಳಲಿಲ್ಲ. ಇಲ್ಲಿ ಶಕ್ತಿ ಇರುವುದು ಮತದಾರರಿಗೆ ಮಾತ್ರ. ಅವರು ಮಾತ್ರ ಎಂತಹ ತೀರ್ಮಾನವನ್ನು ಬೇಕಾದರೂ ತೆಗೆದುಕೊಳ್ಳಬಹುದು‘ ಎಂದರು.

‘ಗೆದ್ದಿರುವ ಎದುರಾಳಿ ಬೀಗಬಾರದು. ಹಾಗೇನಾದರೂ ಮಾಡಿದರೆ ಜನ ಅದಕ್ಕೆ ತಕ್ಕ ಉತ್ತರ ಕೊಡುತ್ತಾರೆ. ಈ ಚುನಾವಣೆಯಲ್ಲಿ ಯಾರಿಗೆ ಎಷ್ಟು ಅಧಿಕಾರ ಬಲ, ಹಣ ಬಲ ಹಾಗೂ ತೋಳ್ಬಲ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜಕಾರಣದಲ್ಲಿರುವ ಹೆಚ್ಚಿನ ಮಂದಿ ಇಲ್ಲಿಗೆ ಬಂದು ಹೆಚ್ಚು ಹಣ ಗಳಿಸಬಹುದೆಂಬ ಮನಸ್ಥಿತಿ ಇದೆ. ಆದರೆ, ಅದು ಬದಲಾಗಿ ಸಮಾಜಸೇವೆಯೇ ಆದ್ಯತೆಯಾಗಬೇಕು ಎಂದು ಬಯಸುವವರಲ್ಲಿ ನಾನೂ ಒಬ್ಬ’ ಎಂದು ಪ್ರಶ್ನೆಯೊಂದಕ್ಕೆ ನಿಖಿಲ್ ಪ್ರತಿಕ್ರಿಯಿಸಿದರು.

‘ಇಬ್ಬರ ಗುಣಗಳನ್ನೂ ಅಳವಡಿಸಿಕೊಳ್ಳುವೆ’

‘ದೇವೇಗೌಡರ ಅಥವಾ ಕುಮಾರಸ್ವಾಮಿ ಅವರ ಮಾಡೆಲ್ ಪಾಲಿಟಿಕ್ಸ್ ಪೈಕಿ ಯಾವುದು ನಿಮಗೆ ಮಾದರಿ?’ ಎಂಬ ಪ್ರಶ್ನೆಗೆ ಕುಮಾರಣ್ಣನಿಗೆ ಇರುವ ಹೃದಯ ವೈಶಾಲ್ಯ ಹಾಗೂ ತಾಯಿ ಹೃದಯ ಇದೆ. ಆ ರೀತಿ ಯೋಚಿಸಿದಾಗಲೇ ಜನಪ್ರತಿನಿಧಿಯಾಗಲು ನಾವು ಅರ್ಹರು. ದೇವೇಗೌಡರು ರಾಜಕೀಯದ ಎನ್‌ಸೈಕ್ಲೊಪೀಡಿಯಾ ಇದ್ದಂತೆ. ಅವರ ರಾಜಕೀಯ ತಂತ್ರಗಾರಿಕೆ ಹಾಗೂ ಅನುಭವ ಎಲ್ಲರಿಗೂ ಮಾದರಿ. ಉತ್ತಮ ರಾಜಕೀಯಕ್ಕಾಗಿ ತಂದೆ ಮತ್ತು ತಾತನ ಈ ಗುಣಗಳನ್ನು ಅಳವಡಿಸಿಕೊಳ್ಳುವೆ’ ಎಂದು ನಿಖಿಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.