ಚನ್ನಪಟ್ಟಣ: ‘ಕ್ಷೇತ್ರಕ್ಕೆ ನಾನು ಮಾಡಿರುವ ಕೆಲಸಗಳ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ಕಣ್ಣಿಲ್ಲವೇ, ಪ್ರತಿ ಹಳ್ಳಿಯಲ್ಲಿಯೂ ₹8 ರಿಂದ ₹10 ಕೋಟಿ ಮೌಲ್ಯದ ಅಭಿವೃದ್ಧಿ ಕಾರ್ಯಗಳು ಆಗಿವೆ. ಇವೆಲ್ಲವೂ ಕಣ್ಣಿಗೆ ಕಾಣುತ್ತಿಲ್ಲವೇ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಾಚಹಳ್ಳಿ, ಕಲ್ಲಾಪುರ, ಸಿದ್ದಾಪುರ, ಗುವ್ವಾಪುರ, ನಿಡಗೋಡಿ, ಸಾಮಂದಿಪುರ, ನೆಲಮಾಕಲನಹಳ್ಳಿ, ಕಾಡಂಕನಹಳ್ಳಿ ಎಲೆತೋಟದಹಳ್ಳಿ, ಯಲಿಯೂರು ಸೇರಿದಂತೆ ಹಲವೆಡೆ ಶುಕ್ರವಾರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ ಮಾತನಾಡಿದರು.
‘ಕಾಂಕ್ರೀಟ್ ರಸ್ತೆ, ಹೈಮಾಸ್ಕ್ ಲೈಟ್ ಸೇರಿದಂತೆ ಸಾಕಷ್ಟು ಮೂಲ ಸೌಕರ್ಯ ಕಲ್ಪಿಸಿದ್ದೇನೆ. ಬೆಂಗಳೂರಿನಲ್ಲೂ ಇಂತಹ ಉತ್ತಮ ರಸ್ತೆಗಳು ಇಲ್ಲ. ಎಷ್ಟು ಕೊಳವೆ ಬಾವಿ ಕೊಟ್ಟಿದ್ದೇವೆ ಎನ್ನುವುದಕ್ಕೆ ಲೆಕ್ಕ ಇದೆ’ ಎಂದರು.
ಜನರ ಜೇಬಿಗೆ ಕತ್ತರಿ: ದಲಿತ ಸಮುದಾಯದ ಅಭಿವೃದ್ಧಿಗೆ ಇಟ್ಟ ಹಣವನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ. ಹೊಸದಾಗಿ ₹1.05 ಲಕ್ಷ ಕೋಟಿ ಸಾಲ ಮಾಡಿ ಜನರ ಮೇಲೆ ಹೊರೆ ಹಾಕುತ್ತಿದೆ. ಇದನ್ನು ಸೇರಿಸಿದರೆ ರಾಜ್ಯದ ಒಟ್ಟು ಸಾಲ ₹7.5 ಲಕ್ಷ ಕೋಟಿ ಆಗುತ್ತದೆ. ಅದನ್ನು ತೀರಿಸಲು ಜನರ ಜೇಬಿಗೆ ಕೈ ಹಾಕುತ್ತಿದ್ದಾರೆ’ ಎಂದು ಅವರು ಕಿಡಿಕಾರಿದರು.
ಮುಂದೆ ಸರ್ಕಾರ ದಿವಾಳಿ: ರೈತರು ಒಂದು ವಿದ್ಯುತ್ ಪರಿವರ್ತಕ ಅಳವಡಿಸಿಕೊಳ್ಳಲು ₹2.5 ಲಕ್ಷ ಬೇಕು. ಜನರ ದುಡ್ಡು ಕಿತ್ಕೊಂಡು ₹ 2 ಸಾವಿರ ಕೊಟ್ಟರೆ ಏನು ಪ್ರಯೋಜನ. ಮುಂದೆ ಈ ಸರ್ಕಾರ ದಿವಾಳಿ ಆಗುವುದರಲ್ಲಿ ಅನುಮಾನ ಇಲ್ಲ. ರಸ್ತೆ ಗುಂಡಿ ಮುಚ್ಚುವುದಕ್ಕೆ ಕೂಡ ಇವರ ಬಳಿ ಹಣ ಇಲ್ಲ. ಹಾಲಿನ ಪ್ರೋತ್ಸಾಹ ಧನ ಕೊಟ್ಟು ಎಷ್ಟು ದಿನ ಆಯಿತು. ಪಶು ಆಹಾರ ಖರೀದಿ ಮಾಡಬೇಕು ಎಂದರೆ ರೈತರ ಕಷ್ಟ ಎಷ್ಟಿದೆ?, ಜನರ ದುಡ್ಡನ್ನೇ ಜನರಿಗೆ ಕೊಡದೆ ಹೋದರೆ ಹೇಗೆ ಬದುಕೋದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವಳಿ ನಗರ ಕನಸು ಶೀಘ್ರ: ‘ಚನ್ನಪಟ್ಟಣ–ರಾಮನಗರ ಅವಳಿ ನಗರ ಆಗುವ ದಿನಗಳು ದೂರವಿಲ್ಲ. ರಾಮನಗರ ಮಂಡ್ಯ ಮಧ್ಯಭಾಗದಲ್ಲಿ ಬೃಹತ್ ಕಾರ್ಖಾನೆ ಸ್ಥಾಪಿಸಿ 25 ಸಾವಿರ ಸ್ಥಳೀಯ ಯುವ ಜನರಿಗೆ ಉದ್ಯೋಗ ನೀಡುತ್ತೇನೆ. ಈ ಬಗ್ಗೆ ನಾನು ಹಲವರ ಜತೆ ಸಮಾಲೋಚನೆ ನಡೆಸಿದ್ದೇನೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಭಾಗದಲ್ಲಿ ಕೈಗಾರಿಕೆಗಳನ್ನು ತರುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಕುಮಾರಸ್ವಾಮಿ ತಿಳಿಸಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯನಾಯಕ್, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಆನೆ ಕಾಟಕ್ಕೆ ಕಡಿವಾಣ ಹಾಕಿ ತಾಲ್ಲೂಕಿನ ಜನರನ್ನು ಪಾರು ಮಾಡಲು ತಡೆಗೋಡೆ ನಿರ್ಮಿಸಲು ರೈಲ್ವೆ ಸಚಿವರ ಜೊತೆ ಮಾತನಾಡಿದ್ದೇನೆ. ಅವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನನ್ನದು ಜವಾಬ್ದಾರಿ ಇದೆ.ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಶುಕ್ರವಾರ ಚನ್ನಪಟ್ಟಣ ತಾಲ್ಲೂಕು ವಕೀಲರ ಸಂಘ ಆಯೋಜಿಸಿದ್ದ ಸಭೆಯಲ್ಲಿ ತಾಲ್ಲೂಕಿನ ವಕೀಲರ ಬಳಿ ಮತಯಾಚಿಸಿದರು.
‘ಇದು ನನ್ನ ಅನಿರೀಕ್ಷಿತ ಚುನಾವಣೆ. ಇನ್ನೂ ಮೂರೂವರೆ ವರ್ಷ ಮಾತ್ರ ಬಾಕಿ ಇದೆ. ನನಗೆ ಒಂದು ಅವಕಾಶ ಕೊಡಿ. ಪಕ್ಷಾತೀತವಾಗಿ ನಿಮ್ಮ ಜೊತೆಜೊತೆಗೆ ಕೆಲಸ ಮಾಡುತ್ತೇನೆ’ ಎಂದರು. ‘ಇದು ಅನುಕಂಪದ ಮೇಲೆ ನಡೆಯುವ ಚುನಾವಣೆ ಅಲ್ಲ. ಅಭಿವೃದ್ಧಿ ಮೇಲೆ ನಡೆಯುವ ಚುನಾವಣೆ. ರಾಜ್ಯ ಸರ್ಕಾರದಿಂದ ನಾವು ಅನುದಾನ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಕೇಂದ್ರದಿಂದ ಅನುದಾನ ತಂದು ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ. ಗಿರೀಶ್ ಉಪಾಧ್ಯಕ್ಷ ಎಸ್.ಬಿ. ಧನಂಜಯ ಪ್ರಧಾನ ಕಾರ್ಯದರ್ಶಿ ದೇವರಾಜು ಹಿರಿಯ ಮತ್ತು ಕಿರಿಯ ವಕೀಲರು ಹಾಜರಿದ್ದರು. ನಂತರ ನಿಖಿಲ್ ಅವರು ತಾಲ್ಲೂಕಿನ ವಾಲೇತೋಪು ಕೂಡ್ಲೂರು ಎಸ್.ಎಂ.ದೊಡ್ಡಿ ಎಸ್.ಎಂ.ಹಳ್ಳಿ ಮಾಳಗಾಳು ಮಳೂರುಪಟ್ಟಣ ತೂಬಿನಕೆರೆ ಕುಕ್ಕೂರು ಸೇರಿದಂತೆ ಹಲವೆಡೆ ಪ್ರಚಾರ ನಡೆಸಿದರು. ಸೂಳ್ಯ ಶಾಸಕಿ ಭಾಗೀರಥಿ ಮರುಳ್ಯ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಮತ್ತು ಸ್ಥಳೀಯ ಮುಖಂಡರು ಹಾಜರಿದ್ದರು.
‘ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಸರ್ಕಾರಕ್ಕೆ ಆಸಕ್ತಿ ಇಲ್ಲ. ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ದಿಮೆದಾರರು ಮುಂದೆ ಬಂದರೆ ಅದರಲ್ಲಿ ನಮಗೂ ಪಾಲು ಕೊಡಿ ಎಂದು ಬೇಡಿಕೆ ಇಟ್ಟಿದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಕಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಆಶಾದಾಯಕವಾಗಿಲ್ಲ. ಅದಕ್ಕೆ ರಾಜ್ಯ ಸರ್ಕಾರವೇ ಕಾರಣ. ಕೈಗಾರಿಕೆ ಸ್ಥಾಪನೆ ಬಗ್ಗೆ ಆಸಕ್ತಿ ಇದ್ದರೆ ಟಯೋಟಾ ಕಂಪನಿ ಮಹಾರಾಷ್ಟ್ರಕ್ಕೆ ಹೋಗುತ್ತಿರಲಿಲ್ಲ. ₹5 ಸಾವಿರ ಕೋಟಿ ನೇರ ಹೂಡಿಕೆ ಅನ್ಯರಾಜ್ಯದ ಪಾಲಾಗುತ್ತಿರಲಿಲ್ಲ. ಇವರು ಎಲ್ಲರ ಬಳಿ ಪಾಲು ಕೇಳಿದರೆ ಯಾವ ಕಂಪನಿ ತಾನೆ ಕರ್ನಾಟಕಕ್ಕೆ ಬರುತ್ತದೆ ಎಂದು ಪ್ರಶ್ನಿಸಿದರು. ‘ಯಾರು ಪಾಲು ಕೇಳಿದರು ಎಂಬುದನ್ನು ಮುಂದೆ ಚರ್ಚಿಸುತ್ತೇನೆ. ರಾಜ್ಯ ಕಾಂಗ್ರೆಸ್ ಅಭಿವೃದ್ಧಿ ಮಾಡುತ್ತದೆ ಎನ್ನುವುದು ಬರೀ ಕನಸು. ಅಂತಿಮವಾಗಿ ಬಿಜೆಪಿ–ಜೆಡಿಎಸ್ ಆಡಳಿತವೇ ಇದಕ್ಕೆ ಪರಿಹಾರ ತರಬೇಕು ಅನ್ನೋದು ನನ್ನ ಅಭಿಪ್ರಾಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.