ಚನ್ನಪಟ್ಟಣ (ರಾಮನಗರ): ‘ದೇವೇಗೌಡರ ಕೈ ನಡುಗುತ್ತವೆ, ಅವರು ಪ್ರಚಾರಕ್ಕೆ ಬರುತ್ತಾರಾ ಎಂದು ಕನ್ವರ್ಟೆಡ್ ಕಾಂಗ್ರೆಸ್ ಜೆಂಟಲ್‌ಮ್ಯಾನ್ ಹೇಳಿದ್ದರು. ನೋಡಿ ನಾನು ಪ್ರಚಾರಕ್ಕೆ ಬಂದಿದ್ದೇನೆ. ಹನ್ನೊಂದನೇ ತಾರೀಖಿನವರೆಗೂ ಬರುತ್ತೇನೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ತಾಲ್ಲೂಕಿನ ವಿರುಪಾಕ್ಷಿಪುರ, ಜೆ. ಬ್ಯಾಡರಹಳ್ಳಿ ಸೇರಿದಂತೆ ವಿವಿಧೆಡೆ ಮಂಗಳವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ‘ಅಭ್ಯರ್ಥಿ ಯಾರೆಂದರೆ, ನಾನೇ ಎನ್ನುತ್ತಿದ್ದವರು ಎಲ್ಲೋದರು? ನಾನು ವೆಂಟಿಲೇಟರ್‌ನಲ್ಲಿ ಭಾಷಣ ಮಾಡೋಕೆ ಬರುತ್ತೇನೆ ಎಂದಿದ್ದ ಆ ಅಪೂರ್ವ ಸಹೋದರರ ಹೆಸರನ್ನು ನಾನು ಹೇಳಲಾರೆ’ ಎಂದು ಡಿ.ಕೆ ಸಹೋದರರಿಗೆ ತಿರುಗೇಟು ನೀಡಿದರು.
‘ಕನ್ವರ್ಟೆಡ್ ಕಾಂಗ್ರೆಸ್ ನಾಯಕನನ್ನು ಜೆಡಿಎಸ್ ಅಥವಾ ಬಿಜೆಪಿಯಂದ ನಿಲ್ಲಲು ಹೇಳಿದ್ದೆವು. ಅವರ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ಪಕ್ಷಕ್ಕೆ ದ್ರೋಹ ಮಾಡದೆ ಎನ್‌ಡಿಎ ಅಭ್ಯರ್ಥಿಯಾಗುವಂತೆ ಸೂಚಿಸಿದ್ದರು. ಅವರ ಮಾತನ್ನೂ ತಿರಸ್ಕರಿಸಿದ ಆ ವ್ಯಕ್ತಿ, ಕಡೆಗೆ ಇಬ್ಬರಿಗೂ ಮೋಸ ಮಾಡಿ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.
‘ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಹೇಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮಾತನಾಡಲು ನನ್ನ ಕುಟುಂಬ ಬಿಟ್ಟರೆ ಬೇರೆ ವಿಷಯವಿಲ್ಲ. ಅವರ ಕುತಂತ್ರಕ್ಕೆ ಸಡ್ಡು ಹೊಡೆಯಲು ಜೆಡಿಎಸ್–ಬಿಜೆಪಿ ಕಾರ್ಯಕರ್ತರು ನಿಖಿಲ್‌ನನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಕೆ. ಗೋಪಾಲಯ್ಯ, ಮಾಜಿ ಸಚಿವವರಾದ ಸಿ.ಎಸ್. ಪುಟ್ಟರಾಜು, ಎಚ್.ಕೆ. ಕುಮಾರಸ್ವಾಮಿ, ಮುಖಂಡರಾದ ಶ್ರೀಕಂಠೇಗೌಡ, ಅಬ್ದುಲ್ ಅಜೀಂ, ಎ. ಮಂಜುನಾಥ್, ಬಂಡೆಪ್ಪ ಕಾಶೆಂಪೂರ್, ಸಾ.ರಾ. ಮಹೇಶ್, ವೆಂಕಟರಾವ್ ನಾಡಗೌಡ, ಬಿಜೆಪಿಯ ಹುಲುವಾಡಿ ರಮೇಶ್ ಸೇರಿದಂತೆ ಮೈತ್ರಿ ನಾಯಕರು ವಿವಿಧೆಡೆ ನಡೆದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ನನ್ನ ಸಂಬಂಧ ಚನ್ನಾಗಿದೆ. ಮುಂದೆಯೂ ಚೆನ್ನಾಗಿರುತ್ತದೆ. ನಮ್ಮಿಬ್ಬರದು ರಾಜಕಾರಣಕ್ಕೆ ಮೀರಿದ ಸಂಬಂಧ. ರಾಜ್ಯದ ಮುಖ್ಯಮಂತ್ರಿಗೆ ಇರುವ ಗರ್ವದ ಸೊಕ್ಕನ್ನು ಮುರಿಯಬೇಕುಎಚ್.ಡಿ. ದೇವೇಗೌಡ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ
ಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಚನ್ನಪಟ್ಟಣ ಸೇರಿದಂತೆ ಶಿಗ್ಗಾವಿ ಸಂಡೂರು ಕ್ಷೇತ್ರಗಳಲ್ಲಿ ಎನ್‌ಡಿಎ ಜಯ ಗಳಿಸಲಿದೆ. ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಲಿದೆ.ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಯೋಗೇಶ್ವರ್ ಕಾಂಗ್ರೆಸ್‌ಗೆ ಹೋಗುವುದು ಎರಡು ತಿಂಗಳು ಮುಂಚೆಯೇ ಫಿಕ್ಸ್ ಆಗಿತ್ತು. ಅವರು ಗೆದ್ದರೆ ಅದು ಡಿ.ಕೆ ಸಹೋದರರ ಗೆಲುವಾಗುತ್ತದೆ. ಬಳಿಕ ಅವರು ನಿಮ್ಮೂರಿಗೆ ಬಂದು ಬೇಲಿ ಹಾಕುತ್ತಾರೆ. ಅದಕ್ಕೆ ಅವಕಾಶ ಕೊಡದೆ ನಿಖಿಲ್ ಗೆಲ್ಲಿಸಿಛಲವಾದಿ ನಾರಾಯಣಸ್ವಾಮಿ ವಿರೋಧ ಪಕ್ಷದ ನಾಯಕ ವಿಧಾನ ಪರಿಷತ್
ಬಿಜೆಪಿ–ಜೆಡಿಎಸ್‌ನಿಂದ ನನಗೆ ಮೋಸವಾಗಿದೆ ಎನ್ನುತ್ತಿರುವ ಯೋಗೇಶ್ವರ್ ನಮಗೆ ವಿಶ್ವಾಸದ್ರೋಹ ಮಾಡಿದ್ದಾರೆ. ಬಿಜೆಪಿಯಿಂದಲೇ ಸ್ಪರ್ಧಿಸುವುದಾಗಿದ್ದರೆ ಯಾಕೆ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು?ಆರ್. ಅಶೋಕ ಬಿಜೆಪಿ ವಿರೋಧ ಪಕ್ಷದ ನಾಯಕ
‘ಎತ್ತಿನಹೊಳೆ ನೀರು ಬಂದರೆ ಧೀರ್ಘದಂಡ ನಮಸ್ಕಾರ’
‘ರಾಜ್ಯದ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದರೂ ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ. ಎತ್ತಿನಹೊಳೆ ನೀರು ಕೋಲಾರಕ್ಕೆ ಬಂದರೆ ನಾನು ಇವರಿಗೆ ದೀರ್ಘದಂಡ ನಮಸ್ಕಾರ ಮಾಡುತ್ತೇನೆ’ ಎಂದು ವ್ಯಂಗ್ಯವಾಡಿದ ದೇವೇಗೌಡರು ‘ಈ ಮಹಾನುಭಾವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ತರುತ್ತಾರಂತೆ? ಹೇಗೆ ತರುತ್ತಾರೆ? ಬರೀ ಸುಳ್ಳು– ಪೊಳ್ಳು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ?’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಾಮಾಣಿಕ ಸೇವೆ ಮಾಡಲು ಬಂದಿದ್ದೇನೆ’ ‘ನಾನು ಜನಪ್ರತಿನಿಧಿಯಾಗಬೇಕೆಂಬ ಬಯಕೆಗೆ ಬಂದಿಲ್ಲ. ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ಎರಡು ಸಲ ಸೋಲಿನ ಕಹಿ ಅನುಭವಿಸಿರುವ ನನಗೆ ಮೂರನೇ ಬಾರಿಯೂ ಸೋಲಾಗಬಾರದು ಎಂದು ರಾಜ್ಯದ ಮೂಲೆಗಳಿಂದಲೂ ಎರಡೂ ಪಕ್ಷದ ಕಾರ್ಯಕರ್ತರ ದಂಡು ಬಂದು ಪ್ರಚಾರ ಮಾಡುತ್ತಿದೆ. ಕ್ಷೇತ್ರಕ್ಕೆ ಒಂದೂವರೆ ಸಾವಿರ ಕೋಟಿಯಷ್ಟು ಅನುದಾನ ತಂದಿದ್ದು ಕುಮಾರಣ್ಣ. ಆ ಬಗ್ಗೆ ನಮ್ಮ ಕುಟುಂಬ ಪ್ರಚಾರ ಪಡೆಯಲಿಲ್ಲ. ಪ್ರತಿ ಹಳ್ಳಿಗಳಲ್ಲಿರುವ ಸಿ.ಸಿ ರಸ್ತೆ ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಮಾವು ಸಂಸ್ಕರಣ ಘಟಕ ಕೆರೆಗಳಿಗೆ ನೀರು ತುಂಬಿಸಿ ರೈತರ ಬದುಕು ಹಸನು ಮಾಡುವ ಕೆಲಸಗಳನ್ನು ನಮ್ಮ ಕುಟುಂಬ ಮಾಡುತ್ತಿದೆ’ ಎಂದು ವಿವಿಧೆಡೆ ನಡೆದ ಪ್ರಚಾರಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದರು. ‘ಚನ್ನಪಟ್ಟಣ–ರಾಮನಗರ ಮಧ್ಯೆ ಕೈಗಾರಿಕೆ’ ‘ಪ್ರಧಾನಿ ನರೇಂದ್ರ ಮೋದಿ ಅವರ ಮೆಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಡಿ ಚನ್ನಪಟ್ಟಣ-ರಾಮನಗರಗಳ ನಡುವೆ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಕ್ಷುಲ್ಲಕ ವಿಷಯಗಳನ್ನು ಇಟ್ಟುಕೊಂಡು ನಾನು ರಾಜಕೀಯ ಮಾಡುವುದಿಲ್ಲ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬೇಕು ಕೈಗಾರಿಕಾ ಉತ್ಪನ್ನ ಹೆಚ್ಚಳದ ಮೂಲಕ ದೇಶದ ಆರ್ಥಿಕತೆಗೆ ಶಕ್ತಿ ತುಂಬಬೇಕು ಎನ್ನುವುದು ಪ್ರಧಾನಿ ಮೋದಿ ಅವರ ಆಶಯ. ಆ ನಿಟ್ಟಿನಲ್ಲಿ ಚನ್ನಪಟ್ಟಣ ರಾಮನಗರ ಸುತ್ತಮುತ್ತ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು’ ಎಂದು ಕೇಂದ್ರ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ನಿಖಿಲ್ ಪರ ಸೋಮಣ್ಣ ಪ್ರಚಾರ
ನಿಖಿಲ್ ಕುಮಾರಸ್ವಾಮಿ ಪರ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಚನ್ನಪಟ್ಟಣದಲ್ಲಿ ಸೋಮವಾರ ಭರ್ಜರಿ ಪ್ರಚಾರ ನಡೆಸಿದರು. ಬೀದಿಗಳಲ್ಲಿ ರೋಡ್ ಷೋ ನಡೆಸಿದ ಅವರು ಮನೆಮನೆಗೆ ತೆರಳಿ ಕರಪತ್ರ ವಿತರಿಸಿ ಮತ ಯಾಚಿಸಿದರು. ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಅವರಿಗೆ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಸೋಮಣ್ಣ ‘ಪ್ರಧಾನಿ ಮೋದಿ ಅವರು ಜನಪರ ಯೋಜನೆಗಳೊಂದಿಗೆ ಪಾರದರ್ಶಕವಾಗಿ ಆಡಳಿತ ನಡೆಸುತ್ತಾ ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿ ಮಾಡುತ್ತಿದ್ದಾರೆ. ಅವರ ಆಡಳಿತ ವೈಖರಿ ಮೆಚ್ಚಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದ್ದಾರೆ. ಈ ಮೂವರು ನಾಯಕರ ಮಾರ್ಗದರ್ಶನದಲ್ಲಿ ನಿಖಿಲ್ ಅವರು ಜಯಭೇರಿ ಬಾರಿಸುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.