ಚನ್ನಪಟ್ಟಣ (ರಾಮನಗರ): ‘ಕಾಂಗ್ರೆಸ್‌ನವರು ಇಟಲಿ ಮೂಲದ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರನ್ನು ಕೇರಳದ ವಯನಾಡ್‌ಗೆ ಕರೆತಂದು ಲೋಕಸಭಾ ಉಪ ಚುನಾವಣೆಗೆ ನಿಲ್ಲಿಸುವುದು ವಲಸೆಯಾಗುವುದಿಲ್ಲವೇ...?’ ತಮ್ಮನ್ನು ವಲಸಿಗರು ಎನ್ನುತ್ತಿರುವ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿದ ತಿರುಗೇಟು ಇದು.
ತಾಲ್ಲೂಕಿನ ಸಿದ್ದೇಗೌಡನ ದೊಡ್ಡಿಯಲ್ಲಿ ಮಂಗಳವಾರ ಮಧ್ಯಾಹ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಮತ ಯಾಚಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಮನಗರ ಜಿಲ್ಲೆಯಲ್ಲಿ ರಾಜಕೀಯ ಬದುಕು ಕಟ್ಟಿಕೊಂಡಿರುವ ಕನ್ನಡಿಗನಾದ ನಾನು ಹಾಗೂ ಉಪ ಚುನಾವಣೆಗೆ ಸ್ಪರ್ಧಿಸಿರುವ ನನ್ನ ಪುತ್ರ ಅದ್ಹೇಗೆ ವಲಸಿಗರಾಗುತ್ತೇವೆ ಎಂಬುದಕ್ಕೆ ಕಾಂಗ್ರೆಸ್‌ನವರು ಉತ್ತರಿಸಬೇಕು’ ಎಂದು ಸವಾಲು ಹಾಕಿದರು.
‘ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಾದರೂ ಸಂಪೂರ್ಣವಾದ ಬದುಕು ರಾಮನಗರ ಜಿಲ್ಲೆಯಲ್ಲಿದೆ. ಕೇತಗಾನಹಳ್ಳಿಯಲ್ಲೇ ನಾನು ಮಣ್ಣಾಗುತ್ತೇನೆ. ಇಂತಹ ಟೀಕೆಗಳಿಗೆ ನಾನು ಕುಗ್ಗುವುದಿಲ್ಲ. ಕಾಂಗ್ರೆಸ್‌ನವರು ಏನೇ ಕುತಂತ್ರ ಮಾಡಿದರೂ ಜನ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‌ಗೆ ಮತ ಹಾಕುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಚುನಾವಣೆಗೆ ಕುಮಾರಸ್ವಾಮಿ ಹಣ ತಂದು ಸುರಿಯುತ್ತಿದ್ದಾರೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟರ ಹಣ ಲೂಟಿ ಹೊಡೆದು ಚುನಾವಣೆಗೆ ಬಳಸಿದ್ದು ಯಾರು? ಉಕ್ಕು ಸಚಿವನಾಗಿ ನಾನು ಹಣ ಪ್ರಿಂಟ್ ಮಾಡ್ತೀನಾ? ಯಾವ ನೈತಿಕತೆ ಇಟ್ಟುಕೊಂಡು ಹಣದ ಬಗ್ಗೆ ಮಾತನಾಡುತ್ತಾರೆ? ಕಾಂಗ್ರೆಸ್‌ನವರು ಇಂತಹ ಅಪಪ್ರಚಾರದಲ್ಲಿ ನಿಸ್ಸೀಮರು’ ಎಂದು ತರಾಟೆಗೆ ತೆಗೆದುಕೊಂಡರು.
ಸ್ಥಳೀಯ ಮುಖಂಡರೊಂದಿಗೆ ಕ್ಷೇತ್ರದ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಎಚ್‌ಡಿಕೆ ಪ್ರಚಾರ ನಡೆಸಿದರು.
ಎರಡು ಸಲ ಪೆಟ್ಟು ತಿಂದಿದ್ದೇನೆ: ‘ಚಿಕ್ಕ ವಯಸ್ಸಿನಲ್ಲಿ ಎರಡು ಚುನಾವಣೆ ಎದುರಿಸಿ ಪೆಟ್ಟು ತಿಂದಿದ್ದೇನೆ. ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಿದ್ದೀರಿ. ಎಲ್ಲರಿಗೂ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಕಾರ್ಯಕರ್ತರ ಒತ್ತಡದ ಮೇರೆಗೆ ನಿಮ್ಮನ್ನು ನಂಬಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಇದು ಎನ್‌ಡಿಎ ಕುಟುಂಬದ ಅಗ್ನಿಪರೀಕ್ಷೆ. ನನಗೆ ಮತ ಹಾಕಿ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ’ ಎಂದು ನಿಖಿಲ್ ಕುಮಾರಸ್ವಾಮಿ ವಳೆಗೆರೆದೊಡ್ಡಿಯಲ್ಲಿ ಮನವಿ ಮಾಡಿದರು. ಗ್ರಾಮಕ್ಕೆ ಬಂದ ನಿಖಿಲ್ ಅವರನ್ನು ಕಾರ್ಯಕರ್ತರು ಬೈಕ್ ರ‍್ಯಾಲಿಯಲ್ಲಿ ಕರೆದೊಯ್ದರು.
‘ಪಕ್ಷಾಂತರಿ ಆಗಿರುವುದಕ್ಕೆ ಮುಜುಗರವಿಲ್ಲ’
‘ನಾನು ಪಕ್ಷಾಂತರಿ ಎಂಬುದು ಜಗಜ್ಜಾಹೀರು. ಅದಕ್ಕೆ ನನಗೆ ಮುಜುಗರವಿಲ್ಲ. ಅಭಿವೃದ್ಧಿಗಾಗಿ ಪಕ್ಷಾಂತರ ಮಾಡಿದ ನನ್ನನ್ನು ಜನರು ಪಕ್ಷದ ಮುಖ ನೋಡದೆ ಗೆಲ್ಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ, ಅಭಿವೃದ್ಧಿಗಾಗಿ ಮತ್ತೆ ಕಾಂಗ್ರೆಸ್ ಸೇರಿದ್ದೇನೆ. ಎರಡು ಬಾರಿ ಸೋತಿರುವ ನನ್ನನ್ನು ಮತ್ತೆ ಗೆಲ್ಲಿಸಿದರೆ ಮತ್ತಷ್ಟು ಕೆರೆಗಳಿಗೆ ನೀರು ತುಂಬಿಸಿ, ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರವಸೆ ನೀಡಿದರು.
ತಾಲ್ಲೂಕಿನ ಮಾಕಳಿಯಲ್ಲಿ ದಿನದ ಪ್ರಚಾರ ಶುರು ಮಾಡಿ ಮಾತನಾಡಿದ ಅವರು, ‘ಎರಡು ಸಲ ಗೆದ್ದಿರುವ ಕುಮಾರಸ್ವಾಮಿ ಅವರು ಏನೂ ಕೆಲಸ ಮಾಡಿಲ್ಲ. ಹಿಂದೆ ನಾನು ತಂದಿದ್ದ ಅನುದಾನವನ್ನೇ ಸರಿಯಾಗಿ ಬಳಸದ ಅವರು, ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ಹೋಗಿ ಉಪ ಚುನಾವಣೆಗೆ ಮಗನನ್ನು ತಂದು ನಿಲ್ಲಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. ಬೆಳಗ್ಗೆಯಿಂದ ಸಂಜೆವರೆಗೆ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತಯಾಚಿಸಿದರು. ಶಾಸಕ ಡಾ.ರಂಗನಾಥ್, ಮಾಜಿ ಸಂಸದ ಡಿ.ಕೆ.ಸುರೇಶ್, ಮಾಜಿ ಶಾಸಕ ಎಂ.ಸಿ.ಅಶ್ವಥ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಹಾಗೂ ಸ್ಥಳೀಯ ಮುಖಂಡರು ಸಾಥ್ ನೀಡಿದರು.
ಮುಂದೆ ಜೆಡಿಎಸ್– ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ರಾಮನಗರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಲಾಗುವುದುಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ರಾಮನಗರದಲ್ಲಿ ಪುತ್ರನ ಸೋಲಿನ ಬಳಿಕ ಅಲ್ಪಸಂಖ್ಯಾತರ ಮತಗಳೇ ಬೇಡ ಎಂದಿದ್ದವರು, ಈಗ ಅದ್ಯಾವ ಮುಖವಿಟ್ಟುಕೊಂಡು ಅವರ ಬಳಿ ಮತ ಕೇಳುತ್ತಾರೆ?ಎಚ್.ಎ. ಇಕ್ಬಾಲ್ ಹುಸೇನ್,ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.