ADVERTISEMENT

Channapatna Bypoll | ನಿಖಿಲ್‌ ನಾಮಪತ್ರದಲ್ಲಿ ಮೈತ್ರಿ ಶಕ್ತಿ ಪ್ರದರ್ಶನ

ಮೂರನೇ ಸಲ ಅದೃಷ್ಟ ಪರೀಕ್ಷೆಗಿಳಿದ ನಿಖಿಲ್ * ರೋಡ್‌ ಷೋದಲ್ಲಿ ಜೆಡಿಎಸ್–ಬಿಜೆಪಿ ನಾಯಕರು ಭಾಗಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:30 IST
Last Updated 26 ಅಕ್ಟೋಬರ್ 2024, 0:30 IST
ಚನ್ನಪಟ್ಟಣ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಪತ್ನಿ ರೇವತಿ, ತಂದೆ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸಾಥ್ ನೀಡಿದರು
ಚನ್ನಪಟ್ಟಣ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಪತ್ನಿ ರೇವತಿ, ತಂದೆ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸಾಥ್ ನೀಡಿದರು   

ಚನ್ನಪಟ್ಟಣ (ರಾಮನಗರ): ಉಪ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಚುನಾವಣಾ ಸಮರದಲ್ಲಿ ಮೂರನೇ ಸಲ ಅದೃಷ್ಟ ಪರೀಕ್ಷೆಗಿಳಿದಿರುವ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಎರಡೂ ಪಕ್ಷಗಳ ಭಾರಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ನಿಖಿಲ್ ತಂದೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಂಸದರಾದ ಡಾ.ಸಿ.ಎನ್.ಮಂಜುನಾಥ್, ಬಿ.ವೈ.ರಾಘವೇಂದ್ರ, ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸೇರಿದಂತೆ ಮೈತ್ರಿಕೂಟದ ನಾಯಕರ ದಂಡು ರೋಡ್‌ ಷೋಗೆ ಶಕ್ತಿ ತುಂಬಿತು.

ಬೈಕ್ ರ‍್ಯಾಲಿ: ತಾಲ್ಲೂಕಿನ ಕೆಂಗಲ್‌ನ ಆಂಜನೇಯ ದೇವಸ್ಥಾನದಲ್ಲಿ ಕುಟುಂಬದೊಂದಿಗೆ ಬೆಳಗ್ಗೆ ಪೂಜೆ ಸಲ್ಲಿಸಿದ ನಿಖಿಲ್ ಅವರನ್ನು ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಚನ್ನಪಟ್ಟಣದವರೆಗೆ ಕರೆದೊಯ್ದರು. ಶೇರು ಹೋಟೆಲ್‌ನಲ್ಲಿ ಅಷ್ಟೊತ್ತಿಗಾಗಲೇ ಜಮಾಯಿಸಿದ್ದ ಸಾವಿರಾರು ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಸಿಕ್ಕಿತು.

ತೆರೆದ ವಾಹನದಲ್ಲಿ ನಡೆದ ರೋಡ್ ಷೋನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬಾವುಟಗಳು ರಾರಾಜಿಸಿದವು. ಜಾನಪದ ಕಲಾತಂಡಗಳು ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದವು. ಪ್ರಧಾನಿ ಮೋದಿ, ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಪರ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿದವು. ಸಾತನೂರು ವೃತ್ತದಲ್ಲಿ ನಾಯಕರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ADVERTISEMENT

ಹೆಗಲ ಮೇಲೆ ಹೊತ್ತೊಯ್ದರು: ತಂದೆ, ಪತ್ನಿ ಹಾಗೂ ಬಿಜೆಪಿ ನಾಯಕರೊಂದಿಗೆ ಚುನಾವಣಾಧಿಕಾರಿಗೆ ಮೂರು ಪ್ರತಿ ನಾಮಪತ್ರ ಸಲ್ಲಿಸಿ ಹೊರಬಂದ ನಿಖಿಲ್ ಅವರನ್ನು ಕಾರ್ಯಕರ್ತರು, ಹೆಗಲ ಮೇಲೆ ಹೊತ್ತುಕೊಂಡು ವಾಹನದವರೆಗೆ ಕರೆದೊಯ್ದರು. ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರ ನಾಮಪತ್ರ ಸಲ್ಲಿಕೆ ರೋಡ್ ಷೋ ಮಂಗಳವಾರಪೇಟೆಯಿಂದ ಶುರುವಾಗಿ ಗಾಂಧಿ ಭವನ ಸರ್ಕಲ್‌ನಲ್ಲಿ ನಾಯಕರ ಭಾಷಣಕ್ಕೆ ಸಾಕ್ಷಿಯಾಯಿತು. ನಿಖಿಲ್ ಅವರ ರೋಡ್ ಷೋ ಅದಕ್ಕೆ ವಿರುದ್ಧವಾಗಿ ಶೇರು ಹೋಟೆಲ್‌ನಿಂದ ಆರಂಭವಾಯಿತು. ಸಾತನೂರು ವೃತ್ತದಲ್ಲಿ ನಾಯಕರ ಭಾಷಣ ಕಾರ್ಯಕ್ರಮ ಮುಗಿದ ಬಳಿಕ ಚುನಾವಣಾಧಿಕಾರಿ ಕಚೇರಿಯತ್ತ ಸಾಗಿತು.

ಚನ್ನಪಟ್ಟಣ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆಗೆ ಮುಂಚೆ ನಡೆದ ರೋಡ್‌ ಷೋದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರು
ನೀವು ನನ್ನ ಹಾಗೂ ಕುಟುಂಬದ ಮೇಲಿಟ್ಟಿರುವ ಅಭಿಮಾನವೇ ನನಗೆ ಶ್ರೀರಕ್ಷೆ. ಈ ಚುನಾವಣೆಯಲ್ಲಿ ನೀವು ಕೈಗೊಳ್ಳುವ ತೀರ್ಮಾನವು ಹಿಂದಿನ ಚುನಾವಣೆಗಳ ಸೋಲಿನ ಕಹಿ ಅಳಿಸುತ್ತದೆ ಎಂಬ ವಿಶ್ವಾಸ ನನಗಿದೆ
ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ
ಚನ್ನಪಟ್ಟಣ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆಯ ರೋಡ್‌ ಷೋದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಇತರರು ಇದ್ದಾರೆ
ಲೋಕಸಭಾ ಚುನಾವಣೆಯ ಗೆಲುವಿನ ಯಾತ್ರೆ ಉಪ ಚುನಾವಣೆಯಲ್ಲೂ ಮುಂದುವರಿಯಬೇಕು. ಅದಕ್ಕಾಗಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಹೃದಯಗಳು ಒಂದಾಗಬೇಕು
ಡಾ. ಸಿ.ಎನ್.ಮಂಜುನಾಥ್ ಸಂಸದ
ಕಾಂಗ್ರೆಸ್‌ನವರು ಸಂಜೆ 6ರ ಬಳಿಕ ಹೈ ವೋಲ್ಟೇಜ್ ಆಗಿರುತ್ತಾರೆ. ಆದರೆ ಬಿಜೆಪಿ–ಜೆಡಿಎಸ್‌ನವರು ದಿನದ 24 ತಾಸು ಚುನಾವಣಾ ಹೈ ವೋಲ್ಟೇಜ್‌ನಲ್ಲಿದ್ದು ಎನ್‌ಎಡಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತಾರೆ
ಬಿ.ವೈ.ರಾಘವೇಂದ್ರ ಸಂಸದ
ಹಣ ಬಲದ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚುನಾವಣೆ ಮಾಡಲು ಹೊರಟಿದ್ದಾರೆ. ಅದಕ್ಕೆ ನಮ್ಮ ಘೋಷಣೆ ‘ಡಿಕೆಶಿ ನೋಟು ನಿಖಿಲ್‌ಗೆ ವೋಟು’ ಎಂಬುದಾಗಿರಬೇಕು
ಡಾ.ಸಿ.ಎನ್.ಅಶ್ವತ್ಥ ನಾರಾಯಣ ಬಿಜೆಪಿ ಶಾಸಕ

ಕುತಂತ್ರಕ್ಕೆ ಅಂತ್ಯ ಹಾಡಲು ಸಿದ್ಧ: ಎಚ್‌ಡಿಕೆ ಗುಡುಗು

‘ಕಾಂಗ್ರೆಸ್‌ನ ರಾಜಕೀಯ ಕುತಂತ್ರಕ್ಕೆ ಅಂತ್ಯ ಹಾಡಲು ಚನ್ನಪಟ್ಟಣದ ಜನ ಸಿದ್ಧರಾಗಿದ್ದಾರೆ. ನಮ್ಮ ಕಾರ್ಯಕರ್ತರಿಗೆ ನೋವು ಕೊಟ್ಟರೂ ನೀವೇ ಅಭ್ಯರ್ಥಿಯಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲಿ ಎಂದು ಈಗಿನ ಕಾಂಗ್ರೆಸ್ ಅಭ್ಯರ್ಥಿಗೆ (ಸಿ.ಪಿ.ಯೋಗೇಶ್ವರ್) ಹೇಳಿದ್ದೆ. ಆದರೆ ಜೆಡಿಎಸ್ ಮತ್ತು ಬಿಜೆಪಿಗೆ ಟೋಪಿ ಹಾಕಿದರು’ ಎಂದು ಯೋಗೇಶ್ವರ್ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ‘ನಿಮ್ಮ ಒತ್ತಾಯದಂತೆ ನಿಖಿಲ್‌ನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಬಡವರ ಪರ ಆಡಳಿತಕ್ಕಾಗಿ ನನಗೆ ಆಶೀರ್ವದಿಸಿದಂತೆ ಆತನಿಗೂ ಆಶೀರ್ವದಿಸಿ. ನಿಮ್ಮ ನಿರ್ಣಯ ರಾಜ್ಯದಲ್ಲಿ ಬದಲಾವಣೆ ತರಲಿದೆ. ಇಂದು ಮುಸ್ಲಿಂ ಸಮುದಾಯದವರು ಸಹ ಬಂದು ಶಕ್ತಿ ನೀಡಿದ್ದಾರೆ. ಜಿಲ್ಲೆಗೆ ನಾನೇನು ಮಾಡಿದ್ದೇನೆ ಎಂದು ಸಾಕ್ಷಿಗುಡ್ಡೆ ಕೇಳುತ್ತಿರುವವರು ರೇಷ್ಮೆ ಮಾರುಕಟ್ಟೆ ಎಂಜಿನಿಯರಿಂಗ್ ಕಾಲೇಜು ಮಾವು ಸಂಸ್ಕರಣಾ ಘಟಕ ಯಾರಿಂದ ಬಂತು ಎಂದು ಪ್ರಶ್ನಿಸಿಕೊಳ್ಳಲಿ. ನನ್ನ ಹಳೆ ಗೆಳೆಯರು ಯೋಗೇಶ್ವರ್ ಅವರನ್ನು ತಬ್ಬಿಕೊಂಡು ತಿರುಗುತ್ತಿರುವುದನ್ನು ನೋಡಿದರೆ ನಗು ಬರುತ್ತದೆ. ಅವರ ಆಟವನ್ನು ದೇವರು ಗಮನಿಸುತ್ತಿದ್ದಾನೆ’ ಎಂದರು.

‘2028ರ ಚುನಾವಣೆ ದಿಕ್ಸೂಚಿ’ ‘ಉಪ ಚುನಾವಣೆಯು 2028ರ ಚುನಾವಣೆ ದಿಕ್ಸೂಚಿಯಾಗಲಿದೆ. ಸತತ ಎರಡು ಬಾರಿ ಸೋತರೂ ಬಿಜೆಪಿ–ಜೆಡಿಎಸ್‌ ಗೌರವ ಉಳಿಸಲು ಕಣಕ್ಕಿಳಿದಿರುವ ನಿಖಿಲ್ ಕುಮಾರಸ್ವಾಮಿ ಅವರ ಎದೆಗಾರಿಕೆ ಹಾಗೂ ಛಲ ಮೆಚ್ಚಬೇಕು. ಕುಮಾರಸ್ವಾಮಿ ಅವರಿಗೆ ಸೇರಿದ ಕ್ಷೇತ್ರವನ್ನು ಮತ್ತೆ ಅವರ ಕೈಸೇರಲು ಎರಡೂ ಪಕ್ಷದವರು ಶ್ರಮಿಸಬೇಕು. ಅಧಿಕಾರ ಹಾಗೂ ದರ್ಪದಿಂದ ಚುನಾವಣೆ ಗೆಲ್ಲಬಹುದು ಎಂದುಕೊಂಡಿರುವರನ್ನು ಸೋಲಿಸಿ ದೇಶಕ್ಕೆ ಸಂದೇಶ ನೀಡಬೇಕು’ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ಒಟ್ಟು 45 ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ ಒಟ್ಟು 45 ಮಂದಿಯಿಂದ 62 ನಾಮಪತ್ರಗಳು ಸಲ್ಲಿಕೆಯಾಗಿವೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪ್ರಮುಖರು. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್​ ಹೊರತಾಗಿ ಬಂಡಿ ಮಂಜುನಾಥಯ್ಯ ಎನ್ನುವರು ಭಾರತೀಯ ಜನತಾ ಪಾರ್ಟಿಯಡಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಎಸ್‌ಡಿಪಿಐ ಉತ್ತಮ ಪ್ರಜಾಕೀಯ ಸೇರಿ ಸಣ್ಣ ಪಕ್ಷಗಳ ಕೆಲವರು ಹಾಗೂ ಪಕ್ಷೇತರರಾಗಿ 36 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅ. 28ಕ್ಕೆ ಪರಿಶೀಲನೆ ನಡೆಯಲಿದ್ದು ನಾಮಪತ್ರ ಹಿಂಪಡೆಯಲು ಅ. 30 ಕೊನೆಯ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.