ಬಿಡದಿ (ರಾಮನಗರ): ‘ರಾಜ್ಯದ ಮೂರು ಉಪ ಚುನಾವಣೆಗಳ ಪೈಕಿ ಚನ್ನಪಟ್ಟಣ ಅತ್ಯಂತ ಕುತೂಹಲ ಕೆರಳಿಸಿತ್ತು. ಕಡೆ ಗಳಿಗೆಯಲ್ಲಿ ಜನರ ತೀರ್ಮಾನ ಹಾಗೂ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಮಾತಿಗೆ ತಲೆಬಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿದೆ. ಕ್ಷೇತ್ರದ ಫಲಿತಾಂಶವು ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಆಘಾತ ನೀಡಿದೆ’ ಎಂದು ಚನ್ನಪಟ್ಟಣ ಉಪ ಚುನಾವಣೆಯ ಪರಾಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಫಲಿತಾಂಶವನ್ನು ವಿಶ್ಲೇಷಿಸಿದರು.
ಉಪ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು? ಏನಾಗಬೇಕು ಎಂಬ ತೀರ್ಮಾನ ಕೊಡುವ ಶಕ್ತಿ ಇರುವುದು ಮತದಾರರಿಗೆ. ಅವರು ಕೊಟ್ಟಿರುವ ತೀರ್ಪಿಗೆ ನಾವು ತಲೆ ಬಾಗುತ್ತೇನೆ. ನನಗೆ ಸುಮಾರು 87 ಸಾವಿರ ಮತಗಳು ಬಂದಿರುವುದರ ಹಿಂದೆ ಎರಡೂ ಪಕ್ಷಗಳ ಕಾರ್ಯಕರ್ತರ ಶ್ರಮವಿದೆ’ ಎಂದರು.
‘ಈ ಉಪ ಚುನಾವಣೆ ನನ್ನ ಪಾಲಿಗೆ ಬಯಸದೆ ಬಂದಂತಹದ್ದು. ಕಡೆಯ ಹಂತದ ಬೆಳವಣಿಗೆಯಲ್ಲಿ ಹಿರಿಯರು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧವಾಗಿ ನಾನು ಸ್ಪರ್ಧಿಸಿದೆ. ಜಿಲ್ಲೆಯು ರಾಜಕೀಯವಾಗಿ ನಮ್ಮ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಿದೆ. ಹಾಗಾಗಿ, ಇಲ್ಲಿನ ಕಾರ್ಯಕರ್ತರ ಭಾವನೆಗೆ ಬೆಲೆ ಕೊಟ್ಟು ಸ್ಪರ್ಧಿಸಿದೆ’ ಎಂದು ಹೇಳಿದರು.
‘ಕಳೆದ 40 ವರ್ಷಗಳಿಂದ ಜಿಲ್ಲೆಯವರು ನಮ್ಮ ಕುಟುಂಬಕ್ಕೆ ಆಶೀರ್ವಾದ ಮಾಡಿಕೊಂಡು ಬಂದಿದ್ದಾರೆ. ಆ ಋಣವನ್ನು ತೀರಿಸುವ ಕೆಲಸವನ್ನು ಮಾಡುತ್ತೇವೆ. ನಾವು ಕೊಟ್ಟಿರುವ ಮಾತನ್ನು ಎಂದಿಗೂ ಮರೆಯುವುದಿಲ್ಲ. ನಾನು ಈ ಜಿಲ್ಲೆಯ ಮಗ ಎಂಬ ಹೆಮ್ಮೆ ಇದೆ. ನಮ್ಮ ಜಿಲ್ಲೆಯ ಕಾರ್ಯಕರ್ತರ ಗೌರವಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ’ ಎಂದು ತಿಳಿಸಿದರು.
‘ಸೋತು ಮೂಲೆಯಲ್ಲಿ ಕೂರುವವರು ಹೋರಾಟಗಾರರಾಗುವುದಿಲ್ಲ. ನಾನು ಸತತವಾಗಿ ಮೂರು ಸಲ ಸೋತಿದ್ದೇನೆ ನಿಜ. ಹಾಗಂತ ನಾನು ಸುಮ್ಮನೆ ಕೂರುವವನಲ್ಲ. ಈ ಸಮಾಜಕ್ಕಾಗಿ ನನ್ನ ಹೋರಾಟ ನಿರಂತರವಾಗಿರಲಿದೆ. ಜನರ ತೀರ್ಪು ಗೌರವಿಸಬೇಕು. ಈಗ ಯಾವುದನ್ನೂ ದೂರುವುದರಿಂದ ಪ್ರಯೋಜನವಿಲ್ಲ. ಆಗಿರುವುದರ ಬಗ್ಗೆ ಪೋಸ್ಟ್ ಮಾರ್ಟಮ್ ಮಾಡಿಕೊಂಡು ಕೂರುವುದಿಲ್ಲ. ನಾವು ಎಲ್ಲಿ ಎಡವಿದ್ದೇವೆ, ಯಾವ ರೀತಿ ಸರಿಪಡಿಸಿಕೊಳ್ಳಬೇಕು ಎಂಬುದನ್ನು ಚರ್ಚಿಸಿ ಸರಿಪಡಿಸಿಕೊಳ್ಳುತ್ತೇವೆ’ ಎಂದು ನಿಖಿಲ್ ಹೇಳಿದರು.
‘ಕುಮಾರಣ್ಣನ ಅವಧಿಯಲ್ಲಿ ಕ್ಷೇತ್ರಕ್ಕೆ ಸುಮಾರು ₹1,500 ಕೋಟಿ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಆದರೆ, ನಮ್ಮಲ್ಲಿ ಪ್ರಚಾರದ ಕೊರತೆ ಇದೆ. ಅದು ನಮ್ಮಲ್ಲಿರುವ ದೊಡ್ಡ ಲೋಪ ಎಂಬುದು ನಮಗೆ ಅರಿವಾಗಿದೆ. ಕೆಲವರು ನೂರು ರೂಪಾಯಿ ಕೆಲಸ ಮಾಡಿದರೆ ಸಾವಿರದ ಪ್ರಚಾರ ಪಡೆಯುತ್ತಾರೆ. ನಾವು ಸಾವಿರದ ಕೆಲಸ ಮಾಡಿದರೂ ನೂರು ರೂಪಾಯಿಯ ಪ್ರಚಾರವನ್ನು ಸಹ ಪಡೆದಿಲ್ಲ. ನಮ್ಮಲ್ಲಿರುವ ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳಬೇಕಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಎರಡು ಸಲ ಸೋತೆ ಎಂದು ಜಿಲ್ಲೆ ಬಿಟ್ಟು ಬೇರೆ ಕಡೆ ಹೋಗಿ ಚುನಾವಣೆಗೆ ತಯಾರಿ ಮಾಡಿಕೊಳ್ಳುವ ಕುರಿತು ನಾನೆಂದು ಯೋಚಿಸಿಲ್ಲ. ನನಗೆ ಶಾಸಕ ಎಂಬ ಪಟ್ಟ ಇಲ್ಲವಷ್ಟೇ. ಆದರೆ, ಪಕ್ಷದ ಕಾರ್ಯಕರ್ತರ ಹೃದಯದಲ್ಲಿದ್ದೇನೆ. ಎಲ್ಲರೂ ಹೋಗದೆ ಅವರ ಜೊತೆಗಿದ್ದು ಋಣ ತೀರಿಸುವ ಕೆಲಸ ಮಾಡುವೆ– ನಿಖಿಲ್ ಕುಮಾರಸ್ವಾಮಿ, ಪರಾಜಿತ ಜೆಡಿಎಸ್ ಅಭ್ಯರ್ಥಿ, ಚನ್ನಪಟ್ಟಣ
‘ಕಣ್ಣೀರು ಹಾಕಿ ಮತ ಗಳಿಸುವ ಅನಿವಾರ್ಯತೆ ನಮಗಿಲ್ಲ. ಕೆಲ ಸಂದರ್ಭ ಮತ್ತು ಪರಿಸ್ಥಿತಿಗಳಲ್ಲಿ ನಾವು ಕೆಲ ಷಡ್ಯಂತ್ರಕ್ಕೆ ಒಳಗಾಗಿದ್ದರ ನೆನಪಾಗಿ ಭಾವೋದ್ವೇಗದಿಂದ ಕಣ್ಣೀರು ಬರುತ್ತದೆ. ಅದು ನಮ್ಮ ಎದುರಾಳಿಗಳಿಗೆ ಬೇರೆ ರೀತಿಯೇ ಕಾಣುತ್ತದೆ. ಜೆಡಿಎಸ್ ಮತ್ತು ಬಿಜೆಪಿಯವರು ಒಂದು ಕುಟುಂಬದಂತೆ, ಅವಲೋಕನ ಮಾಡಿಕೊಳ್ಳಬೇಕಿದೆ. ಫಲಿತಾಂಶ ಕುರಿತು ವಿಶ್ಲೇಷಿಸಿ ಎಲ್ಲಿ ಸಮಸ್ಯೆಯಾಗಿದೆ ಎಂಬುದರ ಕುರಿತು ಚರ್ಚಿಸಿ ಮುಂದುವರಿಯುತ್ತೇವೆ. ಸೋಲಿನಿಂದಾಗಿ ಕಾರ್ಯಕರ್ತರ ಭಾವನೆಗಳಿಗೆ ನೋವಾಗಿದ್ದು, ಅದಕ್ಕೆ ಸ್ಪಂದಿಸುವ ಕೆಲಸವನ್ನು ಮೊದಲು ಮಾಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.