ADVERTISEMENT

ಹಿಂದಿನಿಂದಲೂ ನಮ್ಮ ಜೊತೆಗಿದ್ದ ಮುಸ್ಲಿಮರು ಈ ಸಲ ಕೈ ಹಿಡಿಯಲಿಲ್ಲ: ನಿಖಿಲ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 10:37 IST
Last Updated 23 ನವೆಂಬರ್ 2024, 10:37 IST
<div class="paragraphs"><p>ನಿಖಿಲ್ ಕುಮಾರಸ್ವಾಮಿ</p></div>

ನಿಖಿಲ್ ಕುಮಾರಸ್ವಾಮಿ

   

– ಫೇಸ್‌ಬುಕ್ ಚಿತ್ರ

ಬಿಡದಿ (ರಾಮನಗರ): ’ಹಿಂದಿನಿಂದಲೂ ನಮ್ಮ ಜೊತೆಗಿದ್ದ ಅಲ್ಪಸಂಖ್ಯಾತರು ಈ ಸಲ ನಮ್ಮ ಕೈ ಹಿಡಿಯಲಿಲ್ಲ’ ಎಂದು ಚನ್ನಪಟ್ಟಣ ಉಪ ಚುನಾವಣೆಯ ಪರಾಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ADVERTISEMENT

ಉಪ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡೂ ಪಕ್ಷಗಳ ಕಾರ್ಯಕರ್ತರು ಯೋಧರಂತೆ ಕೆಲಸ ಮಾಡಿದರು. ಸೋಲು ಮತ್ತು ಗೆಲುವಿಗೆ ತನ್ನದೇ ಆದ ಕಾರಣಗಳಿರುತ್ತವೆ’ ಎಂದರು.

‘ಬಹುಶಃ ಒಂದು ಸಮುದಾಯದ (ಮುಸ್ಲಿಂ) ಮತಗಳು ಕಾಂಗ್ರೆಸ್ ಪರ ಕ್ರೋಢಿಕರಣಗೊಂಡವು. ನಮ್ಮ ಪಕ್ಷ ಅವರ ಪರವಾಗಿ ನಿಂತರೂ, ಮೀಸಲಾತಿ ಸೇರಿದಂತೆ ಎಷ್ಟೇ ಕೊಡುಗೆಗಳನ್ನು ನೀಡಿದರೂ ಅವರು ನಮ್ಮ ಕೈ ಹಿಡಿದಿಲ್ಲ. ಸಮುದಾಯವನ್ನು ಇದುವರೆಗೆ ನಾವು ನಂಬಿಕೊಂಡು ಬಂದಿದ್ದೆವು. ಈ ಸಲ ಅವರು ನಮ್ಮೊಂದಿಗೆ ನಿಲ್ಲದಿರುವುದು ಸಹ ಫಲಿತಾಂಶದ ಏರುಪೇರಿಗೆ ಕಾರಣವಿರಬಹುದು. ಅವರನ್ನು ಮೀರಿಯು ಪಕ್ಷದ ಬದ್ದ ಕಾರ್ಯಕರ್ತರಿದ್ದಾರೆ. ಅವರೇ ನಮ್ಮ ಬೆನ್ನೆಲುಬು. ಅವರು ಎಂದಿನಂತೆ ಈ ಚುನಾವಣೆಯಲ್ಲೂ ನಮ್ಮ ಕೈ ಹಿಡಿದಿದ್ದಾರೆ’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಮಗೆ ಸ್ವಾರ್ಥವಿದ್ದಿದ್ದರೆ ಗೆಲ್ಲುತ್ತಿದ್ದೆವು

‘ಇದು ಜೆಡಿಎಸ್ ಕ್ಷೇತ್ರ. ಯಾವುದೇ ಕಾರಣಕ್ಕೂ ಬಿಟ್ಟು ಕೊಡದೆ ನಾವೇ ಇಲ್ಲಿ ನಿಲ್ಲಬೇಕು ಎಂಬ ಸ್ವಾರ್ಥದಿಂದ ನಾವು ಚುನಾವಣೆ ಎದುರಿಸಿದ್ದರೆ ನಾನು ಖಂಡಿತಾ ಗೆಲ್ಲುತ್ತಿದ್ದೆ. ಯಾಕೆಂದರೆ, ಚುನಾವಣೆಗೆ ನಮಗೆ ಕನಿಷ್ಠ ನಾಲ್ಕು ತಿಂಗಳು ಸಮಯ ಸಿಗುತ್ತಿತ್ತು. ಆದರೆ, ನಾವು ಬಿಜೆಪಿ ಜೊತೆ ಮೈತ್ರಿಯಾಗಿದ್ದರಿಂದ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳದೆ ಮೈತ್ರಿ ಪಕ್ಷದ ನಾಯಕರ ಅಭಿಪ್ರಾಯ ಮತ್ತು ಭಾವನೆಗೂ ಗೌರವ ಕೊಡಬೇಕಿತ್ತು. ಅದೇ ಕಾರಣಕ್ಕೆ ನಾಮಪತ್ರ ಸಲ್ಲಿಸುವ ಹಿಂದಿನ ದಿನ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿತು’ ಎಂದು ನಿಖಿಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.