ಚನ್ನಪಟ್ಟಣ (ರಾಮನಗರ): ಪ್ರಾರಂಭಿಕ ಹಂತದಲ್ಲಿ ನನಗೆ ಉಪ ಚುನಾವಣೆ ಅಭ್ಯರ್ಥಿಯಾಗುವ ಬಗ್ಗೆ ಭಾವನೆಗಳು ಇರಲಿಲ್ಲ. ಆದರೆ, ಕೆಲ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ಭಾವನೆಗಳು ಬೆಲೆ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎದುರಿಸುವುದಕ್ಕೆ ತೀರ್ಮಾನಿಸಿದೆ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಕ್ಷೇತ್ರದ ಮತದಾನ ದಿನವಾದ ಬುಧವಾರ ತಾಲ್ಲೂಕಿನ ಕೆಂಗಲ್ ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈತ್ರಿ ಮುಖಂಡರು ಹಾಗೂ ಕಾರ್ಯಕರ್ತರು ಸತತ ಹದಿನೆಂಟು ದಿನ ನನ್ನ ಪರವಾಗಿ ಒಂದು ಕ್ಷಣವು ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಯಲ್ಲಿ ನನ್ನ ಪರ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ.
ಕಳೆದ ಆರೂವರೆ ವರ್ಷಗಳ ಕಾಲ ಕುಮಾರಣ್ಣ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರದುದ್ದಕ್ಕೂ ಪ್ರಸ್ತಾಪ ಮಾಡಿದ್ದೇನೆ. ಮತದಾರರು ಅವರ ಹೃದಯದಲ್ಲಿ ಒಂದು ಸ್ಥಾನ ಕೋಡ್ತಾರೆ ನೀಡುತ್ತಾರೆಂಬ ವಿಶ್ವಾಸ ಇದೆ ಎಂದರು.
ಮತದಾರರ ವಿಶ್ವಾಸ ಮೀರಿ ಸೇವೆ ಮಾಡುವ ದೃಢ ನಿರ್ಧಾರ ಮಾಡಿದ್ದೇನೆ. ಚನ್ನಪಟ್ಟಣದಲ್ಲಿ ಯುವ ಸಮುದಾಯ ಬಹಳ ದೊಡ್ಡ ಮಟ್ಟದಲ್ಲಿದೆ. ನಾನು ಹಳ್ಳಿಗಳಿಗೆ ಹೋದ ಸಂದರ್ಭದಲ್ಲಿ ಅಣ್ಣ- ತಮ್ಮಂದಿರಂತೆ ನನ್ನೊಂದಿಗೆ ಹೆಜ್ಜೆ ಹಾಕಿ ಪ್ರಚಾರಕ್ಕೆ ಸಾಥ್ ಕೊಟ್ಟಿದ್ದಾರೆ ಎಂದು ಹೇಳಿದರು.
ಕ್ಷೇತ್ರದ ಎಲ್ಲಾ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದರು.
ಹಿಂದಿಮ ಎರಡು ಚುನಾವಣೆಗಳಲ್ಲಿ ನಾನು ಯಾವ ರೀತಿ ನಡೆದುಕೊಂಡು ಬಂದಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಾವ ಹಂತದಲ್ಲೂ ನಾನು ವಿರೋಧ ಪಕ್ಷಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ. ನನ್ನ ಕಲ್ಪನೆಯಲ್ಲಿ ಚನ್ನಪಟ್ಟಣದ ಅಭಿವೃದ್ಧಿ ಹೇಗಿರಬೇಕು ಎಂಬುದನ್ನು ನಾನು ಚರ್ಚೆ ಮಾಡಿದ್ದೇನೆ. ನನ್ನ ಬೆನ್ನಿಗಿರೋದು ದೇವೇಗೌಡರು ಹಾಗೂ ಕುಮಾರಣ್ಣ ಕೊಡುಗೆ ಜೊತೆಗೆ ನಿಷ್ಠಾವಂತ ಕಾರ್ಯಕರ್ತರ ಪಡೆ. ಇದು ನನ್ನನ್ನು ಗೆಲುವಿನ ದಡ ಸೇರಿಸುವ ವಿಶ್ವಾಸವಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.