ADVERTISEMENT

ಚನ್ನಪಟ್ಟಣ ಉಪ ಚುನಾವಣೆ: ಯೋಗೇಶ್ವರ್ ಆಗುವರೇ ‘ಗೇಮ್ ಚೇಂಜರ್’

ಚನ್ನಪಟ್ಟಣ: ಟಿಕೆಟ್ ಕೈ ತಪ್ಪಿದರೂ ‘ಸೈನಿಕ’ನ ನಡೆಯೇ ನಿರ್ಣಾಯಕ

ಓದೇಶ ಸಕಲೇಶಪುರ
Published 4 ಜುಲೈ 2024, 20:55 IST
Last Updated 4 ಜುಲೈ 2024, 20:55 IST
ಸಿ.ಪಿ. ಯೋಗೇಶ್ವರ್
ಸಿ.ಪಿ. ಯೋಗೇಶ್ವರ್   

ರಾಮನಗರ: ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕುಟುಂಬದ ರಾಜಕೀಯ ಸಮರಕ್ಕೆ ಮತ್ತೊಮ್ಮೆ ಸಾಕ್ಷಿಯಾಗಲಿರುವ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಥಳೀಯ ಪ್ರಬಲ ನಾಯಕನಾಗಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ (ಸಿಪಿವೈ) ಇಡೀ ಚುನಾವಣಾ ಕಣವನ್ನು ಬದಲಿಸುವ ಸಾಮರ್ಥ್ಯವಿರುವ ‘ಗೇಮ್ ಚೇಂಜರ್’ ಆಗುವ ಸಾಧ್ಯತೆ ಇದೆ. 

ಚನ್ನಪಟ್ಟಣ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಹಾಗೂ ತಮ್ಮದೇ ಬೆಂಬಲಿಗರ ಪಡೆ, ಮತದಾರರನ್ನು ಹೊಂದಿರುವ ಸಿಪಿವೈ ಸಹಜವಾಗಿ ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿವೈಗೆ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಈ ಚುನಾವಣೆ ಮಹತ್ವದ್ದು. ಮೈತ್ರಿ ಟಿಕೆಟ್ ಸಿಕ್ಕರೆ ಡಿ.ಕೆ.ಸಹೋದರರು ಸೇರಿದಂತೆ ‘ಕೈ’ನಿಂದ ಯಾರೇ ಕಣಕ್ಕಿಳಿದರೂ ಪ್ರಬಲ ಸ್ಪರ್ಧೆಯೊಡ್ಡುವ ಸಾಮರ್ಥ್ಯ ಅವರಿಗಿದೆ.

ADVERTISEMENT

ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಕ್ಷೇತ್ರದಲ್ಲಿ ಮೈತ್ರಿಕೂಟದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಆಗ ಸಿಪಿವೈ ಮತ್ತು ಅವರ ಬೆಂಬಲಿಗರ ನಡೆ ಹೇಗಿರಬಹುದು ಎಂಬುದರ ಲೆಕ್ಕಾಚಾರ ನಡೆಯುತ್ತಿದೆ. 

ಗುಟ್ಟು ಬಿಡದ ಎಚ್‌ಡಿಕೆ: ಲೋಕಸಭಾ ಚುನಾವಣೆ ಮುಗಿದ ಬಳಿಕ ಸಿಪಿವೈ ಮತ್ತು ಎಚ್‌ಡಿಕೆ ಹಲವು ಬಾರಿ ಭೇಟಿಯಾಗಿದ್ದಾರೆ. ಹಲವೆಡೆ ಇಬ್ಬರೂ ವೇದಿಕೆ ಹಂಚಿಕೊಂಡಿದ್ದಾರೆ. ಎಚ್‌ಡಿಕೆ ತಮ್ಮ ಭಾಷಣದಲ್ಲಿ ‘ನಾವಿಬ್ಬರು ಅಣ್ಣ–ತಮ್ಮಂದಿರಂತೆ ಇದ್ದೇವೆ’ ಎಂದು ಕೊಂಡಾಡಿದರೂ ಅವರನ್ನು ಅಭ್ಯರ್ಥಿ ಮಾಡುವ ಕುರಿತು ಇದುವರೆಗೆ ಸಕಾರಾತ್ಮಕ ಮಾತನ್ನಾಡಿಲ್ಲ.

ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಯಾರಾಗಲಿದ್ದಾರೆ? ಎಂಬ ಮಾಧ್ಯಮದವರ ಪ್ರಶ್ನೆಗೂ ಎಚ್‌ಡಿಕೆ, ಹಾರಿಕೆ ಉತ್ತರ ಕೊಡುತ್ತಾ ಬಂದಿದ್ದಾರೆ. ಈ ಬೆಳವಣಿಗೆಗಳ ನಡುವೆ ಅವರ ಕುಟುಂಬದವರ ಹೆಸರುಗಳು ಮುನ್ನೆಲೆಗೆ ಬರುತ್ತಿವೆ. ಈ ಬಗ್ಗೆಯೂ ಎಚ್‌ಡಿಕೆ ತುಟಿ ಬಿಚ್ಚುತ್ತಿಲ್ಲ. ಸಿಪಿವೈ ಟಿಕೆಟ್ ಕೊಡಲು ಅವರಿಗೆ ಮನಸ್ಸಿಲ್ಲವೇ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

ನಿರ್ಣಾಯಕ ಪಾತ್ರ: ‘ಸ್ಥಳೀಯತೆಯ ದೃಷ್ಟಿಯಲ್ಲಿ ನೋಡುವುದಾದರೆ ಕ್ಷೇತ್ರವನ್ನು ಎರಡು ಸಲ ಪ್ರತಿನಿಧಿಸಿರುವ ಎಚ್‌ಡಿಕೆ ಮತ್ತು ಸಾತನೂರು ಪ್ರತಿನಿಧಿಸುತ್ತಿದ್ದಾಗ ಚನ್ನಪಟ್ಟಣದ ಒಂದು ಹೋಬಳಿ ಪ್ರತಿನಿಧಿಸಿರುವ ಡಿಕೆಶಿ ಇಬ್ಬರೂ ಹೊರಗಿನವರೇ. ಸಿಪಿವೈ ಸ್ಥಳೀಯ. ಅವರ ರಾಜಕಾರಣ ಚನ್ನಪಟ್ಟಣ ವ್ಯಾಪ್ತಿ ಮೀರಿಲ್ಲ. ಚುನಾವಣೆಯಲ್ಲಿ ಸ್ಥಳೀಯರ ಸ್ವಾಭಿಮಾನದ ವಿಷಯ ಬಂದರೆ ಸಿಪಿವೈ ಕೈ ಮೇಲಾಗಲಿದೆ’ ಎಂದು ಸ್ಥಳೀಯ ಹಿರಿಯ ರಾಜಕಾರಣಿಯೊಬ್ಬರು ವಿಶ್ಲೇಷಣೆ ಮಾಡಿದರು.

‘ಈಗಾಗಲೇ ಐದು ಬಾರಿ ಶಾಸಕರಾಗಿ, ಎರಡು ಸಲ ಸಚಿವರಾಗಿರುವ ಸಿಪಿವೈ ಅಭಿವೃದ್ಧಿ ಕೆಲಸಗಳ ಬಗ್ಗೆ ಸ್ಥಳೀಯರಿಗೆ ಅಭಿಮಾನವಿದೆ. ಪಕ್ಷೇತರರಾಗಿ ರಾಜಕೀಯ ಶುರು ಮಾಡಿ ಕಾಂಗ್ರೆಸ್, ಸಮಾಜವಾದಿ ಪಕ್ಷಗಳಿಗೆ ಪಕ್ಷಾಂತರ ಮಾಡಿ, ಕಡೆಗೆ ಬಿಜೆಪಿಯಲ್ಲಿ ನೆಲೆಯೂರಿದ್ದರೂ ಅವರ ಬೆಂಬಲಿಗರ ಪಡೆ ಸದಾ ಅವರ ಬೆನ್ನಿಗೆ ಇದೆ’ ಎಂದು ಹೇಳಿದರು.

‘ಉಪ ಚುನಾವಣೆಯಲ್ಲಿ ಸಿಪಿವೈ ಅವರನ್ನು ಬಿಜೆಪಿ ಅಥವಾ ಜೆಡಿಎಸ್‌ನಿಂದ ಕಣಕ್ಕಿಳಿಸಿದರೂ ಮೈತ್ರಿಕೂಟಕ್ಕೆ ವರವಾಗಲಿದೆ. ಇಲ್ಲದಿದ್ದರೆ, ತಿರುಗುಬಾಣವಾಗಲಿದೆ. ಟಿಕೆಟ್ ಸಿಗದ ನೋವನ್ನು ಸಿಪಿವೈ ನುಂಗಿಕೊಳ್ಳಬಹುದು. ಆದರೆ, ಬೆಂಬಲಿಗರು ತಮ್ಮ ನಾಯಕನಿಗಾದ ಅನ್ಯಾಯ ಸಹಿಸುವುದಿಲ್ಲ. ಈ ಬೆಳವಣಿಗೆಯಿಂದ ಬೀಳುವ ಒಳೇಟು ಮೈತ್ರಿಕೂಟಕ್ಕೆ ಸೋಲಿನ ಆಘಾತ ನೀಡಲಿದೆ. ಇಲ್ಲದಿದ್ದರೆ, ಸಿಪಿವೈ ಪಕ್ಷಾಂತರವನ್ನು ಅಲ್ಲಗಳೆಯುವಂತಿಲ್ಲ’ ಎನ್ನುವ ಸುಳಿವನ್ನೂ ನೀಡಿದರು.

ಯಾರೆಲ್ಲ ಹೆಸರು ಮುಂಚೂಣಿಗೆ?

1. ಜೆಡಿಎಸ್‌ 

  • ನಿಖಿಲ್ ಕುಮಾರಸ್ವಾಮಿ

  • ಅನಸೂಯ ಮಂಜುನಾಥ್ (ಎಚ್‌.ಡಿ. ಕುಮಾರಸ್ವಾಮಿ ಸಹೋದರಿ)

  • ಜಯಮುತ್ತು ಚನ್ನಪಟ್ಟಣ ಜೆಡಿಎಸ್ ಅಧ್ಯಕ್ಷ

2. ಬಿಜೆಪಿ 

  • ಸಿ.ಪಿ. ಯೋಗೇಶ್ವರ್ (ವಿಧಾನ ಪರಿಷತ್ ಸದಸ್ಯ)

3. ಕಾಂಗ್ರೆಸ್‌ 

  • ಡಿ.ಕೆ. ಶಿವಕುಮಾರ್

  • ಐಶ್ವರ್ಯಾ (ಡಿ.ಕೆ. ಶಿವಕುಮಾರ್‌ ಪುತ್ರಿ)

  • ಡಿ.ಕೆ. ಸುರೇಶ್ 

  • ಕುಸುಮಾ ಹನುಮಂತರಾಯಪ್ಪ (ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.