ADVERTISEMENT

ಜನ್‌ಧನ್‌: ₹60 ಲಕ್ಷ ವಹಿವಾಟು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 9:59 IST
Last Updated 7 ಫೆಬ್ರುವರಿ 2020, 9:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಚನ್ನಪಟ್ಟಣದ ಎಸ್‌ಬಿಐ ಶಾಖೆಯಲ್ಲಿನ ರೆಹಾನ ಬಾನು ಅವರ ಖಾತೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ₹60.66 ಲಕ್ಷ ಮೊತ್ತದ ವಹಿವಾಟು ನಡೆದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ರೆಹಾನ ಬ್ಯಾಂಕ್‌ ಖಾತೆ ಬಳಸಿ ಆನ್‌ಲೈನ್‌ ಮೂಲಕ ವಂಚನೆ ಮಾಡಿರುವುದಾಗಿ ಚಂಡೀಗಡ ಪೊಲೀಸರಲ್ಲಿ ದೂರು ದಾಖಲಾಗಿತ್ತು. ಖಾತೆದಾರರ ವಿವರದ ಬೆನ್ನು ಹತ್ತಿದ ಪೊಲೀಸರು ಚನ್ನಪಟ್ಟಣದ ಎಸ್‌ಬಿಐ ಶಾಖೆ ಸಿಬ್ಬಂದಿಯನ್ನು ಸಂಪರ್ಕಿಸಿ ವಿವರ ನೀಡುವಂತೆ ಕೋರಿದ್ದರು. ಖಾತೆಯಲ್ಲಿ ಏಕಾಏಕಿ ಲಕ್ಷಗಳ ಲೆಕ್ಕದಲ್ಲಿ ವ್ಯವಹಾರ ನಡೆದ ಕಾರಣ ಅನುಮಾನಾಸ್ಪದ ವಹಿವಾಟಿನ ಆಧಾರದ ಮೇಲೆ ಬ್ಯಾಂಕಿನ ಸಿಬ್ಬಂದಿಯು ಖಾತೆ ವ್ಯವಹಾರವನ್ನು ತಡೆ ಹಿಡಿದಿದ್ದರು. ಬಳಿಕ ರೆಹಾನ ಮನೆಗೆ ತೆರಳಿ ಮತ್ತೊಮ್ಮೆ ಖಾತೆದಾರರ ವಿವರ ಖಾತ್ರಿ ಮಾಡಿಕೊಂಡಿದ್ದರು.

ಬ್ಯಾಂಕ್‌ ಸಿಬ್ಬಂದಿ ಬಂದು ಹೋದ ಮೇಲೆ ಅನುಮಾನಗೊಂಡು ಬ್ಯಾಲೆನ್ಸ್ ಚೆಕ್‌ ಮಾಡಿದ ರೆಹಾನ, ತಮ್ಮ ಖಾತೆಯಿಂದ ₹30 ಕೋಟಿ ವಹಿವಾಟು ನಡೆದಿರುವುದಾಗಿ ರೆಹಾನ ಚನ್ನಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಪೊಲೀಸರ ತನಿಖೆ ಪ್ರಕಾರ, ರೆಹಾನ ಖಾತೆಗೆ ಹಣ ಠೇವಣಿ ಜತೆಗೆ ಆ ಹಣವು ಆನ್‌ಲೈನ್‌ ಮೂಲಕ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. 2019ರ ಸೆಪ್ಟೆಂಬರ್‌ನಲ್ಲಿ ರೆಹಾನ ಖಾತೆಗೆ ₹18.20 ಲಕ್ಷ ಜಮೆ ಆಗಿದ್ದು, ಇದರಲ್ಲಿ ₹18.17 ಲಕ್ಷ ಡ್ರಾ ಆಗಿದೆ. ಅಕ್ಟೋಬರ್‌ನಲ್ಲಿ ₹20.79 ಲಕ್ಷ ಡ್ರಾ ಆಗಿದ್ದು, ₹20.75 ಲಕ್ಷ ವರ್ಗಾವಣೆ ಆಗಿದೆ. ನವೆಂಬರ್‌ನಲ್ಲಿ ಜಮೆಯಾದ ₹21.60 ಲಕ್ಷದ ಪೈಕಿ ₹21.38 ಲಕ್ಷವನ್ನು ವರ್ಗಾವಣೆ ಮಾಡಲಾಗಿದೆ.

ಡಿಸೆಂಬರ್‌ನಲ್ಲಿ ವಂಚಕರು ₹24 ಸಾವಿರ ಹಾಕಿದ್ದಾರೆ. ಅಷ್ಟರಲ್ಲಿ ಬ್ಯಾಂಕ್‌ನ ಸಿಬ್ಬಂದಿ ವಹಿವಾಟು ತಡೆದ ಕಾರಣ ಹಣ ವಾಪಸ್ ತೆಗೆಯಲು ಆಗಿಲ್ಲ. ಹೀಗಾಗಿ ಹಣ ಸಂದಾಯ ಆಗುವುದು ನಿಂತಿದೆ ಎಂದು ಮೂಲಗಳು ತಿಳಿಸಿವೆ.

ಒಟಿಪಿ ಬಹಿರಂಗಪಡಿಸಬೇಡಿ: ಬ್ಯಾಂಕ್ ಮನವಿ
ಜನಧನ್‌ ಖಾತೆಯಲ್ಲಿನ ವ್ಯವಹಾರದ ಕುರಿತು ಸ್ಟೇಟ್‌ ಬ್ಯಾಂಕ್‌ಆಫ್ ಇಂಡಿಯಾ ಪತ್ರಿಕಾ ಪ್ರಕಟಣೆ ನೀಡಿದ್ದು ‘ರೆಹಾನ ಖಾತೆಯಲ್ಲಿ ₹30 ಕೋಟಿ ವಹಿವಾಟು ನಡೆದಿಲ್ಲ. ಕೇವಲ ಲಕ್ಷಗಳ ಲೆಕ್ಕದಲ್ಲಿ ವಹಿವಾಟು ಆಗಿದೆ. ಚಂಡೀಗಡ ಸೈಬರ್‌ ಪೊಲೀಸರ ದೂರಿನ ಮೇರೆಗೆ ಖಾತೆಯನ್ನು ತಡೆಹಿಡಿಯಲಾಯಿತು. ಖಾತೆದಾರರು ತಮಗೆ ಬಂದ ಒಟಿಪಿಯನ್ನು ವಂಚಕರ ಜೊತೆ ಹಂಚಿಕೊಂಡಿದ್ದರಿಂದ ಈ ತೊಂದರೆ ಆಗಿದೆ. ಗ್ರಾಹಕರು ಯಾವುದೇ ಕಾರಣಕ್ಕೂ ತಮ್ಮ ಖಾತೆ ವಿವರ, ಒಟಿಪಿ ಸೇರಿದಂತೆ ಯಾವುದೇ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು’ ಎಂದು ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.