ರಾಮನಗರ/ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲಿಯವರೆಗೆ ₹29.07 ಕೋಟಿ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಮದ್ಯ ಸಂಗ್ರಹ ಹಾಗೂ ಪರವಾನಗಿ ಇಲ್ಲದೆ ಸಾಗಾಟಕ್ಕೆ ಸಂಬಂಧಿಸಿದಂತೆ 151 ಪ್ರಕರಣ ದಾಖಲಿಸಲಾಗಿದೆ. ಅಬಕಾರಿ ದಾಳಿ ವೇಳೆ ₹29.07 ಕೋಟಿ ಮೌಲ್ಯದ ವೈನ್ ಹೊರತುಪಡಿಸಿ ₹2.05 ಲಕ್ಷ ಅಬಕಾರಿ ವಸ್ತುಗಳು ಮತ್ತು ₹5.65 ಲಕ್ಷ ಮೌಲ್ಯದ ಮೂರು ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇವೆಲ್ಲದರ ಒಟ್ಟು ಮೌಲ್ಯ ₹29.12 ಕೋಟಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಲ್ಲೂಕಿನ ಮಳೂರು ಹೋಬಳಿಯ ಗಂಗೆದೊಡ್ಡಿ ಗ್ರಾಮದಲ್ಲಿರುವ ಮೆ.ಸುಲಾ ವೈನ್ ಯಾರ್ಡ್ ಲಿಮಿಟೆಡ್‌ನ ಗೋದಾಮಿನ ಮೇಲೆ ನ. 8ರಂದು ದಾಳಿ ನಡೆಸಿದ ಅಧಿಕಾರಿಗಳು ಅಬಕಾರಿ ಭದ್ರತಾ ಚೀಟಿ ಮತ್ತು ಬ್ರಾಂಡ್ ಲೇಬಲ್ ಇಲ್ಲದ ಸುಮಾರು 140 ಬಾಕ್ಸ್‌ಗಳಲ್ಲಿದ್ದ ದುಬಾರಿ ಮೌಲ್ಯದ ವಿವಿಧ ಬ್ರಾಂಡ್‌ಗಳ 2.95 ಲಕ್ಷ ಲೀಟರ್ ವೈನ್ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯವೇ ₹29.06 ಕೋಟಿ ಆಗಿದೆ. ಉಳಿದಂತೆ ವಿವಿಧೆಡೆ ಸಣ್ಣ ಪ್ರಮಾಣದ ಮದ್ಯ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.