ಮಾಗಡಿ (ರಾಮನಗರ): ‘ಚನ್ನಪಟ್ಟ ಉಪ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಹಾಗೂ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಮತ ಭಿಕ್ಷೆ ಕೇಳುತ್ತೇವೆ. ಚುನಾವಣೆಯನ್ನು ಜನರ ತೀರ್ಮಾನಕ್ಕೆ ಬಿಡುತ್ತೇವೆ’ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮಗೇನೊ ಶಕ್ತಿ ಇದೆ ಎಂದು ಕ್ಷೇತ್ರದ ಉಸ್ತುವಾರಿಯನ್ನು ವಹಿಸಿದ್ದಾರೆ.
ಚುನಾವಣೆಗೆ ಇನ್ನೂ ಕೂಡ ಬೇಕಾದಷ್ಟು ಸಮಯವಿದೆ. ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ನಾವು ದೊಡ್ಡಮಟ್ಟದಲ್ಲಿ ಸೋತಿದ್ದೇವೆ. ಎರಡ್ಮೂರು ಲಕ್ಷ ಮತಗಳ ಅಂತರದಲ್ಲಿ ಸೋತಿರು ನಮಗಿಲ್ಲಿ ದೊಡ್ಡ ಶಕ್ತಿ ಇದೆ ಎಂದು ಹೇಳಿಕೊಳ್ಳುವಂತಿಲ್ಲ’ ಎಂದರು.
‘ಬೆಂಗಳೂರು ಗ್ರಾಮಾಂತರದ ಚನ್ನಪಟ್ಟಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು ಕಾಂಗ್ರೆಸ್ ಕೈ ಹಿಡಿದಿರುವುದು ಆಶಾದಾಯಕ ಬೆಳವಣಿಗೆ. ವಿಧಾನಸಭಾ ಚುನಾವಣೆಯಲ್ಲಿ 15 ಸಾವಿರವಿದ್ದ ಮತ ಗಳಿಕೆ 85 ಸಾವಿರಕ್ಕೆ ಏರಿಕೆಯಾಗಿದೆ. ಹಾಗಾಗಿ, ಜನರ ಮೇಲೆ ವಿಶ್ವಾಸವಿಟ್ಟು ಚುನಾವಣೆಗೆ ಹೋಗುತ್ತೇವೆ. ಆದರೂ, ನಾವು ದೊಡ್ಡ ನಾಯಕರ ವಿರುದ್ಧ ಸ್ಪರ್ಧಿಸಬೇಕಾಗಿದೆ. ಅಭ್ಯರ್ಥಿಯನ್ನು ಹೈಕಮಾಂಡ್ ತೀರ್ಮಾನಿಸಲಿದೆ’ ಎಂದು ತಿಳಿಸಿದರು.
‘ಡಿಕೆಶಿ ರಾಜಕೀಯ ಅಧ್ಯಾಯ ಚನ್ನಪಟ್ಟಣದಲ್ಲಿ ಅಂತ್ಯ’ ಎಂಬ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಯಾರ ರಾಜಕೀಯ ಎಲ್ಲಿ ಮುಗಿಯಲಿದೆ ಎಂದು ಅವರಿಗೇ ಕರೆ ಮಾಡಿ ಕೇಳಬೇಕು. ಅವರು ಹಿಂದೆ ಸರ್ಕಾರ ರಚನೆ ಮಾಡಿದ್ರು, ಆನಂತರ ಉರುಳಿಸಿದ್ರು, ಸಿ.ಎಂ ಅಭ್ಯರ್ಥಿಯಾಗಿ ಈ ಭಾಗದ ಒಕ್ಕಲಿಗ ನಾಯಕರೂ ಆದರು. ಯೋಗೇಶ್ವರ್ ವೇಗ ಯಾವ ರೀತಿ ಇದೆ ಅಂತ ನಾನು ನೋಡುತ್ತಿದ್ದೇನೆ. ಆತ್ಮೀಯರಾದ ಅವರು ಇದೇ ಸ್ಪೀಡ್‌ನಲ್ಲಿ ಹೋಗಲಿ’ ಎಂದು ವ್ಯಂಗ್ಯವಾಡಿದರು.
‘ಮಾಜಿ ಸಂಸದ ಡಿ.ಕೆ. ಸುರೇಶ್ ಸ್ಪರ್ಧೆಗೆ ಡಿಕೆಶಿ ತಂತ್ರ’ ಎಂಬ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ಪಕ್ಷದಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದು ನಮಗೆ ಬಿಟ್ಟಿದ್ದು. ಶಿವಕುಮಾರ್, ಸುರೇಶ್ ಅಥವಾ ಅಚ್ಚರಿ ಅಭ್ಯರ್ಥಿ ಘೋಷಿಸುತ್ತೇವೊ ಅದು ನಮಗೆ ಸಂಬಂಧಿಸಿದ್ದು. ಅನುಭವಿ ದೇವೇಗೌಡರು ಮುಂದೆ ತಮಗೆ ಯಾವುದಾದರೂ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಿಂದ ಈ ರೀತಿ ಹೇಳಿದ್ದಾರೆ. ಅವರು ಸಚಿವರಾಗಿದ್ದಾಗ ಅನುಭವಿಸಿದ ಗೋಳು ನೋಡಿದ್ದೇವೆ. ಮಾತನಾಡೋರನ್ನು ನಿಯಂತ್ರಿಸದೆ ಮಾತನಾಡಿ ಎಂದು ಮುಕ್ತವಾಗಿ ಬಿಡಬೇಕು. ರಾಜಕೀಯ ವಿಮರ್ಶೆಗಿಂತ ಜನಸೇವೆ ಮಾಡಬೇಕು’ ಎಂದು ತಿರುಗೇಟು ನೀಡಿದರು.
‘ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ಮಾಡಲು ದರ್ಶನ್ ಅವರು ಬಂದಿದ್ದಾಗ, ಕಾನ್‌ಸ್ಪೆಬಲ್‌ವೊಬ್ಬರ ಮೇಲೆ ದರ್ಶನ್ ಅವರ ತಂಡ ಹಲ್ಲೆ ಮಾಡಿದ್ದಾರೆಂಬ ವಿಷಯದ ಕುರಿತು ನನಗೆ ಮಾಹಿತಿ ಇಲ್ಲ. ಆ ಬಗ್ಗೆ ವಿಚಾರಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.