ADVERTISEMENT

ಚನ್ನಪಟ್ಟಣ ಉಪಚುನಾವಣೆ | ಗೆಲುವಿನ ಆತ್ಮವಿಶ್ವಾಸ ಮೂಡಿದೆ: ಸಿ.ಪಿ. ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 16:08 IST
Last Updated 5 ನವೆಂಬರ್ 2024, 16:08 IST
ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್, ಮಾಜಿ ಸಂಸದ ಡಿ.ಕೆ.ಸುರೇಶ್, ಸಚಿವ ಮಾಂಕಾಳ ವೈದ್ಯ ಅವರಿಗೆ ಸ್ವಾಗತ ಕೋರಲಾಯಿತು
ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್, ಮಾಜಿ ಸಂಸದ ಡಿ.ಕೆ.ಸುರೇಶ್, ಸಚಿವ ಮಾಂಕಾಳ ವೈದ್ಯ ಅವರಿಗೆ ಸ್ವಾಗತ ಕೋರಲಾಯಿತು   

ಚನ್ನಪಟ್ಟಣ: ‘ಎಚ್.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದರೂ ಕ್ಷೇತ್ರದ ಬಗ್ಗೆ ಅವರಿಗೆ ಇದ್ದ ತಾತ್ಸಾರ ಇದೀಗ ಜನಕ್ಕೆ ಅರಿವಾಗುತ್ತಿದೆ. ಜನರ ಒಲವು ಕಾಂಗ್ರೆಸ್ ಪರವಾಗಿದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ತಿಳಿಸಿದರು.

ತಾಲ್ಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಮಂಗಳವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ತಾಲ್ಲೂಕಿಗೆ ಬರುವಾಗಲೂ ಜನರಿಗೆ ಹೇಳಲಿಲ್ಲ, ಇಲ್ಲಿಂದ ಹೋಗುವಾಗಲೂ ಜನರಿಗೆ ತಿಳಿಸಿಲ್ಲ. ಅವರ ಉದಾಸೀನತೆ ಜನರಿಗೆ ಗೊತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೆ ಜನರ ಒಲವು ಕಾಂಗ್ರೆಸ್ ಕಡೆಗೆ ಬರುತ್ತಿದೆ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಅವರ ಜೊತೆ ಕೆಲಸ ಮಾಡಿದ್ದೇನೆ. ಈ ಭಾಗದಲ್ಲಿ ಪ್ರಬಲವಾಗಿ ಬಿಜೆಪಿ ಸಂಘಟನೆ ಮಾಡಿ ಲೋಕಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಿದ್ದೇನೆ. ಉಪಚುನಾವಣೆಯಲ್ಲಿ ಎನ್‌ಡಿಎಯಿಂದ ನನಗೆ ಟಿಕೆಟ್ ಕೊಡುವ ಮಾತುಕತೆ ಆಗಿತ್ತು. ಆದರೆ ಕುಮಾರಸ್ವಾಮಿ ನಾಟಕ ಮಾಡಿ ಅಂತಿಮವಾಗಿ ಮಗನನ್ನು ತಂದರು. ಕುಮಾರಸ್ವಾಮಿ ಮೊದಲು ನಂಬಿಕೆ ಹುಟ್ಟಿಸಿ ಬಳಿಕ ಮೋಸ ಮಾಡಿದರು’ ಎಂದು ಆರೋಪಿಸಿದರು.

ADVERTISEMENT

‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾಲ್ಲೂಕಿಗೆ ಬಂದು ಪ್ರಚಾರ ಮಾಡಿರುವುದು ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ. ಜೊತೆಗೆ ಸರ್ಕಾರದ ಹಲವಾರು ಮಂತ್ರಿಗಳು, ಶಾಸಕರು ಸೇರಿದಂತೆ ಕಾಂಗ್ರೆಸ್‌ನ ಗಣ್ಯರು ಬಂದು ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಗೆಲುವಿನ ಆತ್ಮವಿಶ್ವಾಸ ಮೂಡಿದೆ’ ಎಂದರು.

ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ‘ಕಳೆದ ಎರಡು ಬಾರಿ ಈ ಕ್ಷೇತ್ರದ ಜನ ಸಿ.ಪಿ. ಯೋಗೇಶ್ವರ್ ಅವರನ್ನು ಸೋಲಿಸಿದ್ದೀರಿ. ಕುಮಾರಸ್ವಾಮಿ ಅವರನ್ನು ಶಾಸಕರಾಗಿ ಮಾಡಿದ್ದೀರಿ. ಆದರೆ ಅದನ್ನು ತೊರೆದು ಅವರು ಕೇಂದ್ರದ ಮಂತ್ರಿಯಾಗಿದ್ದಾರೆ. ಯೋಗೇಶ್ವರ್ ಅವರು ಹಗಲು ರಾತ್ರಿ ನಿಮಗಾಗಿ ಶ್ರಮ ವಹಿಸಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸಿ ಸೇವೆಗೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.

ಸಚಿವ ಮಾಂಕಾಳ ವೈದ್ಯ, ಕೃಷ್ಣ ಬೈರೇಗೌಡ, ಎಚ್.ಸಿ.ಮಹದೇವಪ್ಪ, ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಶಾಸಕ ನಂಜೇಗೌಡ, ಎನ್.ಎ.ಹ್ಯಾರಿಸ್, ರಿಜ್ವಾನ್ ಹರ್ಷದ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಎಸ್.ರವಿ, ಚಲನಚಿತ್ರ ನಿರ್ಮಾಪಕ ಉಮಾಪತಿಗೌಡ ಹಾಜರಿದ್ದರು.

ತಾಲ್ಲೂಕಿನ ಸಿದ್ದೇಗೌಡನದೊಡ್ಡಿ, ಅಮ್ಮಳ್ಳಿದೊಡ್ಡಿ, ದ್ಯಾವಪಟ್ಟಣ, ಅರಳಾಳುಸಂದ್ರ, ವಿಠಲೇನಹಳ್ಳಿ, ಮೆಣಸಿಗನಹಳ್ಳಿ, ಬುಕ್ಕಸಾಗರ, ಉಜ್ಜನಹಳ್ಳಿ, ಪಿಹಳ್ಳಿದೊಡ್ಡಿ, ಹನಿಯೂರು, ಸಿಂಗರಾಜಪುರ, ಭೂಹಳ್ಳಿ, ಬೈರಶೆಟ್ಟಿಹಳ್ಳಿ, ವಿರುಪಸಂದ್ರ ಸೇರಿದಂತೆ ಹಲವು ಗ್ರಾಮದಲ್ಲಿ ಪ್ರಚಾರ ನಡೆಸಿದರು.

ಕನ್ನಿದೊಡ್ಡಿ ಗ್ರಾಮದಲ್ಲಿ ಪಟ್ಟಲದಮ್ಮ ದೇವಸ್ಥಾನದಲ್ಲಿ ಯೋಗೇಶ್ವರ್ ಪೂಜೆ ಸಲ್ಲಿಸಿದರು. ಪ್ರಚಾರದ ವೇಳೆ ಯೋಗೇಶ್ವರ್ ಮತ್ತು ತಂಡಕ್ಕೆ ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಸ್ವಾಗತ ನೀಡಲಾಯಿತು.

ಚನ್ನಪಟ್ಟಣ ತಾಲ್ಲೂಕಿನ ಮೆಣಸಿಗನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರಚಾರ ನಡೆಸಿದರು. ಸಚಿವ ಮಾಂಕಾಳ ವೈದ್ಯ ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.