ADVERTISEMENT

ಚನ್ನಪಟ್ಟಣ ಉಪಚುನಾವಣೆ | ಬಿಜೆಪಿ ಕಚೇರಿಯಲ್ಲಿ ‘ಮೈತ್ರಿ’ ಬ್ಯಾನರ್‌ ತೆರವು!

ಚನ್ನಪಟ್ಟಣ : ಬ್ಯಾನರ್ ಬದಲಾಯಿಸಿ ಜೆಡಿಎಸ್‌ಗೆ ಟಾಂಗ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:51 IST
Last Updated 15 ಅಕ್ಟೋಬರ್ 2024, 14:51 IST
<div class="paragraphs"><p>ಕಚೇರಿಯಲ್ಲಿ ಎರಡು ದಿನಗಳ ಹಿಂದೆ ಬದಲಾಯಿಸಿರುವ ಬ್ಯಾನರ್</p></div>

ಕಚೇರಿಯಲ್ಲಿ ಎರಡು ದಿನಗಳ ಹಿಂದೆ ಬದಲಾಯಿಸಿರುವ ಬ್ಯಾನರ್

   

ಚನ್ನಪಟ್ಟಣ: ಉಪ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಬಹುತೇಕ ಅಂತಿಮವಾಗಿದೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ, ಪಟ್ಟಣದ ಕುವೆಂಪು ನಗರದಲ್ಲಿರುವ ತಾಲ್ಲೂಕು ಬಿಜೆಪಿ ಕಚೇರಿಯಲ್ಲಿದ್ದ ಬಿಜೆಪಿ–ಜೆಡಿಎಸ್ ಮೈತ್ರಿ ಬ್ಯಾನರ್‌ ತೆರವು ಮಾಡಲಾಗಿದೆ.

ಆ ಜಾಗದಲ್ಲೀಗ ಮೈತ್ರಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಂಸದ ಡಾ. ಸಿ.ಎನ್. ಮಂಜುನಾಥ್, ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರಿರುವ ಬಿಜೆಪಿಯ ಬ್ಯಾನರ್ ಅಳವಡಿಸಲಾಗಿದೆ.

ADVERTISEMENT

ಕಚೇರಿಯಲ್ಲಿ ಮುಂಚೆ ಇದ್ದ ಬ್ಯಾನರ್

ಮೂರು ದಿನಗಳ ದಿನಗಳ ಹಿಂದೆ ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು, ಬಿಡದಿಯ ಕೇತೋಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಚುನಾವಣೆಗೆ ಸಿದ್ಧರಾಗುವಂತೆ ಕರೆ ನೀಡಿದ್ದರು. ಅದಾದ ಮಾರನೇಯ ದಿನವೇ ಬಿಜೆಪಿ ಕಚೇರಿಯಲ್ಲಿ ಅಳವಡಿಸಿದ್ದ ಕುಮಾರಸ್ವಾಮಿ ಅವರ ಭಾವಚಿತ್ರವಿದ್ದ ಮೈತ್ರಿ ಬ್ಯಾನರ್‌ಗೆ ಕೋಕ್ ನೀಡಲಾಗಿದೆ.

ಕ್ಷೇತ್ರವು ಎಚ್‌.ಡಿ. ಕುಮಾರಸ್ವಾಮಿ ಅವರಿಂದ ತೆರವಾದ ಬಳಿಕ, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಉಪ ಚುನಾವಣೆ ಟಿಕೆಟ್‌ಗಾಗಿ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಯೋಗೇಶ್ವರ್ ಅವರು ಆರಂಭದಿಂದಲೇ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿ, ‘ನಾನೇ ಅಭ್ಯರ್ಥಿ’ ಎಂದು ಬಹಿರಂಗವಾಗಿ ಮಾಧ್ಯಮದೆದುರು ಹೇಳಿದ್ದರು. ತಾವು ಪ್ರತಿನಿಧಿಸಿಕೊಂಡು ಬಂದಿರುವ ಕ್ಷೇತ್ರವನ್ನು ಬಿಜೆಪಿಗೆ ಬಿಡಲೊಲ್ಲದ ಕುಮಾರಸ್ವಾಮಿ, ಇದೀಗ ತಮ್ಮ ಪುತ್ರ ನಿಖಿಲ್ ಅವರನ್ನು ಸ್ಪರ್ಧೆಗೆ ಅಣಿಗೊಳಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ತಾಲ್ಲೂಕು ಬಿಜೆಪಿಯಲ್ಲೀಗ ಬ್ಯಾನರ್ ಬದಲಾವಣೆಯ ಬೆಳವಣಿಗೆ ನಡೆದಿದೆ.

ಯೋಗೇಶ್ವರ್ ಅವರು ಬಿಜೆಪಿಗೆ ಸೇರಿದಾಗಿನಿಂದ, ಕುವೆಂಪು ನಗರದಲ್ಲಿರುವ ಅವರ ಮನೆಯ ತಳಮಹಡಿಯನ್ನು ತಮ್ಮ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಪಕ್ಷಕ್ಕೆ ಸಂಬಂಧಿಸಿದ ಸಭೆ, ಸುದ್ದಿಗೋಷ್ಠಿ, ಮುಖಂಡರ ಭೇಟಿ ಸೇರಿದಂತೆ ಪಕ್ಷದ ಎಲ್ಲಾ ಚಟುವಟಿಕೆಗಳು ಇಲ್ಲೇ ನಡೆಯುತ್ತವೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಚೇರಿಯಲ್ಲಿ ‘ಮೈತ್ರಿ’ ಬ್ಯಾನರ್ ಅಳವಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.