ಚನ್ನಪಟ್ಟಣ: ನಗರದ ಮಂಗಳವಾರಪೇಟೆ ಬಳಿ ಇರುವ ಇತಿಹಾಸ ಪ್ರಸಿದ್ಧ ಗುರುಶೆಟ್ಟಿ ಕೊಳ ಹಾಗೂ ಉದ್ಯಾನದಲ್ಲಿ ಗಿಡಗಂಟಿ ಬೆಳೆದು ಕೊಳ ಹಾಗೂ ಉದ್ಯಾನ ಹಾವು–ಹಲ್ಲಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.
ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಸ್ಪನ್ ಸಿಲ್ಕ್ ಮಿಲ್ ಪಕ್ಕದಲ್ಲಿ ಇರುವ ಈ ಜಾಗದಲ್ಲಿ ಐತಿಹಾಸಿಕ ಮಂಟಪ ಹಾಗೂ ಕೊಳ ಇದ್ದ ಕಾರಣ, ಅಭಿವೃದ್ಧಿಪಡಿಸಿ ಸುತ್ತಲ ಜಾಗದಲ್ಲಿ ಪಾರ್ಕ್ ನಿರ್ಮಿಸಿ ಸುಂದರ ತಾಣವಾಗಿಸಲಾಗಿತ್ತು. ಆದರೆ, ಇದರ ಸೂಕ್ತ ನಿರ್ವಹಣೆ ಇಲ್ಲದೆ ಪುಂಡರ ಜಾಗವಾಗಿದೆ.
ಪಾಳುಬಿದ್ದಿದ್ದ ಈ ಜಾಗದಲ್ಲಿ 2018ರಲ್ಲಿ ನಗರಸಭೆ ವತಿಯಿಂದ ₹10ಲಕ್ಷ ಅಂದಾಜು ವೆಚ್ಚದಲ್ಲಿ ಕೊಳ ಅಭಿವೃದ್ಧಿಪಡಿಸಿ, ಉದ್ಯಾನವ ನಿರ್ಮಿಸಲಾಗಿತ್ತು. ನಗರದ ನಾಗರಿಕರಿಗೆ ವಾಯು ವಿಹಾರ ತಾಣವನ್ನಾಗಿ ನಿರ್ಮಿಸಲಾಗಿತ್ತು. ಆಕರ್ಷಕ ವಾಕಿಂಗ್ ಪಾಥ್, ಸಿಮೆಂಟ್ ಬೆಂಚು ನಿರ್ಮಿಸಿ ಮಧ್ಯದಲ್ಲಿ ಸೀಮೆ ಹೆಂಚು ತೆರೆದ ವಿಶ್ರಾಂತಿಗೃಹ ನಿರ್ಮಾಣ ಮಾಡಲಾಗಿತ್ತು.
ಸುಂದರ ಗಿಡ ಬೆಳೆಸಿ ಹುಲ್ಲುಹಾಸು ನಿರ್ಮಿಸಲಾಗಿತ್ತು. ಆದರೆ, ಈ ಜಾಗ ನಿರ್ವಹಣೆ ಕೊರತೆಯಿಂದ ಗಿಡಗಂಟಿ ಬೆಳೆದು ಕಾಲಿಡಲು ಭಯಪಡುವ ಜಾಗವಾಗಿ ಬದಲಾಗಿದೆ. ನಗರದ ಗುರುಶೆಟ್ಟಿ ಎಂಬುವರಿಗೆ ಸೇರಿದ್ದ ಈ ಜಾಗದಲ್ಲಿ ಕೊಳವೊಂದನ್ನು ನಿರ್ಮಿಸಿದ್ದರು ಎಂದು ಇತಿಹಾಸ ಹೇಳುತ್ತದೆ.
ಕೊಳ ಅವಸಾನದ ಅಂಚು ತಲುಪಿದ ಕಾರಣ ಅದನ್ನು ಅಭಿವೃದ್ಧಿಪಡಿಸಲಾಗಿದೆ. ಹಾಳಾಗಿದ್ದ ಕಲ್ಲುಚಪ್ಪಡಿ ತೆಗೆದು ಹೊಸ ಕಲ್ಲು ಜೋಡಿಸಿ, ಕಿಂಡಿಗಳಿಗೆ ಸಿಮೆಂಟ್ ಮಾಡಿ ಕೊಳವನ್ನು ಆಕರ್ಷಕ ಮಾಡಲಾಗಿದೆ. ಜತೆಗೆ ಸುತ್ತಲೂ ಕಬ್ಬಿಣದ ಕಂಬಿ (ಗ್ರಿಲ್) ಹಾಕಿ ಕೊಳ ಕಾಪಾಡಲಾಗಿದೆ. ಈಗ ಕೊಳದ ಸುತ್ತಲೂ ಗಿಡಗಂಟಿ, ಪೊದೆ ಬೆಳೆದುಕೊಂಡಿದೆ.
ಈ ಜಾಗದಲ್ಲಿ ಬಹಳ ವರ್ಷಗಳ ಹಿಂದೆ ಐತಿಹಾಸಿಕ ದೇವಾಲಯವೊಂದಿತ್ತು ಎಂದು ಹೇಳಲಾಗಿದೆ. ಕೊಳ ಹಾಗೂ ಸಣ್ಣ ಮಂಟಪ ಬಿಟ್ಟರೆ ಈಗ ದೇವಸ್ಥಾನದ ಅವಶೇಷ ಯಾವುದೂ ಉಳಿದಿಲ್ಲ. ಆದರೆ, ಸುತ್ತಲೂ ವಿಶಾಲವಾದ ಜಾಗವಿದ್ದ ಕಾರಣ ಕೊಳ ಅಭಿವೃದ್ಧಿಪಡಿಸಿ ಉದ್ಯಾನ ಮಾಡಿದ್ದರೂ ಈ ಐತಿಹಾಸಿಕ ಸ್ಥಳ ಅವಸಾನದ ಅಂಚು ತಲುಪಿದೆ ಎಂದು ನಾಗರಿಕರು ದೂರುತ್ತಾರೆ.
ಮಂಗಳವಾರಪೇಟೆ ಹಾಗೂ ಕುವೆಂಪುನಗರದ ನಾಗರಿಕರಿಗೆ ವಾಯು ವಿಹಾರಕ್ಕೆ ಹೇಳಿಮಾಡಿಸಿದ ತಾಣವಾಗಿದ್ದ ಈ ಜಾಗ ಈಗ ಪ್ರಯೋಜನಕ್ಕೆ ಬಾರದಂತಾಗಿದೆ. ಮಂಗಳವಾರಪೇಟೆ ಹಾಗೂ ಕುವೆಂಪುನಗರದ ಹಲವು ಮಂದಿ ಸಂಜೆ ವೇಳೆ ಸಮಯ ಕಳೆಯಲು ಈ ಉದ್ಯಾನ ಆಶ್ರಯಿಸಿದ್ದರು. ಆದರೆ, ಈಗ ಈ ಉದ್ಯಾನ ಪುಂಡರ ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂದು ಮಂಗಳವಾರಪೇಟೆ ಪುಟ್ಟರಾಜು, ಕುವೆಂಪುನಗರದ ಸುದರ್ಶನ್ ದೂರುತ್ತಾರೆ.
ಈ ಉದ್ಯಾನವನದಲ್ಲಿ ಬೇಕಾಬಿಟ್ಟಿಯಾಗಿ ಬೆಳೆದಿರುವ ಗಿಡಗಂಟಿ ತೆರವುಗೊಳಿಸಿ ಕೊಳ ಸ್ವಚ್ಛಗೊಳಿಸಬೇಕಾಗಿದೆ. ವಾಕಿಂಗ್ ಪಾಥ್ ಸೂಕ್ತವಾಗಿ ನಿರ್ವಹಣೆ ಮಾಡಿ ನಗರದ ಮಂಗಳವಾರಪೇಟೆ ಹಾಗೂ ಕುವೆಂಪುನಗರದ ನಾಗರಿಕರ ವಾಯುವಿಹಾರದ ತಾಣವನ್ನಾಗಿ ಮಾಡಲು ನಗರಸಭೆ ಕ್ರಮ ಕೈಗೊಳ್ಳಲಿ ಎನ್ನುವುದು ಇಲ್ಲಿನ ಜನರ ಒತ್ತಾಯವಾಗಿದೆ.
ಅಪ್ರಮೇಯಸ್ವಾಮಿ ದೇವಾಲಯದ ಸ್ವತ್ತು: ಗುರುಶೆಟ್ಟಿ ಕೊಳ ಹಾಗೂ ಉದ್ಯಾನದ ಸುಮಾರು 18ಗುಂಟೆ ಜಾಗ ಮಳೂರು ಅಪ್ರಮೇಯಸ್ವಾಮಿ ದೇವಾಲಯಕ್ಕೆ ಸೇರಿದ ಜಾಗವಾಗಿದೆ. ಗುರುಶೆಟ್ಟಿ ಎಂಬುವರು ಸುಮಾರು 800 ವರ್ಷಗಳ ಹಿಂದೆಯೇ ಈ ಜಾಗವನ್ನು ಅಪ್ರಮೇಯಸ್ವಾಮಿ ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದರು.
ಈ ಜಾಗದಲ್ಲಿರುವ ಮಂಟಪಕ್ಕೆ ಬ್ರಹ್ಮರಥೋತ್ಸವ ಅವಧಿಯಲ್ಲಿ ಅಪ್ರಮೇಯಸ್ವಾಮಿ ತಂದು ಪೂಜಿಸಲಾಗುತ್ತಿತ್ತು. ಈಗ ಆ ಪದ್ಧತಿ ನಿಲ್ಲಿಸಲಾಗಿದೆ. ನಗರಸಭೆ ಈ ಜಾಗದಲ್ಲಿ ಉದ್ಯನ ನಿರ್ಮಾಣ ಮಾಡುವ ಯೋಜನೆ ತಯಾರು ಮಾಡಿ ಕಾಮಗಾರಿ ಆರಂಭಿಸಿದರು. ಅದಕ್ಕೆ ನಾವು ಒಪ್ಪಿಗೆ ಸೂಚಿಸಿದ್ದೆವು. ಆದರೆ, ಅದನ್ನು ಸೂಕ್ತವಾಗಿ ಪೂರ್ಣ ಮಾಡಲಿಲ್ಲ. ಈಗ ಅದನ್ನು ಸೂಕ್ತವಾಗಿ ನಿರ್ವಹಣೆ ಸಹ ಮಾಡುತ್ತಿಲ್ಲ ಎಂದು ತಿಳಿಸಿದರು.
ನಗರದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ಈ ಜಾಗ ನಾಗರಿಕರ ವಾಯುವಿಹಾರಕ್ಕೆ ಹೇಳಿ ಮಾಡಿಸಿದಂತಿರುವ ಜಾಗವಾಗಿದೆ. ಇಲ್ಲಿ ನಿರ್ಮಾಣವಾಗಿರುವ ಉದ್ಯಾನ ಸೂಕ್ತವಾಗಿ ನಿರ್ವಹಣೆ ಮಾಡಿದರೆ ಒಂದು ಸುಂದರ ಜಾಗವಾಗುವುದಲ್ಲಿ ಅನುಮಾನವಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಲಿ. ಪುಟ್ಟೇಗೌಡ ಕುವೆಂಪುನಗರ ಚನ್ನಪಟ್ಟಣ ಐತಿಹಾಸಿಕ ಸ್ಥಳ ರಕ್ಷಿಸಲಿ ಗುರುಶೆಟ್ಟಿ ಕೊಳವು ಐತಿಹಾಸಿಕ ಸ್ಥಳವಾಗಿದೆ. ಈ ಜಾಗವನ್ನು ರಕ್ಷಿಸುವ ಅವಶ್ಯ ಇದೆ.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಐತಿಹಾಸಿಕ ಸ್ಥಳಗಳು ಕಾಣೆಯಾಗುತ್ತಿವೆ. ಇಂತಹ ಜಾಗ ರಕ್ಷಿಸಲು ಸಂಬಂಧಪಟ್ಟವರು ಮುಂದಾಗಬೇಕು. ಜತೆಗೆ ಸ್ಥಳೀಯ ನಗರಸಭೆ ಈ ಕೊಳ ಹಾಗೂ ಉದ್ಯಾನ ಸ್ವಚ್ಛಗೊಳಿಸಿದರೆ ಎಲ್ಲರ ಗಮನ ಸೆಳೆಯುವಂತೆ ಮಾಡುವುದು ಅವಶ್ಯ. ರಾಮಕೃಷ್ಣ ಮಂಗಳವಾರಪೇಟೆ ಚನ್ನಪಟ್ಟಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.