ADVERTISEMENT

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ ಸಿಪಿವೈ ಗೆಲುವು ಅಷ್ಟೇ ಸತ್ಯ:ಸಿಎಂ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 10:04 IST
Last Updated 11 ನವೆಂಬರ್ 2024, 10:04 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

   

– ಪ್ರಜಾವಾಣಿ ಚಿತ್ರ

ಚನ್ನಪಟ್ಟಣ: ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ ಯೋಗೇಶ್ವರ್ ಗೆಲ್ಲುವುದು ಅಷ್ಟೇ ಸತ್ಯ. ಕ್ಷೇತ್ರದ ಜನರಿಗೆ ಯಾರು ಕೆಲಸ ಮಾಡುತ್ತಾರೆ ಎಂಬುದು ಗೊತ್ತಾಗಿದೆ ಎಂದು ಚನ್ನಪಟ್ಟಣದಲ್ಲಿ ಮುಖ್ಯಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ADVERTISEMENT

ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಅವರು ಯೋಗೆಶ್ವರ್ ಪರ ಮತಯಾಚಿಸಿದರು. ಯೋಗೇಶ್ವರ್ ಕ್ಷೇತ್ರಕ್ಕೆ ಹೊಸಬರಲ್ಲ. ಅವರು ಮಾಡಿರುವ ನೀರಾವರಿ ಕೆಲಸ ಗಮನಿಸಿ ಜನರೇ ಅವರನ್ನು ಆಧುನಿಕ ಭಗೀರಥ ಅಂತ ಕರೆಯುತ್ತಾರೆ. ವರದೇಗೌಡರ ಕಾಲದಲ್ಲಿ ನಾನು ಪ್ರಚಾರಕ್ಕೆ ಬಂದಾಗಿಗೂ, ಈಗಿಗೂ ಬಹಳ ವ್ಯತ್ಯಾಸವಾಗಿದೆ. ಅದಕ್ಕೆ ಯೋಗೇಶ್ವರ್ ಮಾಡಿರುವ ಕೆಲಸ ಕಾರಣ.

ಹಾಲಿನ ಪ್ರೋತ್ಸಾಹಧನವನ್ನು‌ ಐದು ರೂಪಾಯಿ ಏರಿಕೆ ಮಾಡಿ. ಅಕ್ಕಪಕ್ಕದ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚು ಇದೆ. ನಮ್ಮಲ್ಲಿ ಕಡಿಮೆ ಇದೆ ಎಂದು ಮನವಿ ಮಾಡಿದ್ದಾರೆ. ಈಗ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಆ ಬಗ್ಗೆ ಯಾವುದೇ ಭರವಸೆ ನೀಡದೆ, ರೈತಪರ ತೀರ್ಮಾನ ಮಾಡುವೆ ಎಂದಿದ್ದಾರೆ.

ಯೋಗೇಶ್ವರ್ ಸಾಮಾನ್ಯ ಕುಟುಂಬದಿಂದ ಬಂದಿರುವ ಅಭ್ಯರ್ಥಿ. ನಿಖಿಲ್ ಕುಮಾರಸ್ವಾಮಿ ಅವರು ಅವರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ಮಂಡ್ಯದಲ್ಲಿ ಸೋತರು. ರಾಮನಗರದಲ್ಲಿ ಸಹ ಸೋತರು. ಪುತ್ರ ವ್ಯಾಮೋಹದಿಂದ ಕುಮಾರಸ್ವಾಮಿ ತಮ್ಮ ಮಗನನ್ನು ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ ಎಂದು ಕುಟುಕಿದರು.

ದೇವೇಗೌಡರಿಗೆ ಮೊಮ್ಮಗ ಮತ್ತು ಕುಮಾರಸ್ವಾಮಿ ಅವರಿಗೆ ಪುತ್ರ ವ್ಯಾಮೋಹ ಇದೆ. ದೇವೇಗೌಡರ ಜೊತೆಗಿದ್ದವ ನಾನು. ಅವರು ಎಂದಿಗೂ ಬುದ್ದಿವಂತ ಮತ್ತು ದಕ್ಷ ಒಕ್ಕಲಿಗ ನಾಯಕರನ್ನು ಬೆಳೆಸುವುದಿಲ್ಲ. ನಾನು ಹಿಂದುಳಿದ ವರ್ಗದವ ಬಿಡಿ. ಆದರೆ, ಒಕ್ಕಲಿಗರನ್ಮು ಸಹ ಬಿಡುತ್ತಿಲ್ಲವಲ್ಲ. ಯಾವ ಒಕ್ಕಲಿಗ ರನ್ನು ಬೆಳೆಸಿದ್ದಾರೆ ಹೇಳಿ. ಈಗ ಆ ಜಿ.ಟಿ. ದೇವೇಗೌಡಗೆ ಶುರು ಮಾಡಿಕೊಂಡಿದ್ದಾರೆ.

ಬಿ.ಎಲ್.‌ ಶಂಕರ್ ಮನೆ ಮಗ ಅಂತಿದ್ದರು. ಜಿ. ವಿಜಯ ಬಂಟ ಅಂತಿದ್ದರು. ಅವರನ್ನು ಬೆಳೆಸಿದ್ರಾ? ಹಾಗಾಗಿ ಜಾತಿ ವ್ಯಾಮೋಹ ಬಿಡಿ.‌ ದ್ವೇಷದ ರಾಜಕಾರಣದಲ್ಲಿ ದೇವೇಗೌಡರು ನಂಬರ್ ಒನ್. ಒಕ್ಕಲಿಗರನ್ನೇ ಅವರು ಮೊದಲು ಮುಗಿಸುವುದು ಎಂದು ಕಿಡಿಕಾರಿದ್ದಾರೆ.

ಈಗ ಮೇಕೆದಾಟುಗೆ ಡಿಎಂಕೆ ಒಪ್ಪಿಸಿ ಅಂತಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಮೋದಿ ಮಹಾ ಸುಳ್ಳುಗಾರ ಎಂದಿದ್ದರು. ನಾನು ಮತ್ತು ಜಾಲಪ್ಪ‌ ಇಲ್ಲದಿದರೆ 1994ರಲ್ಲಿ ದೇವೇಗೌಡರು ಸಿ.ಎಂ ಆಗಲು ಸಾದ್ಯವಾಗುತ್ತಿರಲಿಲ್ಲ.‌ ಆಗ ರಾಮಕೃಷ್ಣ ಹೆಗಡೆ ಆಗುತ್ತಿದ್ದರು. ಬೊಮ್ಮಾಯಿ ಸರ್ಕಾರ ಕೆಡವಿದ್ದರಿಂದ ಅವರು ಸಹ ದೇವೇಗೌಡರನ್ನು ಒಪ್ಪಿರಲಿಲ್ಲ. ನಾನು, ಎಂ.ಪಿ. ಪ್ರಕಾಶ್ ಸೇರಿದಂತೆ ಹಲವರು ಅವರನ್ನು ಒಪ್ಪಿಸಿದೆವು.

ದೇವೇಗೌಡರೇ ಸುಳ್ಳು ಹೇಳಿದರೆ ಇತಿಹಾಸ ಬದಲಾಗುವುದಿಲ್ಲ. ಸಿದ್ದರಾಮಯ್ಯ ಸೊಕ್ಕು ಮುರಿಯಬೇಕು ಎನ್ನುವ ನಿಮ್ಮ ಮಾತು ಪಾಳೇಗಾರಿಕೆ ಅಲ್ಲವೇ? ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ನ್ನು ಕಂಡರೆ ಆಗದ ಅವರು‌ ಇಂದಿಗೂ ಪಾಳೇಗಾರಿಕೆ ಪ್ರವೃತ್ತಿ ಬಿಟ್ಟಿಲ್ಲ. ನಮ್ಮ ಸರ್ಕಾರ ಕಿತ್ತೊಗೆಯುತ್ತೇವೆ ಅಂತೀರಾ? ಅಳುವುದು ನಮ್ಮ ಪರಂಪರೆ ಅನ್ನುವ ಅವರು, ಪಾಪ ಆ ನಿಖಿಲ್‌ಗೂ ಕಲಿಸಿ ಕೊಟ್ಟಿದ್ದಾರೆ. ಹಾಸನದಲ್ಲಿ ಕಣ್ಣೀರಿನಿಂದ‌ ಕೈ ತೊಳೆಯುತ್ತಿರುವ ಹೆಣ್ಣು ಮಕ್ಕಳ ಪರವಾಗಿ ಕಣ್ಣೀರು ಹಾಕಿ.

ಯೋಗೇಶ್ವರ್ ಅಭ್ಯರ್ಥಿ ಆಗಿದ್ದರೆ ದೇವೇಗೌಡರು ಇಷ್ಟು ದಿನ ಇಲ್ಲಿ ಇರುತ್ತಿದ್ರಾ? ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಯಾರೂ ನಮ್ಮ ಸರ್ಕಾರ ತೆಗೆಯಲು ಸಾಧ್ಯವಿಲ್ಲ.

ನಾವೆಂದೂ ಜಾತಿ ಮತ್ತು ಧರ್ಮದ ಬೇಧ ಮಾಡಿಲ್ಲ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಎರಡನೇ ಸಲ ಮುಖ್ಯಮಂತ್ರಿ ಆದನಲ್ಲ ಅಂತ ದೇವೇಗೌಡರಿಗೆ ಹೊಟ್ಟೆ ಉರಿ.‌ ನಾನು ಕೇವಲ ಒಂದು ವರ್ಷ, ನನ್ನ ಮಗ ಕೇವಲ ಒಂದೂವರೆ ವರ್ಷ ಆದರು. ಅವರ ಹೊಟ್ಟೆ ಉರಿ ಅವರನ್ನೇ ಸುಡುತ್ತದೆಯೇ ವಿನಾ ನನ್ನನ್ನಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.