ADVERTISEMENT

ಕೊನೆ ಉಸಿರು‌ ಎಳೆಯುವ ಮುನ್ನ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸುವೆ: ದೇವೇಗೌಡ

ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಎಚ್‌.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 0:05 IST
Last Updated 8 ನವೆಂಬರ್ 2024, 0:05 IST
ಚನ್ನಪಟ್ಟಣ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಗುರುವಾರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರಿಗೆ ಮಹಿಳೆಯರು ನಮಸ್ಕರಿಸಿದರು 
ಚನ್ನಪಟ್ಟಣ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಗುರುವಾರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರಿಗೆ ಮಹಿಳೆಯರು ನಮಸ್ಕರಿಸಿದರು    

ಚನ್ನಪಟ್ಟಣ (ರಾಮನಗರ): ‘ನನ್ನ ಕೊನೆ ಉಸಿರು‌ ಎಳೆಯುವ ಮುನ್ನ ಮೇಕೆದಾಟು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಪ್ಪಿಗೆ ಕೊಡಿಸುತ್ತೇನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಣೆ ಮಾಡಿದರು.

ತಾಲ್ಲೂಕಿನ ಹೊಡಿಕೆಹೊಸಹಳ್ಳಿಯಲ್ಲಿ ಗುರುವಾರ ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದರು.

‘ಮೇಕೆದಾಟು ಯೋಜನೆ ಆಗುತ್ತೆ ಎಂದರೆ ಅದು‌‌ ಮೋದಿ ಅವರಿಂದ ಮಾತ್ರ ಸಾಧ್ಯ. ಇದರಲ್ಲಿ ಎರಡು ಮಾತಿಲ್ಲ. ಆದರೆ, ತಮಿಳುನಾಡಿನವರು‌ ನಮ್ಮ ಕುತ್ತಿಗೆ ಹಿಡಿದಿದ್ದಾರೆ. ನಾನು ಅವರಿಗೆ ಮನವಿ ಮಾಡುತ್ತೇನೆ. ವಾಸ್ತವ ಸ್ಥಿತಿ  ಮನವರಿಕೆ ಮಾಡಿ ಕೊಡುತ್ತೇನೆ. ಈಗಾಗಲೇ ಹಲವು ಸಲ ಅವರು ನನ್ನ ಮನವಿ ಆಲಿಸಿದ್ದಾರೆ’ ಎಂದರು.

ADVERTISEMENT

ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪ್ರಚಾರ ಸಭೆಯುದ್ಧಕ್ಕೂ ರಾಜ್ಯ ಸರ್ಕಾರ, ಯೋಗೇಶ್ವರ್ ಹಾಗೂ ಡಿ.ಕೆ. ಸಹೋದರರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಯಾಗಿ ಕಾಂಗ್ರೆಸ್‌ನವರು ಸಹ ಪಟ್ಟಣ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಜೆಡಿಎಸ್ ಹಣದ ಹೊಳೆ ಕೆಲಸ ಮಾಡ‌ಲ್ಲ: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಪುತ್ರ ನಿಖಿಲ್ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ಜಿಲ್ಲೆಯಲ್ಲಿ ಅವರ ಪಕ್ಷದ 7 ಶಾಸಕರಿದ್ದರು. ಆಗಲೂ ಅವರು ಹಣದ ಹೊಳೆ ಹರಿಸಿ, ಅಧಿಕಾರದ ಪ್ರಭಾವ ಬೀರಿದರೂ ಮಗನನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಚಾರ ಸಭೆಯಲ್ಲಿ ವ್ಯಂಗ್ಯವಾಡಿದರು.

‘ಸರ್ಕಾರ ಕಿತ್ತೊಗೆಯುವುದೇ ಎಚ್‌ಡಿಕೆ ಗುರಿ: ‘ಕೇಂದ್ರ ಸಚಿವರಾಗಿರುವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅಭಿವೃದ್ಧಿ ಬದಲು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವುದೇ ಗುರಿಯಾಗಿದೆ‘ ಎಂದು ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಲ್ಲಿ ಗುರುವಾರ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಪಕ್ಷದ ಕಾರ್ಯಕರ್ತರು ಹೂಮಳೆಗರೆದು ಅಭಿಮಾನ ಮೆರೆದರು
ಚನ್ನಪಟ್ಟಣ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಗುರುವಾರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಕಾರ್ಯಕರ್ತರಿಗೆ ನಮಸ್ಕರಿಸಿದರು
ಚುನಾವಣೆಗೆ ಮೊದಲು ಡಿ.ಕೆ ಸಹೋದರರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹಾದಿಬೀದಿಯಲ್ಲಿ ಬೈದಾಡಿಕೊಂಡಿದ್ದರು. ಈಗ ಪರಸ್ಪರ ಅಪ್ಪಿಕೊಂಡು ನಾಟಕ ಮಾಡುತ್ತಿದ್ದಾರೆ. ಇವರ ನಾಟಕ ಎಷ್ಟು ದಿನ ನಡೆಯುತ್ತದೆ ಎಂದು ನಾನೂ ನೋಡುತ್ತೇನೆ
ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ನೀರಾವರಿ ಸೇರಿದಂತೆ ನಾನು ಅಧಿಕಾರದಲ್ಲಿದ್ದಾಗ ಮಾಡಿರುವ ಕೆಲಸಗಳ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಎದುರಾಳಿಗಳು ಮಾಡುವ ಸುಳ್ಳು ಆರೋಪಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅಭಿವೃದ್ಧಿಯೇ ನನ್ನ ಗೆಲುವಿಗೆ ಶ್ರೀರಕ್ಷೆ
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ
ಅಧಿಕಾರದಲ್ಲಿದ್ದಾಗ ಏನೂ ಕೆಲಸ ಮಾಡದ ಕುಮಾರಸ್ವಾಮಿ ಅವರು‌ ಈಗ ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಅಪ್ಪ ಮತ್ತು ತಾತ ಮಾಡದ ಕೆಲಸವನ್ನು ಮೊಮ್ಮಗ ಮಾಡುತ್ತಾನೆಯೇ?
ಡಿ.ಕೆ.ಸುರೇಶ್ ಮಾಜಿ ಸಂಸದ
ಹಿಂದೂ ಸಮಾಜದ ಆಸ್ತಿ ಕಾಪಾಡಲು ವಕ್ಫ್ ವಿವಾದವನ್ನು ನಾವು ಸಂಘಟಿತವಾಗಿ ಎದುರಿಸಬೇಕಿದೆ. ಹಳೆ ಮೈಸೂರು ಭಾಗದಲ್ಲಿ ಶಾಂತಿ ಕದಡಲು ಪ್ರಯತ್ನಿಸಲಾಗುತ್ತಿದೆ. ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ಮುಸ್ಲಿಮರಿಗೂ ದೇಶದ ಕಾನೂನು ಅನ್ವಯವಾಗಬೇಕು
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದ
ಸುರೇಶ್ ಆಡಿಯೊ ಕೇಳಿಸಿದ ಎಚ್‌ಡಿಕೆ
ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವಾಗ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ತಮ್ಮ ಹಳೆ ಆಡಿಯೊ ವಿಡಿಯೊ ತೋರಿಸಿದ್ದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಕೂಡ ಯೋಗೇಶ್ವರ್ ಅವರನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ನಿಂದಿಸಿದ್ದಾರೆ ಎನ್ನಲಾದ ಆಡಿಯೊ ವಿರುಪಾಕ್ಷಿಪುರದಲ್ಲಿ ನಡೆದ ಪ್ರಚಾರದ ಸಂದರ್ಭದಲ್ಲಿ ಸುದ್ದಿಗಾರರಿಗೆ ಕೇಳಿಸಿದರು. ‘ಸಿ.ಪಿ ಯೋಗೇಶ್ವರ್ ಯಾರ‍್ಯಾರಿಗೆ ಟೋಪಿ ಹಾಕವ್ನೇ ಬಿಡದಿಯಲ್ಲಿ ಹೋಗಿ ಕೇಳಿದ್ರೆ ಎಲ್ಲ ಹೇಳ್ತಾರೆ. ಮೆಗಾ ಸಿಟಿ ಮಾಡ್ತಿನಿ ಅಂತ ಟೋಪಿ ಹಾಕಿದ್ನಲ್ಲಾ ಮರೆತೋಗಿದ್ದಾನಾ?’ ಎಂಬ ಆಡಿಯೊ ಕೇಳಿಸಿದ ಅವರು ‘ಇವರ ಅಸಲಿ ಬಂಡವಾಳ ಎಲ್ಲರಿಗೂ ಗೊತ್ತಿದೆ. ಅದಕ್ಕೆ ಚನ್ನಪಟ್ಟಣ ಜನರೇ ಉತ್ತರ ಕೊಡುತ್ತಾರೆ’ ಎಂದು ವಾಗ್ದಾಳಿ ನಡೆಸಿದರು. ಕರ್ನಾಟಕ ಪಾಕ್‌ನಲ್ಲಿದೆಯೇ? ‘ರಾಜ್ಯದಲ್ಲಿ ಕ್ಯಾನ್ಸರ್‌ನಂತೆ ಹರಡುತ್ತಿರುವ ವಕ್ಫ್ ಭೂತ ಹಿಂದೂಗಳ ಭೂಮಿಯನ್ನು ಕಬಳಿಸುತ್ತಿದೆ. ಕರ್ನಾಟಕ ಭಾರತದಲ್ಲಿದೆಯಾ ಅಥವಾ ಪಾಕಿಸ್ತಾನದಲ್ಲಿದೆಯಾ? ರಾಜ್ಯದ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯಕ್ಕೆ ಒಂದು ಕಾನೂನು ಹಿಂದೂ ಸಮಾಜಕ್ಕೆ ಇನ್ನೊಂದು ಕಾನೂನು ಎಂಬಂತೆ ವರ್ತಿಸುತ್ತಿದೆ. ದೇವಾಲಯಗಳು ಹಾಗೂ ಮಠಗಳ ಜಮೀನನ್ನು ವಕ್ಫ್ ಆಸ್ತಿ ಎಂದು ತೋರಿಸಲಾಗುತ್ತಿದೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ದರ್ಗಾ ಆಸ್ತಿ ಎಂದು ಬರುತ್ತಿದೆ’ ಎಂದು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹುಣಸನಹಳ್ಳಿಯಲ್ಲಿ ನಿಖಿಲ್ ಪರ ನಡೆದ ಪ್ರಚಾರಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಸವಾಲು ‘ಕುಮಾರಸ್ವಾಮಿ ಅವರ ಗುರಿ ಅಭಿವೃದ್ಧಿಯಲ್ಲ ಬದಲಿಗೆ ಸರ್ಕಾರ ಬೀಳಿಸೋದು’ ಎಂಬ ಸಚಿವ ಕೃಷ್ಣ ಭೈರೇಗೌಡ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ‘ಜನರ ಆಶೀರ್ವಾದದಿಂದ ನಿಖಿಲ್ ಶಾಸಕನಾಗುವುದು ಖಚಿತ. ವಿಧಾನಸಭೆಯಲ್ಲಿ ಅಭಿವೃದ್ಧಿ ಎಂದರೇನು ಎಂದು ನಿಖಿಲ್ ಅವರೇ ಕಲಾಪದಲ್ಲಿ ರೂಲ್– 69ರ ಅಡಿಯಲ್ಲಿ ಚರ್ಚಿಸುತ್ತಾರೆ. ಇವರ ಎಲ್ಲ ಟೀಕೆಗೂ ನಿಖಿಲ್ ಉತ್ತರ ಕೊಡುತ್ತಾರೆ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.