ADVERTISEMENT

Channapatna Bypoll | ‘ಸೈನಿಕ’ನಿಗೆ ಗ್ರೀನ್ ಸಿಗ್ನಲ್ ಸಾಧ್ಯತೆ!

ಡಿ.ಕೆ ಸಹೋದರರಿಗೆ ಪೈಪೋಟಿ ನೀಡಬಲ್ಲ ಸ್ಥಳೀಯ ಪ್ರಬಲ ನಾಯಕ

ಓದೇಶ ಸಕಲೇಶಪುರ
Published 2 ಜುಲೈ 2024, 4:07 IST
Last Updated 2 ಜುಲೈ 2024, 4:07 IST
ಸಿ.ಪಿ. ಯೋಗೇಶ್ವರ್‌
ಸಿ.ಪಿ. ಯೋಗೇಶ್ವರ್‌   

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.

ಪಕ್ಷದ ವರಿಷ್ಠರ ಭೇಟಿಗೆ ದೆಹಲಿಗೆ ಹೋಗಿದ್ದ ಯೋಗೇಶ್ವರ್, ಕುಮಾರಸ್ವಾಮಿ ಅವರನ್ನು ಕಂಡು ಮಾತುಕತೆ ನಡೆಸಿದ್ದಾರೆ. ಚನ್ನಪಟ್ಟಣದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.ಅದಕ್ಕೆ ಕುಮಾರಸ್ವಾಮಿ ಸಹ ಒಪ್ಪಿದ್ದಾರೆ ಎನ್ನಲಾಗಿದೆ. ಮೈತ್ರಿ ಪಕ್ಷಗಳ ಮೂಲಗಳ ಪ್ರಕಾರ ಯೋಗೇಶ್ವರ್‌ ಅವರಿಗೆ ಬಿಜೆಪಿ ಟಿಕೆಟ್ ಅಂತಿಮವಾಗುವ ಲಕ್ಷಣ ದಟ್ಟವಾಗಿದೆ. 

ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸತತ ಎರಡು ಸಲ ಚನ್ನಪಟ್ಟಣದಿಂದ ಜಯ ಸಾಧಿಸಿದ್ದು ಅವರ ಒಲವು ಯಾರ ಪರ ಇದೆಯೋ ಅವರೇ ಸ್ಪರ್ಧಿಯಾಗುವುದು ಬಹುತೇಕ ಖಚಿತ. ಅಭ್ಯರ್ಥಿ ಆಯ್ಕೆಯನ್ನು ಬಿಜೆಪಿಯವರು ಸಹ ಕುಮಾರಸ್ವಾಮಿ ಅವರಿಗೆ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಈಗಾಗಲೇ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ. ಹಾಗಾಗಿ, ಕುಮಾರಸ್ವಾಮಿ ಅವರಿಗೆ ಪಕ್ಷ ಪ್ರತಿಷ್ಠೆಗಿಂತ ಗೆಲುವೇ ಮುಖ್ಯವಾಗಿದೆ.

ಸಿಪಿವೈ ಅನಿವಾರ್ಯವೇ?: ‘ಸದ್ಯ ಕ್ಷೇತ್ರದಲ್ಲಿ ಯೋಗೇಶ್ವರ್ ಪರ ಹೆಚ್ಚಿನ ದನಿ ಮೊಳಗುತ್ತಿದೆ. ಬಿಜೆಪಿಯ ಜಿಲ್ಲಾಧ್ಯಕ್ಷರೇ ಸ್ವತಃ ಸುದ್ದಿಗೋಷ್ಠಿ ನಡೆಸಿ ಸಿಪಿವೈಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ಹೆಸರು ಅಷ್ಟಾಗಿ ಕೇಳಿ ಬರುತ್ತಿಲ್ಲ. ಚುನಾವಣೆ ಗೆಲುವು ಎಚ್‌ಡಿಕೆಗೆ ಪ್ರತಿಷ್ಠೆಯಾಗಿರುವುದರಿಂದ, ಸಿಪಿವೈ ಆಯ್ಕೆ ಅನಿವಾರ್ಯವಾಗಿದೆ’ ಎನ್ನುತ್ತಾರೆ ಸ್ಥಳೀಯ ಬಿಜೆಪಿ ರಾಜಕಾರಣಿಯೊಬ್ಬರು.

‘ಸಚಿವ ಹಾಗೂ ಶಾಸಕನಾಗಿ ಯೋಗೇಶ್ವರ್ ಅವರಿಗೆ ಹೆಚ್ಚಿನ ರಾಜಕೀಯ ಅನುಭವವಿದೆ. ಕ್ಷೇತ್ರದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಅವರಿಗೆ ತಮ್ಮದೇ ಮತಬ್ಯಾಂಕ್ ಇದೆ. ತಾಲ್ಲೂಕಿನ ನೀರಾವರಿ ಅಭಿವೃದ್ಧಿಗೆ ಅವರ ಕೊಡುಗೆ ದೊಡ್ಡದಾಗಿದೆ. ಚುನಾವಣೆಯಲ್ಲಿ ಸ್ಥಳೀಯ ಸ್ವಾಭಿಮಾನದ ಪ್ರಶ್ನೆ ಬಂದರೆ, ಅದು ಇವರ ಪರ ಕೆಲಸ ಮಾಡಲಿದೆ. ಕಳೆದೆರಡು ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರು, ಎಚ್‌ಡಿಕೆಗೆ ತೀವ್ರ ಪೈಪೋಟಿ ನೀಡಿ ಸೋತಿದ್ದಾರೆ. ಈಗ ಟಿಕೆಟ್ ಕೊಟ್ಟರೆ, ಬಿಜೆಪಿ ಜೊತೆಗೆ ಜೆಡಿಎಸ್ ಮತಗಳು ಕ್ರೋಢಿಕರಣಗೊಂಡು ಗೆಲುವಿನ ಹಾದಿ ಸುಲಭವಾಗಲಿದೆ’ ಎಂಬ ರಾಜಕೀಯ ಲೆಕ್ಕಾಚಾರ ಬಿಚ್ಚಿಟ್ಟರು.

ಚಿಹ್ನೆ ಲೆಕ್ಕಕ್ಕಿಲ್ಲ: ಮಾಧ್ಯಮದವರೊಂದಿಗೆ ಇತ್ತೀಚೆಗೆ ಮಾತನಾಡಿದ್ದ ಸಿಪಿವೈ, ‘ಚನ್ನಪಟ್ಟಣ ನನ್ನ ಕ್ಷೇತ್ರವಾಗಿರುವುದರಿಂದ ಸ್ವಾಭಾವಿಕವಾಗಿಯೇ ನಾನು ಆಕಾಂಕ್ಷಿ. ಟಿಕೆಟ್ ವಿಷಯದಲ್ಲಿ ಎಚ್‌ಡಿಕೆ ನಿರ್ಧಾರವೇ ಅಂತಿಮ. ಪಕ್ಷದ ವರಿಷ್ಠರು ಸೂಚಿಸಿದರಷ್ಟೇ ಸ್ಪರ್ಧಿಸುವೆ. ನಮ್ಮದೀಗ ಎನ್‌ಡಿಎ ಮೈತ್ರಿಕೂಟವಾಗಿರುವುದರಿಂದ ಯಾವ ಚಿಹ್ನೆಯಿಂದ ಸ್ಪರ್ಧಿಸುತ್ತೇವೆ ಎಂಬುದಕ್ಕಿಂತ ಗೆಲುವು ಮುಖ್ಯ’ ಎನ್ನುವ ಮೂಲಕ ಜೆಡಿಎಸ್‌ ಟಿಕೆಟ್‌ನಿಂದಲೂ ಕಣಕ್ಕಿಳಿಯಲು ಸಿದ್ಧ ಎಂಬ ಇಂಗಿತ ವ್ಯಕ್ತಪಡಿಸಿದ್ದರು.

ಜಿಲ್ಲೆಯ ರಾಜಕೀಯವು ಕೆಲ ದಶಕಗಳಿಂದ ಡಿಕೆಶಿ ಮತ್ತು ಎಚ್‌ಡಿಕೆ ಕುಟುಂಬಗಳ ನಡುವಣ ಸಮರಕ್ಕೆ ಸಾಕ್ಷಿಯಾಗುತ್ತಲೇ ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಸಹೋದರರು ನಿಖಿಲ್‌ ಸೋಲಿಗೆ ಖೆಡ್ಡಾ ತೋಡಿ ಯಶಸ್ವಿಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ವಿರುದ್ಧ ತಮ್ಮ ಕುಟುಂಬದ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿರುವ ಎಚ್‌ಡಿಕೆ, ಪುತ್ರನ ಸೋಲಿನ ಸೇಡು ತೀರಿಸಿಕೊಂಡಿದ್ದರು.

ಎಚ್.ಡಿ. ಕುಮಾರಸ್ವಾಮಿ

ಕುಟುಂಬಗಳ ಜಿದ್ದಾಜಿದ್ದಿ

ಉಪ ಚುನಾವಣೆಯು ಎಚ್‌ಡಿಕೆ ಮತ್ತು ಡಿಕೆಶಿ ಕುಟುಂಬಗಳ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಸಹೋದರ ಸುರೇಶ್ ಸೋಲಿನ ಪ್ರತೀಕಾರಕ್ಕೆ ಡಿಕೆಶಿ ಚನ್ನಪಟ್ಟಣ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಅವರನ್ನು ಹಿಮ್ಮೆಟ್ಟಿಸಲು ಎಚ್‌ಡಿಕೆಗೆ ಪ್ರಬಲ ಅಭ್ಯರ್ಥಿ ಬೇಕಿದೆ. ಈಗಾಗಲೇ ಎರಡು ಚುನಾವಣೆಗಳಲ್ಲಿ ಸತತ ಸೋಲು ಕಂಡಿರುವ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಮೈತ್ರಿ ಪಕ್ಷದ ಸಿಪಿವೈ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಸಹೋದರರಿಗೆ ಸೆಡ್ಡು ಹೊಡೆಯುವ ತಂತ್ರ ಎಚ್‌ಡಿಕೆ ಅವರದ್ದಾಗಿದೆ. ಇದರಿಂದ ಜಿಲ್ಲೆಯ ರಾಜಕಾರಣದಲ್ಲಿ ಅವರು ಮತ್ತಷ್ಟು ಹಿಡಿತ ಸಾಧಿಸಿದಂತಾಗುತ್ತದೆ ಎನ್ನುತ್ತಾರೆ ಹಿರಿಯ ರಾಜಕಾರಣಿಯೊಬ್ಬರು.

ಅಭ್ಯರ್ಥಿ ಆಯ್ಕೆ: ಸದ್ಯದಲ್ಲೇ ಸಭೆ

‘ಚನ್ನಪಟ್ಟಣ ಉಪ ಚುನಾವಣೆಗೆ ಜೆಡಿಎಸ್‌ನಿಂದ ನಿಖಿಲ್‌ ಕುಮಾರಸ್ವಾಮಿ ಮತ್ತು ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್ ಅವರು ಸ್ಪರ್ಧಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಮೈತ್ರಿಕೂಟಕ್ಕೆ ಕ್ಷೇತ್ರದ ಗೆಲುವು ಪ್ರತಿಷ್ಠೆಯಾಗಿರುವುರಿಂದ ಅಭ್ಯರ್ಥಿ ಆಯ್ಕೆ ಕುರಿತು ಸದ್ಯದಲ್ಲೇ ಎನ್‌ಡಿಎ ನಾಯಕರು ಮತ್ತು ಮುಖಂಡರ ಸಭೆ ನಡೆಸಲಾಗುವುದು’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.