ADVERTISEMENT

ಚನ್ನಪಟ್ಟಣ ಉಪ ಚುನಾವಣೆ: ನಿಖಿಲ್–ಯೋಗೇಶ್ವರ್ ನಡುವೆ ನೇರ ಹಣಾಹಣಿ

ಓದೇಶ ಸಕಲೇಶಪುರ
Published 11 ನವೆಂಬರ್ 2024, 0:01 IST
Last Updated 11 ನವೆಂಬರ್ 2024, 0:01 IST
   

ರಾಮನಗರ: ನಾಮಪತ್ರ ಸಲ್ಲಿಕೆಗೂ ಮುಂಚೆ ಒನ್‌ ಸೈಡ್ ಮ್ಯಾಚ್‌ನಂತೆ ಕಾಣುತಿತ್ತು. ಚಿತ್ರಣ ಈಗ ಸಂಪೂರ್ಣ ಬದಲಾಗಿದೆ. ಇಬ್ಬರ ನಡುವೆ ತೀವ್ರ ಪೈಪೋಟಿ ಇದೆ...

– ಇದು ಉಪ ಚುನಾವಣೆ ಎದುರಿಸುತ್ತಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತದಾರರ ಅಭಿಪ್ರಾಯದ ಸಾರಾಂಶ. 

ತುರುಸಿನ ಪೈಪೋಟಿಗೆ ಸಾಕ್ಷಿಯಾಗುತ್ತಲೇ ಬಂದಿರುವ ಬೊಂಬೆನಾಡಿನ ರಾಜಕೀಯ ಜಿದ್ದಾಜಿದ್ದಿ ಈ ಚುನಾವಣೆಯಲ್ಲೂ ಯಥಾರೀತಿ ಮುಂದುವರಿದಿದೆ.

ADVERTISEMENT

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರದಲ್ಲಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಬಿಜೆಪಿ–ಜೆಡಿಎಸ್ ಮೈತ್ರಿ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದ ಸಿ.ಪಿ. ಯೋಗೇಶ್ವರ್ ಕಡೆ ಗಳಿಗೆಯಲ್ಲಿ ನಡೆದ ಅಚ್ಚರಿಯ ಬೆಳವಣಿಗೆಗಳಿಂದಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.

ಸತತ ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಇಬ್ಬರಿಗೂ ಇದು ಗೆಲ್ಲಲೇ ಬೇಕಾದ ಅನಿವಾರ್ಯತೆ ಇರುವ ಚುನಾವಣೆ.  ಮೂರನೇ ಸಲ ಗೆಲುವು ಕೈ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿರುವ ಇಬ್ಬರೂ ಅಭ್ಯರ್ಥಿಗಳು ರಾಜಕೀಯ ಅಸ್ತಿತ್ವದ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ.

ಅಳಿವು– ಉಳಿವಿನ ಪ್ರಶ್ನೆ:

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಕ್ಷೇತ್ರ ಗೆದ್ದಿದ್ದ ಜೆಡಿಎಸ್‌ಗೆ ಉಪ ಚುನಾವಣೆಯಲ್ಲಿ ಬಿಜೆಪಿ ಸಖ್ಯವಿದೆ. ಜೆಡಿಎಸ್‌ ಅಭ್ಯರ್ಥಿ ಕುಮಾರಸ್ವಾಮಿ ಅವರಿಗೆ ಪೈಪೋಟಿ ನೀಡಿದ್ದ ಬಿಜೆಪಿಯ ಯೋಗೇಶ್ವರ್‌, ಈಗ ‘ಕೈ’ ಹಿಡಿದು ಕುಮಾರಸ್ವಾಮಿ ಅವರ ಪುತ್ರನಿಗೆ ಸವಾಲೊಡ್ಡಿದ್ದಾರೆ. ಈ ಬಾರಿ ಡಿ.ಕೆ ಸಹೋದರರು ಅವರ ಬೆನ್ನಿಗಿದ್ದಾರೆ.

ಈ ಚುನಾವಣೆ ಸಿ.ಪಿ. ಯೋಗೇಶ್ವರ್‌ ಅವರಿಗೆ ರಾಜಕೀಯದ ಅಳಿವು, ಉಳಿವಿನ ಪ್ರಶ್ನೆಯಾದರೆ, ಜೆಡಿಎಸ್‌ಗೆ ಜಿಲ್ಲೆಯಲ್ಲಿ ಅಸ್ತಿತ್ವದ ಪ್ರಶ್ನೆಯಾಗಿದೆ. 

ಈ ಚುನಾವಣೆ ಎಚ್‌ಡಿಕೆ ಮತ್ತು ಡಿ.ಕೆ ಸಹೋದರರು ನಡುವಣ ಸಮರವೂ ಹೌದು. ಜಿಲ್ಲೆಯಲ್ಲಿ ಪಾರುಪತ್ಯ ಸಾಧಿಸಲು ಇವರಿಬ್ಬರ ನಡುವೆ ನಡೆಯುತ್ತಿರುವ ಪೈಪೋಟಿಗೆ ಉಪ ಸಮರವೂ ವೇದಿಕೆಯಾಗಿದೆ. ನಿಖಿಲ್ ಸೋತರೆ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಇರುವ ಜೆಡಿಎಸ್‌ ಪ್ರಾತಿನಿಧ್ಯ ಶೂನ್ಯಕ್ಕೆ ಇಳಿಯಲಿದೆ.‌ ಪಕ್ಷದ ಹಿಡಿತವೂ ಸಡಿಲಗೊಳ್ಳಲಿದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಡಿಕೆಶಿ, ಎಚ್‌ಡಿಕೆ ಅಗ್ನಿಪರೀಕ್ಷೆ:

‘ಯೋಗೇಶ್ವರ್ ಗೆಲುವಿನ ಮೂಲಕ ಎಚ್‌ಡಿಕೆಗೆ ಎದಿರೇಟು ನೀಡಿ ಜಿಲ್ಲೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಡಿ.ಕೆ ಸಹೋದರರ ತಂತ್ರ ಏನಾದರೂ ತಿರುಮಂತ್ರವಾದರೆ ಅದು ಡಿ.ಕೆ. ಶಿವಕುಮಾರ್ ನಾಯಕತ್ವದ ವೈಫಲ್ಯ’ ಎನ್ನುತ್ತಾರೆ ಸ್ಥಳೀಯರು. 

ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿ.ಕೆ. ಸುರೇಶ್‌ ಅವರಿಗಾದ ಸೋಲಿನ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ಅವರ ನೆಲೆಯಲ್ಲೇ ಸವಾಲು ಹಾಕಿರುವ ಶಿವಕುಮಾರ ನಾಯಕತ್ವಕ್ಕೆ ಈ ಚುನಾವಣೆ ಅಗ್ನಿಪರೀಕ್ಷೆ. ಎನ್‌ಡಿಎ ಬೆಂಬಲದೊಂದಿಗೆ ಚನ್ನಪಟ್ಟಣದಲ್ಲಿ ಡಿ.ಕೆ ಸಹೋದರರನ್ನು ಹಿಮ್ಮೆಟ್ಟಿಸಿ ತಮ್ಮ ನಾಯಕತ್ವ ಸಾಬೀತುಪಡಿಸುವ ಜೊತೆಗೆ ಜಿಲ್ಲೆಯಲ್ಲಿ ಪಕ್ಷದ ಅಡಿಪಾಯ ಭದ್ರಪಡಿಸಬೇಕಾದ ಸವಾಲು ಎಚ್‌ಡಿಕೆ ಅವರದ್ದು.

ಕೆರೆಗಳಿಗೆ ನೀರು ತುಂಬಿಸಿ ನೀರಾವರಿ ಸೌಲಭ್ಯ ಕಲ್ಪಿಸಿದ ಕ್ರೆಡಿಟ್ ರಾಜಕೀಯ ಮತ್ತು ಜೆಡಿಎಸ್‌ ನಾಯಕರ ಕಣ್ಣೀರು ಪ್ರಚಾರದ ಉದ್ದಕ್ಕೂ ಹೆಚ್ಚು ಸದ್ದು ಮಾಡುತ್ತಿದೆ. ಅಭಿವೃದ್ಧಿ ವಿಷಯದ ಜೊತೆಯಲ್ಲಿಯೇ ವೈಯಕ್ತಿಕ ಟೀಕೆ, ಟಿಪ್ಪಣಿ ಸಹ ಎರಡೂ ಪಾಳಯದಲ್ಲಿ ಕೇಳಿ ಬರುತ್ತಿವೆ. 

ಅಪ್ಪ–ಅಜ್ಜನೇ ಆಸರೆ

ಜೆಡಿಎಸ್‌ಗೆ ತನ್ನದೇ ಕಾರ್ಯಕರ್ತರ ಪಡೆ ಇರುವುದು ನಿಖಿಲ್‌ ಆತ್ಮವಿಶ್ವಾಸ ಹೆಚ್ಚಿಸಿದೆ. ಮೊಮ್ಮಗನ ಗೆಲುವಿಗಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಇಳಿ ವಯಸ್ಸಿನಲ್ಲೂ ಅಖಾಡಕ್ಕಿಳಿದು ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಮೈತ್ರಿ ಶಾಸಕರು, ಮಾಜಿ ಸಚಿವರು ಕ್ಷೇತ್ರದಲ್ಲಿ ಬೀಡುಬಿಟ್ಟು ಮತ ಯಾಚಿಸುತ್ತಿದ್ದಾರೆ.

ನಾಮಪತ್ರ ಸಲ್ಲಿಸಿದ ಮಾರನೇ ದಿನದಿಂದಲೇ ಪ್ರಚಾರಕ್ಕಿಳಿದಿರುವ ಕುಮಾರಸ್ವಾಮಿ ಈ ಬಾರಿ ಶತಾಯಗತಾಯ ಪುತ್ರನನ್ನು ಗೆಲುವಿನ ದಡ ಸೇರಿಸಲು ಪಣ ತೊಟ್ಟಿದ್ದಾರೆ.

31 ಸ್ಪರ್ಧಿಗಳು: 

ನಿಖಿಲ್ ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ಅಲ್ಲದೇ ಎಸ್‌ಡಿಪಿಐ ಅಭ್ಯರ್ಥಿ ಮೊಹಮ್ಮದ್ ಫಾಜೀಲ್ ಸೇರಿದಂತೆ 31 ಸ್ಪರ್ಧಿಗಳು ಕಣದಲ್ಲಿ ಇದ್ದಾರೆ. ಈ ಪೈಕಿ 21 ಪಕ್ಷೇತರರಿದ್ದಾರೆ. ಪಕ್ಷೇತರರು ಪಡೆಯುವ ಮತಗಳು ಪ್ರಮುಖ ಹುರಿಯಾಳುಗಳ ಗೆಲುವು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸಿಪಿವೈ ಸ್ವಂತ ಬಲಕ್ಕೆ ‘ಕೈ’ ಸಾಥ್

ಪಕ್ಷಾಂತರ ರಾಜಕಾರಣ ಮಾಡಿದರೂ ಯೋಗೇಶ್ವರ್ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸಿನ ಮತಬಲ ಹೊಂದಿದ್ದಾರೆ. ರಾಜಕಾರಣ ಶುರು ಮಾಡಿದಾಗಿನಿಂದ ಯೋಗೇಶ್ವರ್ ವೈಯಕ್ತಿಕ ವರ್ಚಸ್ಸಿನ ಮೇಲೆ ರಾಜಕೀಯ ಮಾಡುತ್ತಿದ್ದಾರೆ.  ಇತ್ತೀಚಿನ ಎರಡು ಚುನಾವಣೆಗಳಲ್ಲಿ ಜೆಡಿಎಸ್‌ ವಿರುದ್ಧ ಮುಗ್ಗರಿಸಿರುವ ಅವರಿಗೆ ಈ ಚುನಾವಣೆಯಲ್ಲಿ ‘ಕೈ’ ಬಲ ಸಿಕ್ಕಿದೆ. ಆಡಳಿತಾರೂಢ ಸರ್ಕಾರ ಬೆನ್ನಿಗಿದೆ. ಆರಂಭದಿಂದಲೂ ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರಚಾರಕ್ಕೆ ಸಾಥ್ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಶಿವಕುಮಾರ್ ಸೇರಿದಂತೆ ಡಜನ್‌ಗೂ ಹೆಚ್ಚು ಸಚಿವರು ಶಾಸಕರು ಸಂಸದರು ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ನಿಖಿಲ್‌ ಬೆನ್ನಿಗೆ ಘಟನಾನುಘಟಿಗಳು ಜೆಡಿಎಸ್‌ಗೆ ತನ್ನದೇ ಕಾರ್ಯಕರ್ತರ ಪಡೆ ಇರುವುದು ನಿಖಿಲ್‌ ಆತ್ಮವಿಶ್ವಾಸ ಹೆಚ್ಚಿಸಿದೆ. ಮೊಮ್ಮಗನ ಗೆಲುವಿಗಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಇಳಿ ವಯಸ್ಸಿನಲ್ಲೂ ಅಖಾಡಕ್ಕಿಳಿದು ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ ಬಿ.ವೈ. ವಿಜಯೇಂದ್ರ ಕೇಂದ್ರ ಸಚಿವರಾದ ವಿ. ಸೋಮಣ್ಣ ಶೋಭಾ ಕರಂದ್ಲಾಜೆ ಸೇರಿದಂತೆ ಮೈತ್ರಿ ಶಾಸಕರು ಮಾಜಿ ಸಚಿವರು ಕ್ಷೇತ್ರದಲ್ಲಿ ಬೀಡುಬಿಟ್ಟು ಮತಯಾಚಿಸುತ್ತಿದ್ದಾರೆ. ನಾಮಪತ್ರ ಸಲ್ಲಿಸಿದ ಮಾರನೇ ದಿನದಿಂದಲೇ ಪ್ರಚಾರಕ್ಕಿಳಿದಿರುವ ಕುಮಾರಸ್ವಾಮಿ ಈ ಬಾರಿ ಶತಾಯಗತಾಯ ಪುತ್ರನನ್ನು ಗೆಲುವಿನ ದಡ ಸೇರಿಸಲು ಪಣ ತೊಟ್ಟಿದ್ದಾರೆ.

ಒಕ್ಕಲಿಗರ ಮತ ವಿಭಜನೆ; ‘ಅಹಿಂದ’ ಭಜನೆ

ಕ್ಷೇತ್ರದಲ್ಲಿ ಸುಮಾರು 1.10 ಲಕ್ಷ ಒಕ್ಕಲಿಗರ ಮತಗಳಿವೆ ಎಂದು ಹೇಳಲಾಗುತ್ತಿದೆ. ಎರಡನೇ ಸ್ಥಾನದಲ್ಲಿ ಅಹಿಂದ ಮತಗಳ ಪೈಕಿ ಅಲ್ಪಸಂಖ್ಯಾತರು ಮತ್ತು ದಲಿತ ಮತಗಳೇ ಅಂದಾಜು 70 ಸಾವಿರದಷ್ಟಿವೆ ಎನ್ನಲಾಗಿದೆ. 

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಿಬ್ಬರೂ ಒಕ್ಕಲಿಗರಾಗಿರುವುದರಿಂದ ಆ ಸಮುದಾಯದ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ.

ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳು ಕೂಡ ಎರಡೂ ಕಡೆ ಹಂಚಿಕೆಯಾಗುವುದರಿಂದ ಇಬ್ಬರ ಚಿತ್ತ ಅಲ್ಪಸಂಖ್ಯಾತರತ್ತ ಹರಿದಿದೆ. ಈ ಸಮುದಾಯವನ್ನು ಸೆಳೆಯಲು ಎರಡೂ ಪಕ್ಷದವರು ಕಸರತ್ತು ನಡೆಸಿದ್ದಾರೆ.

ಎಸ್‌ಡಿಪಿಐ ಅಭ್ಯರ್ಥಿ ಮೊಹಮ್ಮದ್ ಫಾಜೀಲ್ ಕಣದಲ್ಲಿರುವುದು ಯಾರಿಗೆ ಪೂರಕ ಮತ್ತು ಮಾರಕ ಎಂಬ ಬಗ್ಗೆ ಕ್ಷೇತ್ರದಲ್ಲಿ ಕುತೂಹಲಕಾರಿ ಚರ್ಚೆ ನಡೆಯುತ್ತಿವೆ. ಒಂದು ವೇಳೆ ಫಾಜೀಲ್‌ ಹೆಚ್ಚಿನ ಪ್ರಮಾಣದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಸೆಳೆದರೆ ಕಾಂಗ್ರೆಸ್‌ಗೆ ಕಷ್ಟವಾಗಲಿದೆ.

‘ಗ್ಯಾರಂಟಿ’ ಯೋಜನೆಗಳು ಪಕ್ಷಾತೀತ ಮತ ತರುವ ವಿಶ್ವಾಸದಲ್ಲಿ ‘ಕೈ’ ದಂಡು ಇದ್ದರೆ, ಅಭಿವೃದ್ಧಿ ಕೆಲಸಗಳು ಪುತ್ರನ ಕೈ ಹಿಡಿಯಲಿವೆ ಎಂಬ ನಂಬಿಕೆ ಕುಮಾರಸ್ವಾಮಿ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.