ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ನ. 23ರಂದು ಮತ ಎಣಿಕೆ ನಡೆಯಲಿದೆ. ಚನ್ನಪಟ್ಟಣಕ್ಕೆ ಮುಂದಿನ ಮೂರೂವರೆ ವರ್ಷ ಯಾರು ‘ಶಾಸಕ’ರಾಗಲಿದ್ದಾರೆ ಎಂಬ ಕುತೂಹಲಕ್ಕೆ ಮಧ್ಯಾಹ್ನದ ಹೊತ್ತಿಗೆ ಮತದಾರರ ತೀರ್ಪು ಹೊರಬೀಳಲಿದೆ.
ಪ್ರಮುಖ ಅಭ್ಯರ್ಥಿಗಳಾದ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಸಿ.ಪಿ. ಯೋಗೇಶ್ವರ್ ನಡುವೆ ನೇರ ಹಣಾಹಣಿಯೊಂದಿಗೆ, ತೀವ್ರ ಪೈಪೋಟಿ ನಡೆದಿದೆ. ಇವರೊಂದಿಗೆ ಇತರ 8 ಪಕ್ಷಗಳ ಅಭ್ಯರ್ಥಿಗಳು ಹಾಗೂ 21 ಪಕ್ಷೇತರರು ಸಹ ಅಖಾಡದಲ್ಲಿದ್ದಾರೆ.
ಮತದಾನ ನಡೆದ ದಿನದಿಂದಲೂ ಇದ್ದ ಫಲಿತಾಂಶದ ಕುತೂಹಲವು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಇದೀಗ, ಮತಗಳ ಎಣಿಕೆ ದಿನ ಹತ್ತಿರಕ್ಕೆ ಬರುತ್ತಿದ್ದಂತೆ ಅಭ್ಯರ್ಥಿಗಳು, ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಎದೆಬಡಿತವನ್ನು ಹೆಚ್ಚಿಸಿದೆ.
ಗೆಲುವಿನ ಲೆಕ್ಕಾಚಾರ: ಕ್ಷೇತ್ರದಲ್ಲಿರುವ ಜೆಡಿಎಸ್–ಬಿಜೆಪಿ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ, ‘ಉಪ ಚುನಾವಣೆಯಲ್ಲಿ ಯಾರು ಗೆಲ್ಲಬಹುದು?’ ಎಂದು ಪ್ರಶ್ನಿಸಿದರೆ, ‘ತಮ್ಮ ಅಭ್ಯರ್ಥಿಗೇ ಗೆಲುವು ಖಚಿತ’ ಎಂದು ಹೇಳುತ್ತಾರೆ. ಈ ಅತೀವ ವಿಶ್ವಾಸಕ್ಕೆ ಪೂರಕವಾಗಿ, ತಮ್ಮದೇ ಆದ ಜಾತಿವಾರು ಮತ ಲೆಕ್ಕಾಚಾರವನ್ನು ಮುಂದಿಡುತ್ತಾರೆ.
ಆದರೆ, ಯಾವ ಪಕ್ಷಗಳಲ್ಲೂ ಗುರುತಿಸಿಕೊಳ್ಳದೆ ತಮ್ಮ ಪಾಡಿಗೆ ಹಕ್ಕು ಚಲಾಯಿಸುವ ಪಕ್ಷಾತೀತ ಮತದಾರರು ಫಲಿತಾಂಶದ ಕುರಿತು ಹೇಳುವುದೇ ಬೇರೆ. ‘ಹಿಂದಿನಂತೆ ಇವರೇ ಗೆಲ್ಲುತ್ತಾರೆಂದು ಹೇಳಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಪೈಪೋಟಿ ಏರ್ಪಟ್ಟಿದೆ. ಯಾರೇ ಗೆದ್ದರೂ ಗೆಲುವಿನ ಅಂತರ ತೀರಾ ಕಡಿಮೆ ಇರಲಿ’ ಎಂಬುದು ಅವರ ಅಭಿಪ್ರಾಯ.
ದಾಖಲೆಯ ಮತದಾನ: ಸಾರ್ವತ್ರಿಕ ಹಾಗೂ ಉಪ ಚುನಾವಣೆ ಸೇರಿದಂತೆ ಕ್ಷೇತ್ರವು ಇದುವರೆಗೆ 19 ಚುನಾವಣೆಗಳಿಗೆ ಸಾಕ್ಷಿಯಾಗಿದೆ. ಆ ಪೈಕಿ, ಈ ಸಲದ ಮತ ಪ್ರಮಾಣ ಶೇ 88.81 ತಲುಪುವುದರೊಂದಿಗೆ ದಾಖಲೆ ಬರೆದಿದೆ. ಉಪ ಸಮರದ ಮತಹಬ್ಬದಲ್ಲಿ ಮತದಾರರು ತೋರಿರುವ ಉತ್ಸಾಹವು ಯಾರಿಗೆ ಪಾಸಿಟಿವ್, ಯಾರಿಗೆ ನೆಗೆಟಿವ್ ಆಗಲಿದೆ ಎಂಬುದರ ಚರ್ಚೆಯೂ ಗರಿಗೆದರಿದೆ.
ಸಂಭ್ರಮಾಚರಣೆಗೆ ಸಜ್ಜು: ‘ನಾವೇ ಗೆಲ್ಲುತ್ತೇವೆ’ ಎಂಬ ವಿಶ್ವಾಸದಲ್ಲಿರುವ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಭಾರೀ ಪ್ರಮಾಣದ ಪಟಾಕಿ ಖರೀದಿಸಿದ್ದು, ದೊಡ್ಡ ಹೂವಿನಹಾರಗಳನ್ನು ಬುಕ್ ಮಾಡಿದ್ದಾರೆ. ಕೆಲ ಮುಖಂಡರು ನೂತನ ಶಾಸಕರನ್ನು ಸ್ವಾಗತಿಸುವ ಫ್ಲೆಕ್ಸ್‌ಗಳ ವಿನ್ಯಾಸವನ್ನೂ ಅಂತಿಮಗೊಳಿಸಿದ್ದಾರೆ.
ಉಪ ಚುನಾವಣೆಯಲ್ಲಿ ಫಲಿತಾಂಶದ ಕುರಿತು ನಡೆಯುತ್ತಿರುವ ಬೆಟ್ಟಿಂಗ್ ನಿಖಿಲ್ ಅಥವಾ ಯೋಗೇಶ್ವರ್ ಗೆಲುವಿಗಷ್ಟೇ ಸೀಮಿತವಾಗಿಲ್ಲ. ಅವರು ಎಷ್ಟು ಮತಗಳನ್ನು ಪಡೆಯಲಿದ್ದಾರೆ? ಎಷ್ಟು ಲೀಡ್‌ನಿಂದ ಗೆಲ್ಲುತ್ತಾರೆ ಎಂಬುದರ ಕುರಿತು ಸಹ ಬೆಟ್ಟಿಂಗ್ ಪ್ರಿಯರು ಹಣ ಹೂಡುತ್ತಿದ್ದಾರೆ. ಕೆಲವೆಡೆ ಬೂತ್ ಪಂಚಾಯಿತಿ ಹೋಬಳಿ ಮಟ್ಟದಲ್ಲಿ ಅಭ್ಯರ್ಥಿಗಳು ಪಡೆಯಬಹುದಾದ ಮತಗಳ ಬಗ್ಗೆಯೂ ಬೆಟ್ಟಿಂಗ್ ನಡೆಯುತ್ತಿದೆ ಎನ್ನುತ್ತವೆ ರಾಜಕೀಯ ಪಕ್ಷಗಳ ಮೂಲಗಳು. ‘ಬೂತ್ ಮತ್ತು ಪಂಚಾಯಿತಿ ಮಟ್ಟದಲ್ಲಿ ಪಕ್ಷಗಳ ಪರವಾಗಿ ಕೆಲಸ ಮಾಡಿದವರು ತಮ್ಮ ಅಭ್ಯರ್ಥಿಗೆ ಇಷ್ಟೇ ಮತಗಳು ಬರಲಿವೆ ಎಂಬ ವಿಶ್ವಾಸದಲ್ಲಿದ್ದಾರೆ. ಅದರ ಆಧಾರದ ಮೇಲೆಯೇ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಜಿಲ್ಲೆಯಲ್ಲಷ್ಟೇ ಅಲ್ಲದೆ ಹೊರಗಡೆಯೂ ಬೆಟ್ಟಿಂಗ್ ಜೋರಾಗಿದೆ. ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾವಿರದಿಂದ ಶುರುವಾಗಿ ಲಕ್ಷ ಕೋಟಿವರೆಗೂ ಬೆಟ್ಟಿಂಗ್ ನಡೆಯುತ್ತಿದೆ’ ಎಂದು ಬೆಟ್ಟಿಂಗ್ ಪ್ರಿಯರೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.