ADVERTISEMENT

ಚನ್ನಪಟ್ಟಣ ಉಪಚುನಾವಣೆ| ಪಕ್ಷದಿಂದಲೋ, ಸ್ವತಂತ್ರವೋ ಸ್ಪರ್ಧೆ ಖಚಿತ: CP ಯೋಗೇಶ್ವರ್

ನಿಖಿಲ್ ಕುಮಾರಸ್ವಾಮಿ ಹೆಸರು ಮುನ್ನಲೆಗೆ: ಕಾಂಗ್ರೆಸ್‌ನಿಂದ ಕಾದು ನೋಡುವ ತಂತ್ರ

ಓದೇಶ ಸಕಲೇಶಪುರ
Published 16 ಅಕ್ಟೋಬರ್ 2024, 0:21 IST
Last Updated 16 ಅಕ್ಟೋಬರ್ 2024, 0:21 IST
ಸಿ.ಪಿ. ಯೋಗೇಶ್ವರ್‌
ಸಿ.ಪಿ. ಯೋಗೇಶ್ವರ್‌   

ರಾಮನಗರ: ‘ಮೈತ್ರಿ ಅಭ್ಯರ್ಥಿಯಾಗಿ ಪಕ್ಷ ನನ್ನ ಹೆಸರು ಘೋಷಿಸುವ ಸಂಪೂರ್ಣ ವಿಶ್ವಾಸವಿದೆ. ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಕಣಕ್ಕಿಳಿಯುವಂತೆ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಸ್ಪರ್ಧೆಯಂತೂ ಖಚಿತ. ಆದರೆ, ಮೈತ್ರಿ ಅಭ್ಯರ್ಥಿಯಾಗಿಯೋ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿಯೋ ಎಂದು ಕಾದು ನೋಡಬೇಕು’

ಚನ್ನಪಟ್ಟಣ ಉಪ ಚುನಾವಣೆ ಮೈತ್ರಿ ಟಿಕೆಟ್‌ ಪ್ರಬಲ ಆಕಾಂಕ್ಷಿ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ‘ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆ ಇದು.

‘ಮೈತ್ರಿ’ ಟಿಕೆಟ್ ಸಾಧ್ಯತೆ ಕ್ಷೀಣಿಸಿರುವುದರಿಂದ ಯೋಗೇಶ್ವರ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುದ್ದಿ ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆ ಕುರಿತು ಚರ್ಚಿಸಲು ಬುಧವಾರ (ಅ.16) ಅವರು ಬೆಂಬಲಿಗರ ಸಭೆ ಕರೆದಿದ್ದಾರೆ. 

ADVERTISEMENT

ಬಿಜೆಪಿ ಜಿಲ್ಲಾ ಘಟಕ ಆರಂಭದಿಂದಲೂ ಯೋಗೇಶ್ವರ್ ಬೆನ್ನಿಗೆ ನಿಂತಿದೆ. ಯೋಗೇಶ್ವರ್‌ ಅವರಿಗೆ ಟಿಕೆಟ್‌ ನೀಡುವಂತೆ ಜಿಲ್ಲಾ ಬಿಜೆಪಿ ಮುಖಂಡರು ಐದು ದಿನದ ಹಿಂದೆ ಪಕ್ಷದ ನಾಯಕರನ್ನು ಒತ್ತಾಯಿಸಿದ್ದಾರೆ. 

‘ಸ್ವಾಭಿಮಾನಿ ಸಂಕಲ್ಪ ಸಮಾವೇಶಕ್ಕೆ ಮುಂದಾಗಿದ್ದ ನಮ್ಮ ನಾಯಕರನ್ನು ಪಕ್ಷದ ಹೈಕಮಾಂಡ್ ಕರೆದು ಸ್ವಲ್ಪ ದಿನ ಸುಮ್ಮನಿರುವಂತೆ ಸಲಹೆ ನೀಡಿತ್ತು. ಈ ಚುನಾವಣೆ ಅವರ ಅಳಿವು, ಉಳಿವಿನ ಪ್ರಶ್ನೆ. ಕ್ಷೇತ್ರ ಬಿಜೆಪಿ ನೆಲೆಯಾಗಿದ್ದು ಜನಾಭಿಪ್ರಾಯವೂ ಯೋಗೇಶ್ವರ್‌ ಪರವಾಗಿದೆ’ ಎಂದು ಅವರ ಬೆಂಬಲಿಗರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಡಿ.ಕೆ ಸಹೋದರರನ್ನು ಎದುರಿಸಲು ಯೋಗೇಶ್ವರ್ ಅವರೇ ಸೂಕ್ತ ಅಭ್ಯರ್ಥಿ. ಹಾಗಾಗಿಯೇ, ಮೈತ್ರಿ ಬದಿಗಿಟ್ಟು ಫ್ರೆಂಡ್ಲಿ ಫೈಟ್ ಮಾಡೋಣ ಎಂದಿದ್ದೆವು. ಈಗ ಜೆಡಿಎಸ್‌ನಿಂದ ನಿಖಿಲ್ ಹೆಸರು ಅಂತಿಮವಾಗುವ ಹಂತದಲ್ಲಿದೆ. ಹೀಗಾಗಿ, ಯೋಗೇಶ್ವರ್‌ ಸ್ವತಂತ್ರ ಸ್ಪರ್ಧೆಗೆ ಸಿದ್ಧರಾಗುತ್ತಿದ್ದಾರೆ’ ಎಂದು ದೃಢಪಡಿಸಿದರು.

ಬಿಜೆಪಿ–ಜೆಡಿಎಸ್ ಟಿಕೆಟ್ ಗುದ್ದಾಟವನ್ನು ಸೂಕ್ಷಮವಾಗಿ ಗಮನಿಸುತ್ತಿರುವ ಡಿ.ಕೆ ಸಹೋದರರು ಕಾಂಗ್ರೆಸ್‌ ಅಭ್ಯರ್ಥಿ ಗುಟ್ಟು ಬಿಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ನಿಖಿಲ್ ಅಭ್ಯರ್ಥಿಯಾಗಿ, ಯೋಗೇಶ್ವರ್ ಸ್ವತಂತ್ರವಾಗಿ ಕಣಕ್ಕಿಳಿದರೆ ಸುರೇಶ್ ಅವರನ್ನು ಅಭ್ಯರ್ಥಿ ಮಾಡುವ ಆಲೋಚನೆ ಡಿ.ಕೆ. ಶಿವಕುಮಾರ್ ಅವರಿಗಿದೆ. ಇಲ್ಲದಿದ್ದರೆ ಸ್ಥಳೀಯವಾಗಿ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ನಿಖಿಲ್ ಸೋಲುವಂತೆ ಮಾಡಿ ಲೋಕಸಭಾ ಚುನಾವಣೆಯಲ್ಲಿ ಸಹೋದರನಿಗಾದ ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ. 

ಕ್ಷೇತ್ರಕ್ಕೆ ಸದ್ಯ ಕಾಂಗ್ರೆಸ್‌ನಿಂದ ಸುರೇಶ್ ಅವರ ಹೆಸರು ಹೊರತುಪಡಿಸಿದರೆ ಮಾಜಿ ಶಾಸಕ ಎಂ.ಸಿ. ಅಶ್ವಥ್ ಮತ್ತು ಬಿಎಂಐಸಿಪಿಎ ಅಧ್ಯಕ್ಷ ರಘುನಂದನ ರಾಮಣ್ಣ ಹೆಸರು ಚಾಲ್ತಿಯಲ್ಲಿವೆ ಎನ್ನುತ್ತವೆ ಪಕ್ಷದ ಮೂಲಗಳು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ

ಪುತ್ರನ ಕಣಕ್ಕಿಳಿಸಲು ಎಚ್‌ಡಿಕೆ ತಯಾರಿ

ತಾನು ಎರಡು ಸಲ ಪ್ರತಿನಿಧಿಸಿರುವ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡಲು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ  ಇಷ್ಟವಿಲ್ಲ. ಯೋಗೇಶ್ವರ್ ಎಷ್ಟೇ ಕಸರತ್ತು ನಡೆಸಿದರೂ ಅವರ ಪರ ಎಚ್‌ಡಿಕೆ ಇದುವರೆಗೂ ಒಂದೇ ಒಂದು ಮಾತೂ ಆಡಿಲ್ಲ. ಎರಡು ಸಲ ಪುತ್ರನೊಂದಿಗೆ ಕ್ಷೇತ್ರ ಪ್ರವಾಸ ಮಾಡಿರುವ ಎಚ್‌ಡಿಕೆ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸರಣಿ ಸಭೆ ನಡೆಸಿದ್ದಾರೆ. ಹೋದಲ್ಲೆಲ್ಲಾ ‘ಇದು ಜೆಡಿಎಸ್ ಭದ್ರಕೋಟೆ’ ಎನ್ನುತ್ತಾ ತಮ್ಮ ಪುತ್ರನೇ ಇಲ್ಲಿ ಅಭ್ಯರ್ಥಿ ಎಂಬ ಸುಳಿವು ನೀಡಿ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ‘ಜಿಲ್ಲೆಯಲ್ಲಿರುವ ನಾಲ್ಕು ಕ್ಷೇತ್ರಗಳ ಪೈಕಿ ಜೆಡಿಎಸ್ ಗೆದ್ದಿದ್ದ ಏಕೈಕ ಕ್ಷೇತ್ರ ಚನ್ನಪಟ್ಟಣ. ಕುಮಾರಸ್ವಾಮಿ ಅವರೇ ಗೆದ್ದಿರುವ ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಿಟ್ಟರೆ ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ಕ್ಷೇತ್ರ ತ್ಯಾಗ ಮಾಡುವ ಪ್ರಶ್ನೆಯೇ ಇಲ್ಲ. ಮೈತ್ರಿ ಧಿಕ್ಕರಿಸಿ ಯೋಗೇಶ್ವರ್ ಸ್ವತಂತ್ರವಾಗಿ ನಿಂತರೂ ಸೋಲು ಖಚಿತ’ ಎಂದು ಜೆಡಿಎಸ್ ಮುಖಂಡರೊಬ್ಬರು ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.