ಚನ್ನಪಟ್ಟಣ (ರಾಮನಗರ): ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಬುಧವಾರ ಶಾಂತಿಯುತವಾಗಿ ನಡೆಯಿತು. ಕ್ಷೇತ್ರದ 276 ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಡೆದ ‘ಪ್ರಜಾಪ್ರಭುತ್ವದ ಹಬ್ಬ’ದಲ್ಲಿ ಕಣದಲ್ಲಿರುವ 31 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಯಶಸ್ವಿಯಾಗಿ ಬರೆದರು.
ಕಳೆದ 2023ರ ಚುನಾವಣೆಯಲ್ಲಿ ನಡೆದಿದ್ದ ಶೇ 85.27ಕ್ಕೆ ಪ್ರಮಾಣಕ್ಕೆ ಹೋಲಿಸಿದರೆ, ಉಪ ಚುನಾವಣೆಯಲ್ಲಿ ಶೇ3.53ರಷ್ಟು ಏರಿಕೆಯಾಗಿರುವುದು ಮತದಾರರ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಆರು ಕಡೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಮತಯಂತ್ರಗಳನ್ನು ಬದಲಿಸಲಾಯಿತು. ಕೆಲವೆಡೆ ಸಣ್ಣಪುಟ್ಟ ಮಾತಿನ ಚಕಮಕಿ ಬಿಟ್ಟರೆ, ಯಾವುದೇ ಅಹಿಕರ ಘಟನೆಗಳಿಲ್ಲದೆ ಸುಸೂತ್ರವಾಗಿ ಮತದಾನ ನಡೆಯಿತು. ಮತಗಟ್ಟೆಗಳಲ್ಲಿ ಯಾವುದೇ ಅಕ್ರಮಕ್ಕೆ ಆಸ್ಪದವಿಲ್ಲದಂತೆ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಚುನಾವಣಾಧಿಕಾರಿ ಬಿನೋಯ್ ಪಿ.ಕೆ ಹಾಗೂ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ನಿಗಾ ವಹಿಸಿದ್ದರು. ಪೊಲೀಸ್ ಮತ್ತು ಅರೆ ಸೇನಾಪಡೆಯ ಬಂದೋಬಸ್ತ್ ಮಾಡಲಾಗಿತ್ತು.
ಚಕ್ಕರೆಯಲ್ಲಿ ಸಿಪಿವೈ ಮತದಾನ: ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ ತಮ್ಮ ಊರಾದ ತಾಲ್ಲೂಕಿನ ಚಕ್ಕೆರೆಯಲ್ಲಿ ಪತ್ನಿ ಶೀಲಾ ಅವರೊಂದಿಗೆ ಮತದಾನ ಮಾಡಿದರು. ಕ್ಷೇತ್ರದ ಮತದಾರರಲ್ಲದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕೆಂಗಲ್‌ನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಇಬ್ಬರೂ ಮತಗಟ್ಟೆಗಳಿಗೆ ಭೇಟಿ ನೀಡಿದರು.
ಮಾತಿನ ಚಕಮಕಿ: ತಾಲ್ಲೂಕಿನ ಕೋಂಡಬಳ್ಳಿ ಮತಗಟ್ಟೆಗೆ ಆಟೊದಲ್ಲಿ ಬಂದ ಮತದಾರರೊಬ್ಬರನ್ನು ಪಕ್ಷವೊಂದರ ಕಾರ್ಯಕರ್ತರು ‘ನಮ್ಮ ಪಕ್ಷಕ್ಕೆ ಮತ ಹಾಕಬೇಕು’ ಎಂದು ಎಳೆದಾಡಿದರು. ಮತದಾರ ಅವರನ್ನು ಲೆಕ್ಕಿಸದೆ ಮತಗಟ್ಟೆಯತ್ತ ನಡೆದರು.
ದೊಡ್ಡಮಳೂರು, ಮಂಗಳವಾರಪೇಟೆ ಸೇರಿದಂತೆ ಆರೇಳು ಕಡೆ ಮತದಾರರನ್ನು ಓಲೈಸುವ ಭರದಲ್ಲಿ ಜೆಡಿಎಸ್ ಹಾಗೂ ‘ಕೈ’ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿರುವ ವರದಿಯಾಗಿದೆ. ಕ್ಷೇತ್ರದ ಮತದಾರರೂ ಆಗಿರುವ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಕೋಡಬಂಬಳ್ಳಿ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು.
Highlights - ಅಂಕಿಅಂಶಚನ್ನಪಟ್ಟಣ ಕ್ಷೇತ್ರದ ಮಾಹಿತಿ31: ಒಟ್ಟು ಅಭ್ಯರ್ಥಿಗಳು 2,32,949: ಒಟ್ಟು ಮತದಾರರು1,12,324: ಪುರುಷ ಮತದಾರರು1,20,617: ಮಹಿಳೆ ಮತದಾರರು8: ಲೈಂಗಿಕ ಅಲ್ಪಸಂಖ್ಯಾತರು
ಕ್ರಮಸಂಖ್ಯೆ ಪಟ್ಟಿಯಲ್ಲಿ ವ್ಯತ್ಯಾಸಕ್ಕೆ ಆಕ್ಷೇಪ
ತಾಲ್ಲೂಕಿನ ಹೊಂಗನೂರಿನ ಮತಗಟ್ಟೆ 4ರಲ್ಲಿ ವಿದ್ಯುನ್ಮಾನ ಮತಯಂತ್ರಕ್ಕೆ ಅಭ್ಯರ್ಥಿಗಳ ಕ್ರಮಸಂಖ್ಯೆ ಪಟ್ಟಿಯನ್ನು ಉಲ್ಟಾ ಆಗಿ ಅಂಟಿಸಿರುವುದರ ಕುರಿತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ‘ಅಧಿಕಾರಿಗಳು ಯಾವುದೇ ಗೊಂದಲವಾಗಿಲ್ಲ. ಸರಿಯಾಗಿಯೇ ಇದೆ’ ಎಂದು ಸ್ಪಷ್ಟನೆ ನೀಡಿದರು. ಈ ಕುರಿತು ಮೇಲ್ಮನವಿ ಸಲ್ಲಿಸುವ ಆಯ್ಕೆ ಬಗ್ಗೆಯೂ ಗಮನ ಸೆಳೆದರು. ನಂತರ ಕ್ರಮ ಸಂಖ್ಯೆ ವ್ಯತ್ಯಾಸ ಕುರಿತ ಚಿತ್ರವನ್ನು ಮೊಬೈಲ್‌ನಲ್ಲಿ ಸುದ್ದಿಗಾರರಿಗೆ ಪ್ರದರ್ಶಿಸಿದ ನಿಖಿಲ್ ‘ಬೆಳಗ್ಗೆ 8ಗಂಟೆ ಸುಮಾರಿಗೆ ಈ ವಿಷಯ ಗಮನಕ್ಕೆ ಬಂದಿದೆ. ಮತದಾರರು ಗೊಂದಲಕ್ಕೀಡಾಗಿ ಕ್ರಮ ಸಂಖ್ಯೆ 1ರಿಂದ ಶುರುವಾಗುವ ಅಭ್ಯರ್ಥಿಗಳ ಬದಲು ಕಡೆಗೆ ಇರುವ ಅಭ್ಯರ್ಥಿಗಳಿಗೆ ಮತ ಹಾಕಿರುವ ಸಾಧ್ಯತೆ ಇದೆ. ಈ ಕುರಿತು ಚುನಾವಣಾಧಿಕಾರಿಗೆ ದೂರು ನೀಡುವ ಕುರಿತು ಚರ್ಚಿಸಿ ತೀರ್ಮಾನಿಸುವೆ’ ಎಂದು ಹೇಳಿದರು. ದೂರು ಬಂದಿಲ್ಲ: ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಬಿನೋಯ್ ಪಿ.ಕೆ ಅವರು ‘ಇವಿಎಂ ಯಂತ್ರದಲ್ಲಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂಬುದನ್ನು ಅಭ್ಯರ್ಥಿಗೆ ಮನವರಿಕೆ ಮಾಡಲಾಗಿದೆ. ಆ ಕುರಿತು ಯಾವುದೇ ದೂರು ಬಂದಿಲ್ಲ’ ಎಂದರು. ಹಣ ಹಂಚಿಕೆ ಆರೋಪ:ಎಫ್‌ಐಆರ್ ಚನ್ನಪಟ್ಟಣದ ಬಡಮಖಾನ್‌ನಲ್ಲಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಹಣ ಹಂಚುತ್ತಿದ್ದ ಕನಕಪುರ ತಾಲ್ಲೂಕಿನ ಮೇಳೆಕೋಟೆ ಮಹಮದ್ ಜಬ್ಬೀರ್ ಎಂಬಾತನನ್ನು ಎಫ್‌ಎಸ್‌ಟಿ ತಂಡ ಸೆರೆ ಹಿಡಿದಿದೆ. ಆತನಿಂದ ₹1.16ಲಕ್ಷ ನಗದು ವಶಪಡಿಸಿಕೊಂಡಿದ್ದು ಚನ್ನಪಟ್ಟಣ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕೂರಿನಲ್ಲೂ ‘ಕೈ’ ಪರವಾಗಿ ಮಂಗಳವಾರ ರಾತ್ರಿ ಹಣ ಹಂಚಿಕೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರು. ಬುಧವಾರ ಅಕ್ಕೂರು ಮತಗಟ್ಟೆ ಬಳಿಯೇ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಜೆಡಿಎಸ್‌ಗೆ ಮತ ಹಾಕುವಂತೆ ಮತದಾರರಿಗೆ ₹500 ನೋಟು ಹಂಚುತ್ತಿದ್ದ ಆರೋಪ ಕೇಳಿ ಬಂದಿದ್ದು ಈ ವಿಡಿಯೊ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.
‘ಶ್ರಮ ಸಾಧನೆಗೆ ಗೆಲುವಾಗಲಿದೆ’
‘ಉಪ ಚುನಾವಣೆಗಾಗಿ ನಾವು ಹಾಕಿರುವ ಶ್ರಮ ಹಾಗೂ ರಾಜ್ಯ ಸರ್ಕಾರದ ಸಾಧನೆ ಗೆಲುವಿನ ಆಶಾಭಾವನೆ ಮೂಡಿಸಿದೆ. ನನ್ನ ಗೆಲುವಿನಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸಿಗೂ ಅಧಿಕೃತ ಮುದ್ರೆ ಬಿದ್ದಂತಾಗುತ್ತದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾಧ್ಯಮದವರೊಂದಿಗೆ ವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಜಮೀರ್ ಜೆಡಿಎಸ್ ನಾಯಕರ ವಿರುದ್ಧ ನೀಡಿರುವ ಹೇಳಿಕೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಯಾರು ಏನು ಹೇಳಿದ್ದಾರೊ ಗೊತ್ತಿಲ್ಲ. ಅವರ ಹೇಳಿಕೆ ಇಲ್ಲಿ ಯಾವುದೇ ಪರಿಣಾಮ ಬೀರದು. ಇದು ನನ್ನ ಚುನಾವಣೆ. ನನ್ನ ವೈಯಕ್ತಿಕ ಮತಗಳೇ ಇಲ್ಲಿ ನಿರ್ಣಾಯಕ’ ಎಂದರು. ‘ಹೃದಯದಲ್ಲಿ ಸ್ಥಾನ ಸಿಗುವ ವಿಶ್ವಾಸವಿದೆ’ ‘ಕ್ಷೇತ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರು ತಮ್ಮ ಹೃದಯದಲ್ಲಿ ನನಗೆ ಸ್ಥಾನ ನೀಡುವ ವಿಶ್ವಾಸವಿದೆ. ಉಪ ಚುನಾವಣೆ ಸ್ಪರ್ಧೆಗೆ ಆಸಕ್ತಿ ಇಲ್ಲದಿದ್ದರೂ ಅನಿರೀಕ್ಷಿತವಾಗಿ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ಕಾರ್ಯಕರ್ತರ ಭಾವನೆಗೆ ಬೆಲೆ ಕೊಟ್ಟು ಕಣಕ್ಕಿಳಿದೆ. ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಕಳೆದ 18 ದಿನಗಳಿಂದ ಸತತವಾಗಿ ನನ್ನ ಪರ ಕೆಲಸ ಮಾಡಿದ್ದಾರೆ. ತಾತ ದೇವೇಗೌಡರು ಮತ್ತು ತಂದೆ ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ನನಗೆ ಶ್ರೀರಕ್ಷೆ’ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.