ADVERTISEMENT

ಚನ್ನಪಟ್ಟಣ ಉಪಚುನಾವಣೆ ಮೈತ್ರಿ ಟಿಕೆಟ್: ‘ನೀ ಕೊಡೆ, ನಾ ಬಿಡೆ’

‘ನಾನೇ ಅಭ್ಯರ್ಥಿ’ ಎಂದ ಸಿಪಿವೈಗೆ, ಎಚ್‌ಡಿಕೆ ‘ಅಚ್ಚರಿ ಅಭ್ಯರ್ಥಿ’ಯ ಬಾಣ

ಓದೇಶ ಸಕಲೇಶಪುರ
Published 8 ಜುಲೈ 2024, 4:12 IST
Last Updated 8 ಜುಲೈ 2024, 4:12 IST
<div class="paragraphs"><p>ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್</p></div>

ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್

   

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಟಿಕೆಟ್‌ ಆಕಾಂಕ್ಷಿಯಾಗಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮತ್ತು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಜೆಡಿಎಸ್ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗಳು, ‘ನೀ ಕೊಡೆ, ನಾ ಬಿಡೆ’ ಎಂಬಲ್ಲಿಗೆ ಟಿಕೆಟ್ ರಾಜಕೀಯವನ್ನು ತಂದು ನಿಲ್ಲಿಸಿವೆ.

ಮೂರು ದಿನಗಳ ಹಿಂದೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಸಿಪಿವೈ, ‘ನಾನೇ ಮೈತ್ರಿ ಅಭ್ಯರ್ಥಿ. ಎಚ್‌ಡಿಕೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಸ್ಪರ್ಧೆಗೆ ಸೂಚಿಸಿದ್ದಾರೆ. ಅವರೇ ಹೆಸರು ಘೋಷಿಸಲಿದ್ದು, ಸೋಮವಾರದಿಂದಲೇ ಚುನಾವಣೆ ಪ್ರಕ್ರಿಯೆ ಆರಂಭಿಸುತ್ತೇನೆ’ ಎಂದಿದ್ದರು. ಇದರೊಂದಿಗೆ, ‘ಮೈತ್ರಿ’ ಅಭ್ಯರ್ಥಿ ಗೊಂದಲಕ್ಕೆ ತೆರೆ ಎಳೆದಿದ್ದರು.

ADVERTISEMENT

ಈ ಬೆಳವಣಿಗೆ ಬೆನ್ನಲ್ಲೇ ಮಾತನಾಡಿರುವ ಎಚ್‌ಡಿಕೆ, ‘ಚನ್ನಪಟ್ಟಣ ಟಿಕೆಟ್ ಕುರಿತು ನಿರ್ಧಾರವಾಗಿಲ್ಲ. ಕ್ಷೇತ್ರದ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು, ಬಿಜೆಪಿ ನಾಯಕರ ಜತೆ ಚರ್ಚಿಸಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು’ ಎನ್ನುವ ಮೂಲಕ, ಸಿಪಿವೈ ಉತ್ಸಾಹಕ್ಕೆ ತಣ್ಣಿರೆರಚಿದ್ದಾರೆ.

ಒತ್ತಡ ತಂತ್ರವೇ?:

ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿರುವ ಸಿಪಿವೈ ಹೇಳಿಕೆ ಹಿಂದೆ, ಮೈತ್ರಿ ನಾಯಕರು ತನ್ನನ್ನು ಅಭ್ಯರ್ಥಿಯಾಗಿ ಘೋಷಿಸಬೇಕಾದ ಅನಿವಾರ್ಯತೆಯ ಒತ್ತಡ ಸೃಷ್ಟಿಸುವ ತಂತ್ರವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಾವು ಆಕಾಂಕ್ಷಿ ಎಂಬುದನ್ನು ತೋರಿಸಿಕೊಳ್ಳದೆ ಪಕ್ಷದ ನಾಯಕರ ಸೂಚನೆ ಪಾಲಿಸುವೆ ಎನ್ನುತ್ತಿದ್ದ ಅವರು, ಮಾಧ್ಯಮದ ಮುಂದೆ ‘ನಾನೇ ಅಭ್ಯರ್ಥಿ’ ಎಂದು ಹೇಳಿಕೊಂಡಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಮಂಡ್ಯದಲ್ಲಿ ಎಚ್‌ಡಿಕೆ ಗೆದ್ದ ದಿನದಿಂದಲೇ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ಶುರುವಾಗಿದೆ. ‘ಚನ್ನಪಟ್ಟಣದಿಂದ ರಾಜಕೀಯದ ಹೊಸ ಅಧ್ಯಾಯ ಶುರು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜನಸ್ಪಂದನ ಹೆಸರಿನಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಆದರೆ, ಮೈತ್ರಿ ನಾಯಕರು ಅಭ್ಯರ್ಥಿ ಆಯ್ಕೆ ಗೊಂದಲದಲ್ಲಿ ಸಿಲುಕಿದ್ದಾರೆ.

ಬಿಜೆಪಿಯಿಂದ ಸಿಪಿವೈ ಹೆಸರೊಂದೇ ಕೇಳಿ ಬಂದಿದೆ. ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ, ಅನಸೂಯ ಮಂಜುನಾಥ್, ಪಕ್ಷದ ಸ್ಥಳೀಯ ಅಧ್ಯಕ್ಷ ಜಯಮುತ್ತು ಹೆಸರು ಮುನ್ನೆಲೆಗೆ ಬಂದಿದೆ. ಸಿಪಿವೈ ಜೊತೆ ಎಚ್‌ಡಿಕೆ ವೇದಿಕೆ ಹಂಚಿಕೊಂಡರೂ, ಅವರು ಅಭ್ಯರ್ಥಿಯಾಗುವ ಕುರಿತು ಒಂದು ಮಾತೂ ಆಡಿಲ್ಲ. ಇದು ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿದೆ.

ಎಚ್‌ಡಿಕೆ ಹಿಂಜರಿಕೆಗೆ ಕಾರಣವೇನು?

ಕಳೆದೆರಡು ಚುನಾವಣೆಗಳಿಂದ ಕ್ಷೇತ್ರ ಎಚ್‌ಡಿಕೆ ಮತ್ತು ಸಿಪಿವೈ ನಡುವಣ ಸಮರಕ್ಕೆ ಸಾಕ್ಷಿಯಾಗಿದೆ. ಸಿಪಿವೈ ಮಣಿಸುವ ಸಲುವಾಗಿಯೇ ಎಚ್‌ಡಿಕೆ ರಾಮನಗರ ತೊರೆದು ಚನ್ನಪಟ್ಟಣಕ್ಕೆ ಬಂದರು. ಬಿಜೆಪಿ ಜೊತೆ ಕೈ ಜೋಡಿಸಿದ ಬಳಿಕ ಎದುರಾಗಿರುವ ಉಪ ಚುನಾವಣೆಯಲ್ಲಿ ಸಿಪಿವೈಗೆ ಕ್ಷೇತ್ರ ಬಿಟ್ಟರೆ ಮತ್ತೆ ತೆನೆ ತೆಕ್ಕೆಗೆ ತೆಗೆದುಕೊಳ್ಳುವುದು ಕಷ್ಟ. ಏಕೈಕ ಶಾಸಕ ಸ್ಥಾನವನ್ನು ಮರಳಿ ಗಳಿಸಿಕೊಳ್ಳದಿದ್ದರೆ ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂಬ ಆತಂಕ ಎಚ್‌ಡಿಕೆ ಅವರದ್ದು. ಇದುವರೆಗೆ ಸಿಪಿವೈ ವಿರುದ್ಧ ಹೋರಾಡಿಕೊಂಡು ಬಂದಿರುವ ಜೆಡಿಎಸ್‌ ಕಾರ್ಯಕರ್ತರಿಗೂ ಸಿಪಿವೈ ಅಭ್ಯರ್ಥಿಯಾಗುವುದಕ್ಕೆ ವಿರೋಧವಿದೆ. ಹಾಗಾಗಿಯೇ ಎಚ್‌ಡಿಕೆ ಕುಟುಂಬದ ನಿಖಿಲ್ ಕುಮಾರಸ್ವಾಮಿ ಅನಸೂಯ ಮಂಜುನಾಥ್ ಹೆಸರಿನ ಜೊತೆಗೆ ಸ್ಥಳೀಯವಾಗಿ ಜಯಮುತ್ತು ಹೆಸರು ಜಪಿಸುತ್ತಿದ್ದಾರೆ.

ಸಿಪಿವೈಗಿರುವ ಮುಂದಿರುವ ದಾರಿಗಳಾವು?

ಎರಡೂವರೆ ದಶಕದಿಂದ ಚನ್ನಪಟ್ಟಣವನ್ನೇ ತಮ್ಮ ನೆಲೆ ಮಾಡಿಕೊಂಡು ರಾಜಕೀಯ ಮಾಡಿಕೊಂಡು ಬಂದಿರುವ ಸಿಪಿವೈಗೆ ಕ್ಷೇತ್ರ ಬಿಟ್ಟರೆ ಬೇರೆಲ್ಲೂ ಅಸ್ತಿತ್ವವಿಲ್ಲ. ಬದಲಾದ ರಾಜಕೀಯದಲ್ಲಿ ಎಚ್‌ಡಿಕೆ ಎದುರು ಸತತ ಎರಡು ಸಲ ಸೋತಿರುವ ಅವರಿಗೆ ತಮ್ಮ ನೆಲೆ ಗಟ್ಟಿಗೊಳಿಸಿಕೊಳ್ಳಲು ಇದು ಸಕಾಲ. ಅದಕ್ಕೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದೊಂದೇ ದಾರಿ. ಮೈತ್ರಿ ಸ್ಥಿತಿಯಲ್ಲಿ ಎಚ್‌ಡಿಕೆ ಮರ್ಜಿಯಲ್ಲೇ ಟಿಕೆಟ್ ಪಡೆಯಬೇಕಿದೆ. ಒಂದು ವೇಳೆ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲಬೇಕು. ಇಲ್ಲದಿದ್ದರೆ ‘ಕೈ’ ಹಿಡಿದು ಕಣಕ್ಕಿಳಿಯಬೇಕು. ಇವೆರಡು ಆಗದಿದ್ದರೆ ಪಕ್ಷ ಕೊಡುವ ಜವಾಬ್ದಾರಿಗೆ ತಲೆಬಾಗಿ ನಡೆದುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.