ADVERTISEMENT

ಚನ್ನಪಟ್ಟಣ | ಉಪ ಸಮರಕ್ಕೆ ಮುಹೂರ್ತ; ಗರಿಗೆದರಿದ ರಾಜಕೀಯ

ನ. 13ಕ್ಕೆ ಮತದಾನ, 23ಕ್ಕೆ ಮತ ಎಣಿಕೆ

ಓದೇಶ ಸಕಲೇಶಪುರ
Published 16 ಅಕ್ಟೋಬರ್ 2024, 7:30 IST
Last Updated 16 ಅಕ್ಟೋಬರ್ 2024, 7:30 IST
<div class="paragraphs"><p>ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ</p></div>

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ

   

ರಾಮನಗರ: ಕೇಂದ್ರ ಸಚಿವರಾಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ಕಡೆಗೂ ದಿನಾಂಕ ಘೋಷಣೆಯಾಗಿದೆ. ಇದರೊಂದಿಗೆ ಯಾವಾಗ ಚುನಾವಣೆ ಘೋಷಣೆಯಾಗಲಿದೆಯೋ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು,ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಇಂದಿಗೆ ಸರಿಯಾಗಿ 28 ದಿನಗಳ ನಂತರ ನ. 13ಕ್ಕೆ ಮತದಾನ ನಡೆಯಲಿದ್ದು, 23ಕ್ಕೆ ಮತ ಎಣಿಕೆ ನಡೆದು ಕ್ಷೇತ್ರದ ಶಾಸಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಉಪ ಚುನಾವಣೆ ಕಾರಣಕ್ಕಾಗಿ ಇದುವರೆಗೆ ನಡೆಯುತ್ತಿದ್ದ ಟಿಕೆಟ್‌ ರಾಜಕಾರಣವು ಮತ್ತಷ್ಟು ರಂಗೇರಲಿದೆ. ಅಭ್ಯರ್ಥಿ ಯಾರಾಗಲಿದ್ದಾರೆ? ಎಂಬ ಕುತೂಹಲವು ದಿನದಿಂದ ದಿನಕ್ಕೆ ಹೆಚ್ಚಾಗಲಿದೆ.

ADVERTISEMENT

ಪ್ರತಿಷ್ಠೆಯ ಕಣ: ಈ ಉಪ ಚುನಾವಣೆಯು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿ ಮೂರೂ ಪಕ್ಷಗಳ ಮೂವರು ನಾಯಕರಾದ ಡಿ.ಕೆ. ಶಿವಕುಮಾರ್, ಸಿ.ಪಿ. ಯೋಗೇಶ್ವರ್ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಲೋಕಸಭಾ ಚುನಾವಣೆಯಿಂದ ಬಿಜೆಪಿ–ಜೆಡಿಎಸ್ ಮೈತ್ರಿಯಾಗಿದ್ದರೂ, ಉಪ ಚುನಾವಣೆ ಕಾರಣಕ್ಕೆ ಕ್ಷೇತ್ರದಲ್ಲಿ ‘ಮೈತ್ರಿ’ ಮುರಿದು ಬಿದ್ದಿದೆ. ಹಾಗಾಗಿ, ಚುನಾವಣೆಯಲ್ಲಿ ಏನಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ.

ಕ್ಷೇತ್ರವನ್ನು ಸತತ ಎರಡು ಸಲ ಪ್ರತಿನಿಧಿಸಿರುವ ಕುಮಾರಸ್ವಾಮಿ, ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಗೆಲ್ಲಿಸಿ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ. ಎಚ್‌ಡಿಕೆ ಎದುರು ಸತತ ಎರಡು ಸೋಲು ಕಂಡು ಸದ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಸಿ.ಪಿ. ಯೋಗೇಶ್ವರ್‌ಗೆ ಈ ಚುನಾವಣೆ ತಮ್ಮ ರಾಜಕಾರಣದ ಅಳಿವು–ಉಳಿವಿನ ಪ್ರಶ್ನೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿ.ಕೆ. ಸುರೇಶ್ ಸೋಲಿನಿಂದ ಕಂಗೆಟ್ಟಿರುವ ಡಿ.ಕೆ. ಶಿವಕುಮಾರ್, ಅಭಿವೃದ್ಧಿ ಹೆಸರಿನಲ್ಲಿ ‘ನಾನೇ ಅಭ್ಯರ್ಥಿ’ ಎನ್ನುತ್ತಾ ಚನ್ನಪಟ್ಟಣದತ್ತ ಚಿತ್ರ ಹರಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪತಾಕೆ ಹಾರಿಸಿ ಎಚ್‌ಡಿಕೆಗೆ ಸಡ್ಡು ಹೊಡೆಯುವ ಉತ್ಸಾಹದಲ್ಲಿದ್ದಾರೆ.

ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಜಿದ್ದಾಜಿದ್ದಿ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಕಳೆದೆರಡು ಚುನಾವಣೆಗಳಲ್ಲಿ ಎಚ್‌ಡಿಕೆ ಮತ್ತು ಯೋಗೇಶ್ವರ್ ನಡುವೆ ನೇರ ಹಣಾಹಣಿ ನಡೆಯುತ್ತಿತ್ತು. ಇದೀಗ, ಡಿಕೆಶಿ ಕ್ಷೇತ್ರ ಪ್ರವೇಶಿಸಿರುವುದರಿಂದ ಚುನಾವಣಾ ಲೆಕ್ಕಾಚಾರ ಬದಲಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

‘ಸೈನಿಕ’ನ ನಡೆಯುತ್ತ ಎಲ್ಲರ ಚಿತ್ತ

ಉಪ ಚುನಾವಣೆ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಆರಂಭದಿಂದಲೂ ಸ್ಪರ್ಧೆಯ ಇಂಗಿತವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಪಕ್ಷ ಟಿಕೆಟ್ ನೀಡದಿದ್ದರೆ ಸ್ವತಂತ್ರ ಸ್ಪರ್ಧೆ ಸಿದ್ಧ ಎಂಬ ಸಂದೇಶ ನೀಡಲು ‘ಸ್ವಾಭಿಮಾನ ಸಂಕಲ್ಪ ಸಮಾವೇಶ’ ನಡೆಸಲು ಮುಂದಾಗಿದ್ದ ಅವರು ಸ್ವಲ್ಪ ದಿನ ತಣ್ಣಗಾಗಿದ್ದರು. ನಂತರ ಮತ್ತೆ ಸಕ್ರಿಯವಾಗಿರುವ ಅವರು ಟಿಕೆಟ್‌ಗಾಗಿ ತಮ್ಮ ಕಸರತ್ತು ಮುಂದುವರಿಸಿದ್ದಾರೆ. ಇದರ ಮಧ್ಯೆಯೇ ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿರುವುದು ದಟ್ಟವಾಗಿದೆ. ಈ ಬೆಳವಣಿಗೆ ನಡುವೆ ಯೋಗೇಶ್ವರ್ ಅವರು ತಮ್ಮ ಮುಂದಿನ ನಡೆ ಕುರಿತು ಚರ್ಚಿಸಲು ಬೆಂಬಲಿಗರ ಸಭೆಯನ್ನು ಬುಧವಾರ ಕರೆದಿದ್ದಾರೆ. ಅಲ್ಲಿ ಅವರು ಕೈಗೊಳ್ಳುವ ನಿರ್ಧಾರವು ಚುನಾವಣೆಯ ದಿಕ್ಕನ್ನು ನಿರ್ಧರಿಸಲಿದೆ. ಹಾಗಾಗಿ ಎಲ್ಲರ ಚಿತ್ತ ಇದೀಗ ‘ಸೈನಿಕ’ನ ಸಭೆಯತ್ತ ಹರಿದಿದೆ.

ನಿಖಿಲ್ ಹೆಸರು ಘೋಷಣೆಯಷ್ಟೇ ಬಾಕಿ?

ತಮ್ಮಿಂದ ತೆರವಾಗಿರುವ ಕ್ಷೇತ್ರದಲ್ಲಿ ಪುತ್ರನನ್ನೇ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಮೂಲಕ ಕ್ಷೇತ್ರವನ್ನು ಜೆಡಿಎಸ್‌ ತೆಕ್ಕೆಯಲ್ಲೇ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನೇ ಅಂತಿಮಗೊಳಿಸಿದ್ದಾರೆ ಎಂಬ ಮಾತುಗಳು ಪಕ್ಷದೊಳಗೆ ಕೇಳಿ ಬರುತ್ತಿವೆ. ಇತ್ತೀಚೆಗೆ ನಡೆದ ಬೆಳವಣಿಗೆಗಳು ಅದಕ್ಕೆ ಪುಷ್ಟಿ ನೀಡುವಂತಿದೆ. ಜಿಲ್ಲೆಯಲ್ಲಿ ತಮ್ಮ ಹಾಗೂ ಪಕ್ಷದ ಅಸ್ತಿತ್ವ ಇರಬೇಕಾದರೆ ಕುಟುಂಬದವರೊಬ್ಬರು ಶಾಸಕರಾಗಿರಬೇಕು ಎಂಬ ಆಲೋಚನೆ ಎಚ್‌ಡಿಕೆ ಅವರದ್ದು. ಅದೇ ಕಾರಣಕ್ಕಾಗಿ ಪುತ್ರನನ್ನು ಕಣಕ್ಕಿಳಿಸಲು ಮುಂದಾಗಿದ್ದು ಅಧಿಕೃತವಾಗಿ ನಿಖಿಲ್ ಹೆಸರು ಘೋಷಣೆಯಷ್ಟೇ ಬಾಕಿ ಇದೆ ಎನ್ನುತ್ತವೆ ಪಕ್ಷದ ಮೂಲಗಳು.

ಅಂಕಿಅಂಶ

2,45,804 ಕ್ಷೇತ್ರದ ಒಟ್ಟು ಮತದಾರರು

276 ಕ್ಷೇತ್ರದ ಒಟ್ಟು ಮತಗಟ್ಟೆಗಳು

208 ಮತಗಟ್ಟೆಗಳ ಸ್ಥಳಗಳು

ಮತದಾನ ಕೇಂದ್ರಗಳ ವಿವರ

ನಗರ ಮತಗಟ್ಟೆಗಳು: 60

ಗ್ರಾಮಾಂತರ ಮತಗಟ್ಟೆಗಳು : 211

ಎಯುಎಕ್ಸ್ ಮಾನ್ಯವಾದ ಮತಗಟ್ಟೆಗಳು: 5 ಪಟ್ಟಿ

ಕ್ಷೇತ್ರದ ಮತದಾರರ ವಿವರ (ಸಾಮಾನ್ಯ ಮತದಾರರು ಪುರುಷ;ಮಹಿಳೆ;ಲಿಂಗತ್ವ)

ಅಲ್ಪಸಂಖ್ಯಾತರು:1,12,271 ; 1,20,557 ; 8 ; 2,32,836

ಯುವ ಮತದಾರರು 4,268 ; 4,069 ; 1 ; 8,338

ದಿವ್ಯಾಂಗ ಮತದಾರರು 1,669 ; 1,342 ; 0 ; 3,011

85 ವಯಸ್ಸು ದಾಟಿದ ಮತದಾರರು 612 ; 1,001 ; 0 ; 1,613

ಎನ್‌ಆರ್‌ಐ ಮತದಾರರು 6 ; 0 ; 0 ; 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.