ADVERTISEMENT

ಚನ್ನಪಟ್ಟಣ ಉಪ ಚುನಾವಣೆ | ಇನ್ನೂ ಬಗೆಹರಿಯದ ಟಿಕೆಟ್‌ ಕಗ್ಗಂಟು

ಹುರಿಯಾಳು ಅಂತಿಮಗೊಳಿಸಲು ಪಕ್ಷಗಳಿಂದ ಸರಣಿ ಸಭೆ; ಅಭ್ಯರ್ಥಿ ಗೊಂದಲದಲ್ಲಿ ಕಾರ್ಯಕರ್ತರು

ಓದೇಶ ಸಕಲೇಶಪುರ
Published 19 ಅಕ್ಟೋಬರ್ 2024, 5:31 IST
Last Updated 19 ಅಕ್ಟೋಬರ್ 2024, 5:31 IST
   

ರಾಮನಗರ: ಉಪ ಚುನಾವಣೆಯ ಹೈ ವೋಲ್ಟೆಜ್ ಕಣವಾಗಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಶುರುವಾಗಿದೆ. ಆದರೆ, ಇದುವರೆಗೆ ಬಿಜೆಪಿ–ಜೆಡಿಎಸ್ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಅಭ್ಯರ್ಥಿ ವಿಷಯ ಇನ್ನು ಕಗ್ಗಂಟಾಗಿಯೇ ಇದೆ. ಮೂರೂ ಪಕ್ಷಗಳ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದರೂ, ಇದುವರೆಗೆ ಒಮ್ಮತಕ್ಕೆ ಬಂದಿಲ್ಲ. 

ಯಾರಿಗೆ ಟಿಕೆಟ್ ಕೊಟ್ಟರೆ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬಹುದು, ಯಾವ ತಂತ್ರಗಳನ್ನು ಮಾಡಿದರೆ ಜಯ ಸಾಧಿಸಬಹುದೆಂದು ಮೂರೂ ಪಕ್ಷಗಳು ತಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಕ್ಷೇತ್ರದ ಮುಖಂಡರ ಜೊತೆ ಸಭೆ ನಡೆಸುತ್ತಲೇ ಇದ್ದಾರೆ. ಇದುವರೆಗೆ ಅಭ್ಯರ್ಥಿ ಅಂತಿಮವಾಗದಿರುವುದರಿಂದ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.

ಕ್ಷೇತ್ರ ಬಿಡಲೊಲ್ಲದ ಎಚ್‌ಡಿಕೆ:

ADVERTISEMENT

ತಾನು ಎರಡು ಸಲ ಗೆದ್ದಿರುವ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಮಿತ್ರಪಕ್ಷವಾದ ಬಿಜೆಪಿಗೆ ಬಿಡಲು ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮನಸ್ಸಿಲ್ಲ. ಟಿಕೆಟ್ ಆಕಾಂಕ್ಷಿಯಾಗಿರುವ ಬಿಜೆಪಿಯ ಸಿ.ಪಿ. ಯೋಗೇಶ್ವರ್, ‘ನಾನೇ ಅಭ್ಯರ್ಥಿ’ ಎನ್ನುತ್ತಾ ಹೋದಲ್ಲೆಲ್ಲಾ ಹೇಳುತ್ತಿದ್ದರೂ ಎಚ್‌ಡಿಕೆ ಅದಕ್ಕೆ ತಮ್ಮ ಮಾತಿನ ಮುದ್ರೆ ಒತ್ತಿಲ್ಲ.

ಇತ್ತೀಚೆಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆ ಹೋಬಳಿ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಸರಣಿ ಸಭೆ ನಡೆಸಿರುವ ಅವರು, ತಮ್ಮ ಮಾತುಗಳಲ್ಲಿ ಪುತ್ರನನ್ನೇ ಕಣಕ್ಕಿಳಿಸಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಸುಳಿವು ಕೊಟ್ಟಿದ್ದಾರೆ. ಪಕ್ಷದೊಳಗಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಅದಕ್ಕೆ ಪೂರಕವಾಗಿಯೇ ನಡೆಯುತ್ತಿವೆ.

ಬಿಡದಿ ಬಳಿಯ ತಮ್ಮ ಮನೆಯಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಕ್ಷೇತ್ರದ ಪ್ರಮುಖ ಮುಖಂಡರೊಂದಿಗೆ ಎಚ್‌ಡಿಕೆ ನಡೆಸಿರುವ ಸಭೆಯಲ್ಲೂ, ಕ್ಷೇತ್ರ ಬಿಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ‘ನಿಮ್ಮಿಂದ ತೆರವಾಗಿರುವ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿ ಗೆಲ್ಲಿಸಬೇಕು’ ಎಂಬ ಅಭಿಪ್ರಾಯವನ್ನು ಸಭೆಯಲ್ಲಿದ್ದವರು ವ್ಯಕ್ತಪಡಿಸಿದ್ದಾರೆ.

ಗುಟ್ಟು ಬಿಡದ ಡಿಕೆಶಿ:

‘ಚನ್ನಪಟ್ಟಣದಿಂದ ಹೊಸ ರಾಜಕೀಯ ಅಧ್ಯಾಯ ಶುರು’ ಎಂದು ಕ್ಷೇತ್ರಕ್ಕೆ ಮೂರು ತಿಂಗಳ ಹಿಂದೆಯೇ ಲಗ್ಗೆ ಇಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚುನಾವಣೆಯ ಕಾವು ಹೆಚ್ಚಿಸಿದ್ದಾರೆ. ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಾ, ಅಭಿವೃದ್ಧಿ ಹೆಸರಿನಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂಬ ಗುಟ್ಟನ್ನು ಇಲ್ಲಿಯವರೆಗೆ ಬಿಡದ ಡಿಕೆಶಿ, ‘ಯಾರೇ ನಿಂತರೂ ನಾನೇ ಅಭ್ಯರ್ಥಿ. ನನ್ನ ಮುಖ ನೋಡಿಯೇ ಜನ ಮತ ಹಾಕಬೇಕು’ ಎಂಬ ಮಾತನ್ನು ಹೇಳುತ್ತಿದ್ದಾರೆ. ಅವರ ಸಹೋದರ ಡಿ.ಕೆ. ಸುರೇಶ್ ಹೆಸರು ಮುಂಚೂಣಿಯಲ್ಲಿದ್ದರೂ, ಅದನ್ನು ದೃಢಿಕರಿಸುವಂತಹ ಬೆಳವಣಿಗೆಗಳು ನಡೆಯುತ್ತಿಲ್ಲ. ತಮ್ಮ ಸ್ಪರ್ಧೆಯನ್ನು ಸ್ವತಃ ಸುರೇಶ್ ನಿರಾಕರಿಸಿದ್ದಾರೆ. ಆದರೂ, ಪಕ್ಷದ ಕೆಲವರು ಇತ್ತೀಚೆಗೆ ಕ್ಷೇತ್ರಕ್ಕೆ ಅವರ ಹೆಸರನ್ನು ಜಪ ಮಾಡುತ್ತಿದ್ದಾರೆ. ಇದರ ಜೊತೆಗೆ ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಹೆಸರು ಚಾಲ್ತಿಯಲ್ಲಿದೆ.

ಕಾದು ನೋಡುವ ತಂತ್ರ: 

ಬಿಜೆಪಿ–ಜೆಡಿಎಸ್‌ನಲ್ಲಿ ಸೃಷ್ಟಿಯಾಗಿರುವ ಅಭ್ಯರ್ಥಿ ಗೊಂದಲದಲ್ಲಿ ಅಂತಿಮವಾಗಿ ಯಾರ ಹೆಸರು ಘೋಷಣೆಯಾಗುತ್ತದೆ ಎಂಬುದನ್ನು ಕಾದು ನೋಡುತ್ತಿರುವ ಡಿಕೆಶಿ, ನಂತರ ತಮ್ಮ ಪಕ್ಷದ ಅಭ್ಯರ್ಥಿಯನ್ನು ಘೋಷಿಸುವ ಆಲೋಚನೆಯಲ್ಲಿದ್ದಾರೆ. ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣ ಇದೆ ಎನಿಸಿದರೆ ಕಡೆ ಗಳಿಗೆಯಲ್ಲಿ ಅವರ ಸಹೋದರನ ಹೆಸರನ್ನೇ ಘೋಷಿಸುವ ಅಥವಾ ಬೇರೆಯವರನ್ನು ಕಣಕ್ಕಿಳಿಸಿ ಕ್ಷೇತ್ರದಲ್ಲಿ ‘ಕೈ’ ಪಾರುಪತ್ಯ ಸ್ಥಾಪಿಸುವ ತಂತ್ರ ಹೆಣೆದಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಯಾಗಿ ಇಂದಿಗೆ ನಾಲ್ಕು ದಿನಗಳಾಗಿದ್ದು, ಮತ ಸಮರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ನಾಮಪತ್ರ ಸಲ್ಲಿಕೆಯ ಒಂದು ದಿನ ಕಳೆದು ಹೋಗಿದೆ. ಅಭ್ಯರ್ಥಿ ಯಾರೆಂಬುದು ಇನ್ನೂ ಕಗ್ಗಂಟಾಗಿದ್ದು, ಕ್ಷೇತ್ರದ ಟಿಕೆಟ್ ರಾಜಕೀಯ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಇನ್ನೂ ಶುರುವಾಗದ ಅಭ್ಯರ್ಥಿಗಳ ಪ್ರಚಾರವು ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿದೆ.

ಕುತೂಹಲ ಕೆರಳಿಸಿದ ಸಿಪಿವೈ ನಡೆ

‘ನಾನೇ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ’ ಎಂದು ಹೇಳಿಕೊಂಡು ಬಂದಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೊಗೇಶ್ವರ್ ಮೂರು ದಿನಗಳ ಹಿಂದೆಯಷ್ಟೇ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದರು.

ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿರುವ ಬೆನ್ನಲ್ಲೇ ನಡೆದ ಸಭೆಯಲ್ಲಿ ಸಿಪಿವೈ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸಭೆಯಲ್ಲೂ ‘ನಾನೇ ಮೈತ್ರಿ ಅಭ್ಯರ್ಥಿ’ ಎಂಬ ಮಾತನ್ನು ಪುನರುಚ್ಚರಿಸಿದ ಅವರು ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಇಚ್ಛೆಯಂತೆ ನಡೆದುಕೊಳ್ಳುವ ಅಂದರೆ ಸ್ವತಂತ್ರವಾಗಿ ಕಣಕ್ಕಿಳಿಯುವ ಸುಳಿವು ನೀಡಿದರು.

ತಮಗೆ ಟಿಕೆಟ್ ಕೊಡಲು ಕುಮಾರಸ್ವಾಮಿ ಅವರಿಗೆ ಮನಸ್ಸಿಲ್ಲ ಎಂಬುದು ಅವರಿಗೆ ಗೊತ್ತಿದೆ. ಆದರೂ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಕ್ಷೇತ್ರದ ಚಿತ್ರಣ ಗಮನಿಸಿ ಕಡೆ ಗಳಿಗೆಯಲ್ಲಿ ತನಗೆ ಟಿಕೆಟ್ ಘೋಷಿಸಬಹುದು ಎಂಬ ಆಶಾಭಾವನೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ.

ಅಭ್ಯರ್ಥಿ ಕುರಿತು ಎಚ್‌ಡಿಕೆ ತಮ್ಮ ನಿರ್ಧಾರ ಪ್ರಕಟಿಸಿದ ಬಳಿಕ ತಮ್ಮ ಮುಂದಿನ ತೀರ್ಮಾನ ಕೈಗೊಳ್ಳುವುದಕ್ಕಾಗಿ ಕಾದು ತಂತ್ರದ ಮೊರೆ ನೋಡುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿ ಜೆಡಿಎಸ್ ನಾಯಕರ ತಂಡವೊಂದು ಟಿಕೆಟ್‌ಗೆ ಪಟ್ಟು ಹಿಡಿದು ಸ್ವತಂತ್ರ ಸ್ಪರ್ಧೆಯ ಸುಳಿವು ನೀಡಿರುವ ಸಿಪಿವೈ ಅವರನ್ನು ಭೇಟಿ ಮಾಡಿ ಮನವೊಲಿಕೆಗೆ ಯತ್ನಿಸಿದೆ. ಈ ಚುನಾವಣೆ ತಮ್ಮ ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿರುವುದರಿಂದ ಸಿಪಿವೈ ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಕುತೂಹಲ ಬಿಜೆಪಿ ಕಾರ್ಯಕರ್ತರಲ್ಲಿದೆ.

ಚನ್ನಪಟ್ಟಣ ಕ್ಷೇತ್ರದ ನಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.