ADVERTISEMENT

ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದಲ್ಲಿ ಡಿಕೆಶಿ–ಎಚ್‌ಡಿಕೆ ವಾಕ್ಸಮರ

ಯೋಗೇಶ್ವರ್ ಪರ ಉಪ ಮುಖ್ಯಮಂತ್ರಿ, ನಿಖಿಲ್ ಪರ ಕೇಂದ್ರ ಸಚಿವ ಭರ್ಜರಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 15:30 IST
Last Updated 4 ನವೆಂಬರ್ 2024, 15:30 IST
ಡಿಕೆಶಿ , ಎಚ್‌ಡಿಕೆ
ಡಿಕೆಶಿ , ಎಚ್‌ಡಿಕೆ   

ಚನ್ನಪಟ್ಟಣ (ರಾಮನಗರ): ಕ್ಷೇತ್ರದಲ್ಲಿ ಸೋಮವಾರ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರ ಮತಬೇಟೆಗಿಳಿದರು. ನಾಯಕರು ನಡೆಸಿದ ಪ್ರಚಾರ, ಪರಸ್ಪರ ವಾಕ್ಸಮರಕ್ಕೂ ಸಾಕ್ಷಿಯಾಯಿತು.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ವೆಂಕಟೇಶ್, ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಶಾಸಕರು ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರಚಾರ ನಡೆಸಿದರು. ನಿಖಿಲ್ ಪತ್ನಿ ರೇವತಿ ಅವರು ಕೂಡ ಮತ ಯಾಚಿಸಿದರು.

ರೆಡಿಮೇಡ್ ಗಂಡು:

ADVERTISEMENT

‘ಯೋಗೇಶ್ವರ್ ರೆಡಿಮೇಡ್ ಗಂಡು. ಇಲ್ಲಿ ಅವರಷ್ಟೇ ಅಭ್ಯರ್ಥಿಯಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೂಡ ಅಭ್ಯರ್ಥಿಯೇ. ಸ್ಥಳೀಯರ ಕಷ್ಟ–ಸುಖದ ಅರಿವಿರುವ ಯೋಗೇಶ್ವರ್ ಬೆನ್ನಿಗೆ ನಾನಿದ್ದೇನೆ. ಕುಮಾರಣ್ಣನಿಂದ ವಂಚನೆಗೊಳದಾದ ಅವರಿಗೆ ಕರೆದು ಟಿಕೆಟ್ ಕೊಟ್ಟಿದ್ದೇನೆ. ನಾವು ಮನೆಗೆ ಉಚಿತ ವಿದ್ಯುತ್ ನೀಡಿದ್ದೇವೆ. ಯೋಗೇಶ್ವರ್ ಕೆರೆಗಳಿಗೆ ನೀರು ತುಂಬಿಸಿದ್ದಾರೆ. ಇಂತಹ ಒಂದು ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರಾ?’ ಎಂದು ಡಿಸಿಎಂ ಪ್ರಶ್ನಿಸಿದರು.

ಅಧರ್ಮಕ್ಕೆ ಸೋಲು:

‘ಚನ್ನಪಟ್ಟಣದಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಯುದ್ಧ ನಡೆಯುತ್ತಿದೆ. ನಿಖಿಲ್ ಗೆಲ್ಲುವ ಮೂಲಕ ಅಧರ್ಮಕ್ಕೆ ಹೀನಾಯ ಸೋಲಾಗಲಿದೆ. ಇಲ್ಲಿ ಚದುರಂಗ ಆಟವಾಡಿ ಮುಳುಗಿ ಎದ್ದವರ ದೊಡ್ಡ ಇತಿಹಾಸವೇ ಇದೆ. ಎಲ್ಲದಕ್ಕೂ ಅಂತಿಮ ಎನ್ನುವುದಿದೆ. ಇಲ್ಯಾರೂ ಶಾಶ್ವತವಲ್ಲ. ಬಾವುಟ ಹಾರಿಸುವುದಕ್ಕಿಂತ ನಂಬಿ ಗೆಲ್ಲಿಸಿದ ಜನರ ಋಣ ತೀರಿಸುವುದು ಮುಖ್ಯ’ ಎಂದು ಡಿಸಿಎಂ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ನಿಖಿಲ್ ಪರ ಪ್ರಚಾರಕ್ಕಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಮಂಗಳವಾರ ಚನ್ನಪಟ್ಟಣಕ್ಕೆ ಬರಲಿದ್ದು ಗ್ರಾಮೀಣ ಭಾಗದಲ್ಲಿ ಮತಯಾಚಿಸಲಿದ್ದಾರೆ.

‘ನಿಖಿಲ್ ಇನ್ನೂ ಕಂದ ಹೇಳಿದಂತೆ ಕೇಳ್ತಾನೆ’

‘ನಿಖಿಲ್ ಕುಮಾರಸ್ವಾಮಿ ಪಾಪ ಇನ್ನೂ ಕಂದ. ಅವರು (ಎಚ್‌ಡಿಕೆ) ಇಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ. ಅಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ. ಕಣ್ಣೀರು ಹಾಕು ಎಂದರೂ ಹಾಕುತ್ತಾನೆ. ನಗು ಎಂದರೂ ನಗುತ್ತಾನೆ. ಆತನನ್ನು ನಾನು ಪ್ರಶ್ನಿಸುವುದಿಲ್ಲ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧಿಸಿರುವೆ ಎಂದು ಆತ ಹೇಳುತ್ತಿದ್ದಾನೆ. ನಿಖಿಲ್ ಅವರ ಒತ್ತಡಕ್ಕೆ ಸ್ಪರ್ಧಿಸಿದ್ದಾನೆಯೇ ಹೊರತು ಜನಸೇವೆಗಾಗಿ ಅಲ್ಲ. ನಂಬಿ ಮುಖ್ಯಮಂತ್ರಿಯನ್ನಾಗಿ ಮಾಡಿದ ಜನರನ್ನು ಕೈಬಿಟ್ಟು ಮಂಡ್ಯಕ್ಕೆ ಹೋಗಿರುವ ಕುಮಾರಣ್ಣ ಈಗ ಮತ್ತೆ ಬಂದು ಮತ ಕೇಳುವ ನೈತಿಕತೆ ನಿನಗಿದೆಯೇ?’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

‘ಕಂದ ಈ ಸಲ ಅಭಿಮನ್ಯುವಲ್ಲ ಅರ್ಜನ’

‘ಇವತ್ತು ಡಿಸಿಎಂ ಹುದ್ದೆಯಲ್ಲಿರುವ ವ್ಯಕ್ತಿ ನಿಖಿಲ್‌ನನ್ನು ಕಂದ ಶಿಶು ಎಂದು ಕರೆಯುತ್ತಿದ್ದಾರೆ. ಆ ಶಿಶುವನ್ನು ಮಂಡ್ಯ ಮತ್ತು ರಾಮನಗರದಲ್ಲಿ ಕುತಂತ್ರದಿಂದ ಸೋಲಿಸಿದ್ಯಾರು? ಅರ್ಜುನನನ್ನು ಕುತಂತ್ರದಿಂದ ಬೇರೆಡೆಗೆ ಸಾಗ ಹಾಕಿ ಅಭಿಮನ್ಯುವನ್ನು ಸೋಲಿಸಿ ಹೇಯವಾಗಿ ಕೊಂದರು. ಈ ಬಾರಿ ನಿಖಿಲ್ ಅಭಿಮನ್ಯುವಲ್ಲ ಅರ್ಜುನ’ ಎಂದು ಡಿಕೆಶಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರ ಸಾಕ್ಷಿ ಗುಡ್ಡೆ ಏನು? ಬಲವಂತವಾಗಿ ಮಗನನ್ನು ನಿಲ್ಲಿಸಿ ಕಣ್ಣೀರು ಹಾಕಿಸಿರುವ ಅವರು ಜನರೇ ಅವನ ಕಣ್ಣೀರು ಒರೆಸಬೇಕು ಎಂದು ಕೇಳುತ್ತಾರಲ್ಲ. ಅವರಿಗೆ ನೈತಿಕತೆ ಇದೆಯೇ?
ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಅಭ್ಯರ್ಥಿ
ನಮ್ಮ ಕುಟುಂಬದ ಬಗ್ಗೆ ಕಾಂಗ್ರೆಸ್‌ ನಾಯಕರು ಎಲ್ಲೆ ಮೀರಿ ಮಾಡುತ್ತಿರುವ ಆರೋಪಗಳನ್ನು ಜನ ಗಮನಿಸುತ್ತಿದ್ದಾರೆ. ನಮ್ಮ ವಿರುದ್ಧದ ಟೀಕೆ ಮತ್ತು ಆರೋಪಗಳಿಗೆ ನ.13ರಂದು ಜನರೇ ತೀರ್ಪು ಕೊಡಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ
ಕೋತಿ ಮರದಿಂದ ಈ ಮರಕ್ಕೆ ಹಾರುವಂತೆ ಪಕ್ಷದಿಂದ ಪಕ್ಷಕ್ಕೆ ಪಕ್ಷಾಂತರ ಮಾಡುವ ಪಕ್ಷಾಂತರಿಗೆ ಬುದ್ಧಿ ಕಲಿಸುವ ಕಾಲ ಬಂದಿದೆ. ರಾಜನೀತಿಗೆ ಒಂದು ದಿಕ್ಕು ತೋರಿಸುವ ಚುನಾವಣೆ ಇದಾಗಿದೆ.
ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ
ಸಿ.ಪಿ.ಯೋಗೇಶ್ವರ್ ಪರವಾಗಿ ಸೋಮವಾರ ತಾಲ್ಲೂಕಿನ ತಗಚಗೆರೆಯಲ್ಲಿ ಪ್ರಚಾರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯೋಗೇಶ್ವರ್ ಕೈ ಹಿಡಿದು ಮೇಲಕ್ಕೆತ್ತಿ ಬೆಂಬಲಿಸುವಂತೆ ಜನರಿಗೆ ಮನವಿ ಮಾಡಿದರು
ಮಲ್ಲಮಗೆರೆ ಗ್ರಾಮದಲ್ಲಿ ಸೋಮವಾರ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದರು. ಮಾಜಿ ಸಚಿವ ಸಾ.ರಾ.ಮಹೇಶ್ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.