ADVERTISEMENT

ಚನ್ನಪಟ್ಟಣ | ಉಪ ಚುನಾವಣೆ ನೆಪ: ಅಭಿವೃದ್ಧಿ ಜಪ

ಚನ್ನಪಟ್ಟಣ ಗೆಲುವಿಗೆ ಪಣ: ₹500 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ

ಓದೇಶ ಸಕಲೇಶಪುರ
Published 22 ಸೆಪ್ಟೆಂಬರ್ 2024, 4:40 IST
Last Updated 22 ಸೆಪ್ಟೆಂಬರ್ 2024, 4:40 IST
ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವ ಸಲುವಾಗಿ ಶನಿವಾರ ಚನ್ನಪಟ್ಟಣಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪಟ್ಟಣದ ಹಜರತ್ ಸೈಯದ್ ಮೊಹಮ್ಮದ್ ಅಖೀಲ್ ಶಾ ಖಾದ್ರಿ ಅಲ್- ಬಗ್ದಾದಿ ದರ್ಗಾಗೆ ಭೇಟಿ ನೀಡಿದರು
ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವ ಸಲುವಾಗಿ ಶನಿವಾರ ಚನ್ನಪಟ್ಟಣಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪಟ್ಟಣದ ಹಜರತ್ ಸೈಯದ್ ಮೊಹಮ್ಮದ್ ಅಖೀಲ್ ಶಾ ಖಾದ್ರಿ ಅಲ್- ಬಗ್ದಾದಿ ದರ್ಗಾಗೆ ಭೇಟಿ ನೀಡಿದರು   

ರಾಮನಗರ: ಉಪ ಚುನಾವಣೆಯಲ್ಲಿ ಚನ್ನಪಟ್ಟಣವನ್ನು ‘ಕೈ’ವಶ ಮಾಡಿಕೊಳ್ಳಲೇಬೇಕೆಂದು ಪಣ ತೊಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಭಿವೃದ್ಧಿ ಕಾರ್ಯಗಳ ಮೂಲಕ ಮತ ಫಸಲು ತೆಗೆಯಲು ಮುಂದಾಗಿದ್ದಾರೆ. ಇದುವರೆಗೆ ತಾಲ್ಲೂಕಿನಲ್ಲಿ ಸುಮಾರು ₹500 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದಾರೆ.

ಕ್ಷೇತ್ರವನ್ನು ಸತತ ಎರಡು ಸಲ ಪ್ರತಿನಿಧಿಸಿದ್ದ ರಾಜಕೀಯ ಎದುರಾಳಿ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ, ಚನ್ನಪಟ್ಟಣ ತೊರೆಯುತ್ತಿದ್ದಂತೆ ಶಿವಕುಮಾರ್ ಕ್ಷೇತ್ರ ಪ್ರವೇಶಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿ.ಕೆ. ಸುರೇಶ್‌ಗಾದ ಸೋಲಿನ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಅವರು, ಮೂರು ತಿಂಗಳಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ.

ದೇವಾಲಯಗಳಿಗೆ ಭೇಟಿ, ಹೋಬಳಿಗಳಲ್ಲಿ ಜನಸ್ಪಂದನ ಕಾರ್ಯಕ್ರಮ, ಮುಡಾ ಪ್ರಕರಣದ ಜನಜಾಗೃತಿ ಸಮಾವೇಶ, ಉದ್ಯೋಗ ಮೇಳ, ನಿವೇಶನ ಹಂಚಿಕೆಗೆ ಜಮೀನು ಗುರುತಿಸುವಿಕೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಪಟ್ಟಣದಲ್ಲಿ ₹220 ಕೋಟಿ ಹಾಗೂ ಗ್ರಾಮೀಣ ಭಾಗದಲ್ಲಿ ₹300 ಕೋಟಿ ವೆಚ್ಚದ ಕಾಮಗಾರಿಗಳಿಗೆ ಇದುವರೆಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಕ್ಷೇತ್ರಕ್ಕೆ ₹100 ಕೋಟಿ ವಿಶೇಷ ಅನುದಾನ ತಂದಿದ್ದಾರೆ.

ADVERTISEMENT

ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಒಂದೊಂದು ಹೋಬಳಿಯನ್ನು ಅಕ್ಕಪಕ್ಕದ ಕಾಂಗ್ರೆಸ್ ಶಾಸಕರಿಗೆ ಹಂಚಿಸಿರುವ ಡಿಕೆಶಿ, ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಅಣಿಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ಶಾಸಕರು ಆಗಾಗ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸುತ್ತಾ ಚುನಾವಣೆಗೆ ಪಕ್ಷ ಸಂಘಟಿಸುತ್ತಿದ್ದಾರೆ.

ನಾನು ಹೊರಗಿನಿಂದ ಬಂದಿಲ್ಲ. ನಿಮ್ಮನ್ನು ಬಿಟ್ಟು ಹೋಗಲ್ಲ. ಹುಟ್ಟಿರೋದು ಇಲ್ಲೇ. ಸಾಯೋದು ಇಲ್ಲೆ. ಮೂರು ತಿಂಗಳಿಗೆ ಇಷ್ಟು ಅಭಿವೃದ್ಧಿ ಕೆಲಸ ಮಾಡಿರುವ ನನಗೆ ಮೂರೂವರೆ ವರ್ಷ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ
ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ

ಅಭ್ಯರ್ಥಿ ಗುಟ್ಟು ಬಿಡದ ಡಿಕೆಶಿ ‘ಚನ್ನಪಟ್ಟಣದಿಂದ ನನ್ನ ರಾಜಕೀಯದ ಹೊಸ ಅಧ್ಯಾಯ ಪ್ರಾರಂಭ’ ಎಂದು ಕ್ಷೇತ್ರಕ್ಕೆ ಕಾಲಿಟ್ಟ ಡಿಕೆಶಿ ತಾವೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ. ಕ್ಷೇತ್ರಕ್ಕೆ ಬಂದಾಗಲೆಲ್ಲಾ ಎದುರಾಗುವ ಅಭ್ಯರ್ಥಿ ಕುರಿತ ಪ್ರಶ್ನೆಗೆ ‘ಯಾರೇ ನಿಂತರೂ ನಾನೇ ಅಭ್ಯರ್ಥಿ. ನನ್ನ ಮುಖ ನೋಡಿಯೇ ಜನ ಮತ ಹಾಕಬೇಕು’ ಎನ್ನುವ ಅವರು ಇದುವರೆಗೆ ಅಭ್ಯರ್ಥಿಯ ಗುಟ್ಟು ಬಿಟ್ಟು ಕೊಟ್ಟಿಲ್ಲ. ಸುರೇಶ್ ಸ್ಪರ್ಧೆಗೆ ಒತ್ತಡ ಚುನಾವಣೆಗೆ ಡಿ.ಕೆ. ಸುರೇಶ್ ಅವರನ್ನೇ ಕಣಕ್ಕಿಳಿಸಬೇಕೆಂಬ ಒತ್ತಾಯ ಸ್ಥಳೀಯ ಮುಖಂಡರಿಂದಷ್ಟೇ ಅಲ್ಲದೆ ಸಚಿವರಿಂದಲೂ ಕೇಳಿ ಬರುತ್ತಿದೆ. ಕ್ಷೇತ್ರದವರೇ ಆದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ‘ಅಭಿವೃದ್ಧಿ ದೃಷ್ಟಿಯಿಂದ ಸುರೇಶ್ ಅವರೇ ಅಭ್ಯರ್ಥಿಯಾಗಬೇಕೆಂದು ಒತ್ತಾಯಿಸಿದ್ದೇನೆ’ ಎಂದಿದ್ದರು. ಶನಿವಾರ ಡಿಸಿಎಂ ಜೊತೆ ಕ್ಷೇತ್ರಕ್ಕೆ ಬಂದಿದ್ದ ಸಚಿವ ಜಮೀರ್ ಅಹಮದ್ ಖಾನ್ ತಮ್ಮ ಭಾಷಣದಲ್ಲಿ ‘ಕ್ಷೇತ್ರಕ್ಕೆ ಸಮರ್ಥರು ಬೇಕಿರುವುದರಿಂದ ಸುರೇಶ್ ಅವರನ್ನೇ ಅಭ್ಯರ್ಥಿಯಾಗಿ ಘೋಷಿಸಿ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.