ಚನ್ನಪಟ್ಟಣ: ‘ಕಾಂಗ್ರೆಸ್‌ನವರು ಕೊಟ್ಟಂತ ಒಂದು ಯೋಜನೆಯನ್ನೂ ಎಚ್.ಡಿ. ಕುಮಾರಸ್ವಾಮಿ ಕೊಟ್ಟಿಲ್ಲ. ಈಗ ನೋಡಿದರೆ ರಾಮನಗರ ಹಾಗು ಚನ್ನಪಟ್ಟಣ ನಡುವೆ ಕಾರ್ಖಾನೆ ಮಾಡ್ತಾರಂತೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ‘ಒಂದೊಮ್ಮೆ ಕಾರ್ಖಾನೆ ಮಾಡುವುದಾದರೆ ಬಿಡದಿಯ ಕೇತಗಾನಹಳ್ಳಿಯ ಜಮೀನು ಕೊಡಿ. ಈಗಲೇ ಐದು ಪಟ್ಟು ಹಣ ಕೊಟ್ಟು ಖರೀದಿ ಮಾಡ್ತೀವಿ’ ಎಂದರು.
‘ಹಿಂದೆ ಕಾಂಗ್ರೆಸ್‌ಗೆ ಬನ್ನಿ ಎಂದು ಹಲವು ಬಾರಿ ಯೋಗೇಶ್ವರ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅದನ್ನು ಕೇಳದೆ ಬಿಜೆಪಿಗೆ ಹೋಗಿ ಸೋತರು. ಆಗಿನ ಅವರ ಸೋಲಿಗೆ ಅವರೇ ಕಾರಣ. ಈಗ ಅವರಿಗೆ ಎಲ್ಲವೂ ಅರ್ಥವಾಗಿದೆ. ಯೋಗೇಶ್ವರ್ ನಿಲ್ಲದಿದ್ದರೆ ನಾನೇ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದೆ. ಆದರೆ ಯೋಗೇಶ್ವರ್ ತಮ್ಮ ಸ್ಪರ್ಧೆ ಖಚಿತಪಡಿಸಿದ್ದರಿಂದ ನಾನು ಬಿಟ್ಟುಕೊಟ್ಟೆ. ಹಳೆಯದನ್ನು ಮರೆತು ಮುಂದೆ ಆಗಬೇಕಾದ್ದನ್ನು ನೋಡೋಣ’ ಎಂದು ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಮಾತನಾಡಿ, ‘ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ರಾಜಕೀಯ ಶುರು ಮಾಡಿದೆ. ನನ್ನ ರಾಜಕೀಯ ನಿರ್ಣಯಗಳು ನನ್ನ ತಾಲ್ಲೂಕಿನ ಜನರ ಹಿತಕ್ಕಾಗಿಯೇ ಹೊರತು ವೈಯಕ್ತಿಕ ಉದ್ದೇಶಕ್ಕಲ್ಲ. ಸತತ ಎರಡು ಸೋಲು ನನ್ನ ಆತ್ಮವಿಶ್ವಾಸವನ್ನು ಸ್ವಲ್ಪ ಕುಗ್ಗಿಸಿದ್ದು ಸುಳ್ಳಲ್ಲ. ಕುಮಾರಸ್ವಾಮಿ ಕುಟುಂಬಕ್ಕೆ ನಾನೇನು ಅನ್ಯಾಯ ಮಾಡಿದ್ದೆ? ಅವರಿಂದ ತೆರವಾದ ಸ್ಥಾನವನ್ನು ನನಗೆ ಬಿಡುತ್ತಾರೆಂದರೆ, ಅವರ ಪುತ್ರನ ಕರೆದುಕೊಂಡು ಬಂದಿದ್ದಾರೆ’ ಎಂದರು.
‘ಟಿಕೆಟ್ ವಿಷಯದಲ್ಲಿ ನನ್ನನ್ನು ಅತಂತ್ರ ಮಾಡಿ ರಾಜಕೀಯವಾಗಿ ಮುಗಿಸಲು ಕುಮಾರಸ್ವಾಮಿ ತಂತ್ರ ಮಾಡಿದರು. ನನ್ನನ್ನು ಹರಕೆಯ ಕುರಿ ಮಾಡುತ್ತಿರುವವರ ಕುರಿತು ಗೊತ್ತಾಗಿ ನಾನು ನನ್ನ ಮೂಲ ಪಕ್ಷ ಕಾಂಗ್ರೆಸ್‌ಗೆ ಬಂದೆ. ನನ್ನ ಸಂಕಷ್ಟದ ಕಾಲದಲ್ಲಿ ಕಾಂಗ್ರೆಸ್ ನನ್ನ ಕೈ ಹಿಡಿದಿದೆ. ಇದನ್ನು ನನ್ನ ಜೀವಮಾನದಲ್ಲಿ ಮರೆಯಲಾರೆ’ ಎಂದು ಹೇಳಿದರು.
‘ನಾನು ಮಾಡಿದ ನೀರಾವರಿ ಯೋಜನೆಗಳ ಲಾಭ ಪಡೆಯಲು ದೇವೇಗೌಡರ ಕುಟುಂಬದವರು ಈಗ ಪೈಪೋಟಿ ಮಾಡುತ್ತಿದ್ದಾರೆ. ನಾನು ಅಳುವ ಅಗತ್ಯವಿಲ್ಲ. ನನ್ನ ಜನ ಅದಕ್ಕೆ ಅವಕಾಶ ಕೊಡುವುದಿಲ್ಲ. ಕಣ್ಣೀರು ಯಾವಾಗ ಬೇಕಾದರೂ ಬರುತ್ತದೆ. ಆದರೆ, ದುಡಿದವರಿಗೆ ಮಾತ್ರ ಬೆವರು ಬರುತ್ತದೆ. ನಾನು ಕ್ಷೇತ್ರದ ನೀರಾವರಿಗೆ ಬೆವರು ಹರಿಸಿದ್ದೇನೆ. ಹಾಗಾಗಿ, ಜನ ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ.
ಕುಮಾರಸ್ವಾಮಿ ಮತ್ತು ಅವರ ಪುತ್ರ ರಾಜ್ಯದ ಎಲ್ಲಿ ಬೇಕಾದರೂ ಹೋಗಿ ನಿಲ್ಲಬಹುದು. ಆದರೆ, ಈ ಮಣ್ಣಿನ ಮಗನಾದ ನಾನು ಕ್ಷೇತ್ರ ಬಿಟ್ಟು ಎಲ್ಲಿಗೆ ಹೋಗಲಿ? ನಿಮ್ಮ ಸೇವೆಯಲ್ಲೇ ನಾನು ರಾಜಕೀಯ ಅಸ್ತಿತ್ವ ಕಂಡುಕೊಂಡು ಬಂದಿದ್ದೇನೆ’ ಎಂದು ಯೋಗೇಶ್ವರ್ ಹೇಳಿದರು.
ಪಕ್ಷದ ಮುಖಂಡ ಡಿ.ಕೆ. ಸುರೇಶ್ ಮಾತನಾಡಿ, ‘ತಾಲ್ಲೂಕಿನ ರೈತ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಯೋಗೇಶ್ವರ್ ಶ್ರಮಿಸಿದ್ದಾರೆ. ಅವರ ಕೆಲಸಕ್ಕೆ ಕ್ಷೇತ್ರದ ಜನ ಪಕ್ಷಬೇಧ ಮರೆತು ಹಳ್ಳಿ ಹಳ್ಳಿಗಳಲ್ಲಿ ಸನ್ಮಾನಿಸಿದ್ದರು. ಯೋಗೇಶ್ವರ್ ಕೆರೆ ತುಂಬಿಸಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ವಿದ್ಯುತ್ ಕೊಟ್ಟರು. ರೈತರಿಗೆ ಉಚಿತವಾಗಿ ಟ್ರಾನ್ಸ್ ಫಾರ್ಮರ್‌ಗಳನ್ನು ಕೊಟ್ಟರು. ಜಿಲ್ಲೆಯಿಂದ ಮುಖ್ಯಮಂತ್ರಿ ಮತ್ತು ಪ್ರಧಾನಿಯಾದವರು ಈ ಕೆಲಸ ಮಾಡಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಕುಮಾರಸ್ವಾಮಿ ಅವರು ಕ್ಷೇತ್ರದ ಜನರ ಕಷ್ಟ ಸುಖ ಕೇಳುವುದಿರಲಿ, ಅವರ ಪಕ್ಷದ ಕಾರ್ಯಕರ್ತರ ಕಷ್ಟ ಸುಖವನ್ನೂ ಕೇಳಲಿಲ್ಲ. ಯೋಗೇಶ್ವರ್ ಪಕ್ಷ ಬದಲಾವಣೆ ಮಾಡಿದ್ದಾರೆ ಎನ್ನುವ ನೀವು, ಅಧಿಕಾರಕ್ಕಾಗಿ ಬೇರೆಯವರ ಜೊತೆ ಮೈತ್ರಿ ಮಾಡಿಕೊಳ್ಳುವ ದೇವೇಗೌಡರ ಕುಟುಂಬದವರನ್ನು ಏನನ್ನುವಿರಿ’ ಎಂದು ಪ್ರಶ್ನಿಸಿದರು.
‘ನಾನು ಹಾಗೂ ನಮ್ಮಣ್ಣ ಅಪೂರ್ವ ಸಹೋದರರು ಹೌದು. ಆದರೆ ನಿಮ್ಮಂತೆ, ಸೋದರ ಸಂಕಷ್ಟದಲ್ಲಿರುವಾಗಿ ಅವರೇ ಬೇರೆ, ನಾವೇ ಬೇರೆ ಎಂದು ಹೇಳಿಕೆ ನೀಡುವವರಲ್ಲ. ಕಷ್ಟ– ಸುಖದಲ್ಲಿ ನಾವು ಸದಾ ಒಟ್ಟಿಗೆ ಇರುತ್ತೇವೆ. ನಮಗೆ ಹೃದಯ ಇಲ್ಲ ಅದಕ್ಕೆ ಕಣ್ಣೀರು ಬರಲ್ಲ ಎನ್ನುವ ದೇವೇಗೌಡರೇ ನಿಮ್ಮ ಮೊಮ್ಮಗನಿಂದ ಹಾಸನದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಾಗ, ನನ್ನ ಕುಟುಂಬದಿಂದ ತಪ್ಪಾಯಿತು ಎಂದು ಒಂದು ಮಾತೂ ಹೇಳಲಿಲ್ಲ. ಮೊಮ್ಮಗನ ತಪ್ಪಿಗೆ ನಿಮ್ಮನ್ನು ಬೆಳೆಸಿದ ಜನರ ಕ್ಷಮೆ ಕೇಳದ ನಿಮಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇಲ್ಲ’ ಎಂದರು.
‘ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಬೊಮ್ಮಾಯಿ, ಪುಟ್ಟಸ್ವಾಮಿಗೌಡರು, ಮಾದೇಗೌಡ, ರಮೇಶ್ ಕುಮಾರ್, ಅಂಬರೀಶ್, ಚನ್ನಪಟ್ಟಣದ ಮಾನಸಪುತ್ರ ವರದೇಗೌಡರು, ಬಿ.ಎಲ್. ಶಂಕರ್ ಸೇರಿದಂತೆ ಯಾರನ್ನು ಬಿಟ್ಟಿದ್ದೀರಿ. ನಿಮ್ಮನ್ಮೇ ನಂಬಿಕೊಂಡು ಬಂದಿದ್ದ ಮುದ್ದುಹನುನೇಗೌಡರಿಗೂ ನಾಮ ಹಾಕಿದ್ರಿ. ಕೋಲಾರದ ಬೈರೇಗೌಡರು, ಮಂಡ್ಯದ ನಾಗೇಗೌಡರು, ಪಿ.ಜಿ.ಆರ್. ಸಿಂಧ್ಯ, ಬಚ್ವೇಗೌಡರು, ಡಿ.ಬಿ. ಚಂದ್ರೇಗೌಡ, ಎಂ.ಪಿ. ಪ್ರಕಾಶ್, ಸಿದ್ದರಾಮಯ್ಯ ಸೇರಿದಂತೆ ಎಷ್ಟು ನಾಯಕರನ್ನು ತುಳಿದಿರಿ’ ಎಂದು ಸುರೇಶ್ ಟೀಕಿಸಿದರು.
‘ಇವರನ್ನು ಉಳಿಸಿಕೊಂಡಿದ್ದರೆ ನಿಮ್ಮದೊಂದು ಪ್ರಬಲ ಪ್ರಾದೇಶಿಕ ಪಕ್ಷ ಆಗಿರುತ್ತಿತ್ತು. ಆದರೆ, ನಿಮ್ಮ ಮಕ್ಕಳ ವಿರುದ್ಧ ಯಾರೂ ಬೆಳೆಯದಂತೆ ಯೋಗೇಶ್ವರ್, ಶಿವಕುಮಾರ್, ನಾನು, ಬಾಲಕೃಷ್ಣ ಸೇರಿದಂತೆ ಎಲ್ಲರೂ ಒಕ್ಕಲಿಗರೇ. ಆದರೆ, ನಮ್ಮ ಹೆಸರಿನ ಮುಂದೆ ನಮ್ಮ ತಂದೆ- ತಾಯಿ ಗೌಡ ಎಂದು ಹೆಸರಿಡಲಿಲ್ಲ. ಈ ಚುನಾವಣೆ ನಮ್ಮ ತಾಲ್ಲೂಕು ಮತ್ತು ಜಿಲ್ಲೆಯ ಸ್ವಾಭಿಮಾನದ ಪ್ರತಿಷ್ಠೆ. ಯೋಗೇಶ್ವರ್ ಗೆಲ್ಲಿಸಿ, ಜಿಲ್ಲೆಗೆ ನೆಂಟರಂತೆ ಬಂದಿರುವವರನ್ನು ನೆಂಟರಂತೆ ಮನೆಗೆ ಕಳಿಸಿ. ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನೇ ಬಿಡದ ದೇವೇಗೌಡರ ಕುಟುಂಬದವರು ನಮ್ಮನ್ನು ಬಿಡುತ್ತಾರೆಯೇ?’ ಎಂದರು.
ಸಚಿವ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಸಚಿವ ಜಮೀರ್ ಅಹ್ಮದ್, ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಯೋಗೇಶ್ವರ್ ಪರ ಮತ ಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.