ADVERTISEMENT

Channapatna Bypoll | ಚನ್ನಪಟ್ಟಣದಲ್ಲಿ ‘ಸೈನಿಕ’ ಶಕ್ತಿ ಪ್ರದರ್ಶನ

ಗಮನ ಸೆಳೆದ ರೋಡ್‌ ಷೋ; ನಾಮಪತ್ರ ಸಲ್ಲಿಕೆಗೆ ಸಿ.ಎಂ, ಡಿಸಿಎಂ, ಸಚಿವರ ಸಾಥ್

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 0:30 IST
Last Updated 25 ಅಕ್ಟೋಬರ್ 2024, 0:30 IST
ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಗುರುವಾರ ಚುನಾವಣಾಧಿಕಾರಿ ಬಿನೋಯ್ ಪಿ.ಕೆ. ಅವರಿಗೆ ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಸಾಥ್ ನೀಡಿದರು
ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಗುರುವಾರ ಚುನಾವಣಾಧಿಕಾರಿ ಬಿನೋಯ್ ಪಿ.ಕೆ. ಅವರಿಗೆ ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಸಾಥ್ ನೀಡಿದರು   

ಚನ್ನಪಟ್ಟಣ (ರಾಮನಗರ): ಉಪ ಚುನಾವಣೆ ಅಭ್ಯರ್ಥಿಯಾಗಿ ಕಡೆ ಗಳಿಗೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗುರುವಾರ ನಾಮಪತ್ರ ಸಲ್ಲಿಸಿದ ಸಿ.ಪಿ. ಯೋಗೇಶ್ವರ್, ಇದೇ ವೇಳೆ ತಮ್ಮ ‘ಕೈ’ ಶಕ್ತಿ ಪ್ರದರ್ಶಿಸಿದರು.

ಪಟ್ಟಣದ ಮಂಗಳವಾರಪೇಟೆಯಲ್ಲಿರುವ ಕಾಂಗ್ರೆಸ್‌ ಕಚೇರಿಯಿಂದ ಚುನಾವಣಾಧಿಕಾರಿ ಕಚೇರಿವರೆಗೆ ತೆರದ ವಾಹನದಲ್ಲಿ ಸುಮಾರು 2 ಕಿ.ಮೀ. ನಡೆದ ನಾಮಪತ್ರ ಸಲ್ಲಿಕೆಯ ರೋಡ್‌ ಷೋಗೆ ಸಾವಿರಾರು ಮಂದಿ ಸಾಕ್ಷಿಯಾದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾ ರೆಡ್ಡಿ, ಭೈರತಿ ಸುರೇಶ್, ಡಾ. ಎಂ.ಸಿ. ಸುಧಾಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಶಾಸಕರು, ವಿಧಾನ ಪರಿಷತ್ ಸದಸ್ಯರ ದಂಡು ರೋಡ್‌ ಷೋನಲ್ಲಿ ಭಾಗವಹಿಸಿ ಕ್ಷೇತ್ರದ ಚುನಾವಣಾ ಕಾವು ಹೆಚ್ಚಿಸಿತು.

ADVERTISEMENT

ಬೆಂಗಳೂರು–ಮೈಸೂರು ರಸ್ತೆಯಲ್ಲಿ ಸಾಗಿದ ರೋಡ್‌ ಷೋ ಮಾರ್ಗದುದ್ದಕ್ಕೂ ಕಾಂಗ್ರೆಸ್ ಬಾವುಟಗಳು ರಾರಾಜಿಸಿದವು. ರಸ್ತೆಯ ಎರಡೂ ಬದಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಡೊಳ್ಳು ಮತ್ತು ತಮಟೆ ಬಡಿತ ಕಾರ್ಯಕರ್ತರ ನಡಿಗೆಗೆ ಉತ್ಸಾಹ ತುಂಬಿತು. ಘೋಷಣೆಗಳು ಮುಗಿಲು ಮುಟ್ಟಿದವು.

ಗಾಂಧಿ ಭವನ ವೃತ್ತದಲ್ಲಿ ನಾಯಕರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಎರಡು ತಾಸಿನ ರೋಡ್‌ ಷೋ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚುನಾವಣಾಧಿಕಾರಿ ಕಚೇರಿ ತಲುಪಿತು. ನಾಯಕರೊಂದಿಗೆ ಕಚೇರಿಯೊಳಕ್ಕೆ ಹೋದ ಯೋಗೇಶ್ವರ್, ತಮ್ಮ ನಾಮಪತ್ರ ಸಲ್ಲಿಸಿದರು.

ಮುಖ್ಯಮಂತ್ರಿ ಮಾತನಾಡುವಾಗ ಬಂದ ಆಂಬುಲೆನ್ಸ್‌ಗೆ ಕಾರ್ಯಕರ್ತರು ದಾರಿ ಮಾಡಿಕೊಟ್ಟು ಸಮಯಪ್ರಜ್ಞೆ ಮೆರೆದರು. ಭಾಷಣದ ವೇಳೆ ಮೈಕ್ ಆಗಾಗ ಕೈ ಕೊಟ್ಟಿದ್ದರಿಂದ ನಾಯಕರು ಕಿರಿಕಿರಿ ಅನುಭವಿಸಿದರು. ‘ಸರಿಯಾಗಿ ಕೇಳಿಸುತ್ತಿಲ್ಲ’ ಎಂದು ಕಾರ್ಯಕರ್ತರು ಕೂಗಿ ಬೇಸರ ವ್ಯಕ್ತಪಡಿಸಿದರು.

ಯಾರು ಏನಂದರು?

ಕೆರೆ ತುಂಬಿಸಿದ ಜನಪ್ರಿಯ ರಾಜಕಾರಣಿ

‘ಮೂಲ ಕಾಂಗ್ರೆಸ್ಸಿಗರಾದ ಯೋಗೇಶ್ವರ್ ಅಭಿವೃದ್ಧಿ ಪರವಾಗಿರುವುದರಿಂದಲೇ ಕ್ಷೇತ್ರದಲ್ಲಿ ಐದು ಸಲ ಶಾಸಕರಾಗಿದ್ದಾರೆ. ಕೆರೆಗಳನ್ನು ತುಂಬಿಸಿ ರೈತರ ಬದುಕು ಬೆಳಗಿದ ಜನಪ್ರಿಯ ರಾಜಕಾರಣಿ. ಅವರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ಅಭಿವೃದ್ಧಿಗೆ ಮರು ಚಾಲನೆ ನೀಡಬೇಕು. ಇಲ್ಲಿ ಎರಡು ಸಲ ಗೆದ್ದ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿಯನ್ನು ಒಮ್ಮೆ ನಾವೇ ಮುಖ್ಯಮಂತ್ರಿ ಮಾಡಿದೆವು. ಕ್ಷೇತ್ರಕ್ಕೆ ಏನೂ ಕೆಲಸ ಮಾಡದ ಅವರು ಈಗ ಮಂಡ್ಯ ಹಿಡಿದುಕೊಂಡಿದ್ದಾರೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕೈ ಗೆಲ್ಲಿಸಿ ದೇಶಕ್ಕೆ ಸಂದೇಶ ಕೊಡಿ

‘ಶುಭ ಗಳಿಗೆಯಲ್ಲಿ ಕಾಂಗ್ರೆಸ್‌ಗೆ ಬಂದಿರುವ ಯೋಗೇಶ್ವರ್ ಕೈ ಬಲಪಡಿಸಿ ದೇಶಕ್ಕೆ ಸ್ಪಷ್ಟ ಸಂದೇಶ ಕೊಡಬೇಕು. ಕಳೆದ ಮೂರು ತಿಂಗಳಲ್ಲಿ ಕ್ಷೇತ್ರದಲ್ಲಿ ನಾವು ₹500 ಕೋಟಿ ಮೊತ್ತದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದೇವೆ. ಇಲ್ಲಿ ಎರಡು ಸಲ ಪ್ರತಿನಿಧಿಸಿರುವ ಕುಮಾರಸ್ವಾಮಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನೆಂದು ನೀವು ಪ್ರಶ್ನಿಸಬೇಕು. ಜಾತ್ಯತೀತ ಹೆಸರಿನ ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಅನುಕೂಲ ರಾಜಕಾರಣಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿತು. ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ನಿಖಿಲ್ ಸ್ಪರ್ಧೆ ನಿರೀಕ್ಷಿತ

‘ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ನಡವಳಿಕೆಯಿಂದಲೇ ನನಗೆ ಉಪ ಚುನಾವಣೆ ಟಿಕೆಟ್ ಸಿಗುವುದಿಲ್ಲವೆಂದು ಗೊತ್ತಾಯಿತು. ಅಂದುಕೊಂಡಂತೆ ತಮ್ಮ ಮಗ ನಿಖಿಲ್‌ ಕುಮಾರಸ್ವಾಮಿಯನ್ನೇ ಅಭ್ಯರ್ಥಿ ಮಾಡಿರುವ ಅವರು ಕಣ್ಣೀರು ಹಾಕಿ ಭಾವನಾತ್ಮಕವಾಗಿ ಚುನಾವಣೆ ಮಾಡಲು ಮುಂದಾಗಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿರುವ ನಾನು ಕಳೆದೆರಡು ಚುನಾವಣೆಗಳಲ್ಲಿ ತಾಂತ್ರಿಕ ಕಾರಣಗಳಿಂದ ಸೋತಿದ್ದೆ. ಈ ಸಲ ಗೆದ್ದೇ ಗೆಲ್ಲುವೆ’ ಎಂದು ಸಿ.ಪಿ. ಯೋಗೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ರೋಡ್‌ ಷೋನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಾಸಕ ಶ್ರೀನಿವಾಸ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು
ರೋಡ್‌ ಷೋನಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.