ಚನ್ನಪಟ್ಟಣ (ರಾಮನಗರ): ‘ಎಚ್.ಡಿ.ಕುಮಾರಸ್ವಾಮಿ ರಾಮನಗರದಲ್ಲಿ ಶಾಸಕರಾಗಿ, ಮುಖ್ಯಮಂತ್ರಿಯೂ ಆಗಿದ್ದರು. ನಂತರ, ಅವರ ಪತ್ನಿ ಅನಿತಾ ಅವರೂ ಶಾಸಕಿಯಾಗಿದ್ದರು. ಆದರೂ, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಯಾಕೆ ಸೋತರು? ಅಪ್ಪ ಸರಿಯಾಗಿ ಕೆಲಸ ಮಾಡಿದ್ದರೆ ಜನ ಸೋಲಿಸುತ್ತಿದ್ರಾ?’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಶುಕ್ರವಾರ ತಾಲ್ಲೂಕಿನ ಚಕ್ಕೆರೆ, ಹೊನ್ನನಾಯಕನಹಳ್ಳಿ ಸೇರಿ ವಿವಿಧೆಡೆ ನಡೆದ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ‘ಅಧಿಕಾರವಿದ್ದಾಗ ಜನಸೇವೆ ಮಾಡದ ಕುಮಾರಸ್ವಾಮಿ ಐದು ವರ್ಷಕ್ಕೊಮ್ಮೆ ಬಂದು ಮತ ನೀಡಿ ಎಂದರೆ ಹೇಗೆ? ಮತದಾರರೇನು ಕೂಲಿ ಕಾರ್ಮಿಕರೇ? ಮತದಾನ ಹಕ್ಕು ಸ್ವಾಭಿಮಾನದ ಪ್ರತೀಕ. ಅದನ್ನು ಯಾರೂ ಮಾರಿಕೊಳ್ಳುವುದಿಲ್ಲ’ ಎಂದರು.
‘ಇಡೀ ಸರ್ಕಾರ ಯೋಗೇಶ್ವರ್ ಬೆನ್ನಿಗಿದೆ. ಜೆಡಿಎಸ್ ನವರು ಅತ್ತರೆ ಅಳಲಿ, ಕುಣಿದರೆ ಕುಣಿಯಲಿ, ಏನಾದರೂ ಮಾಡಿಕೊಳ್ಳಲಿ. ನಿಮ್ಮ ಕಷ್ಟ ಸುಖಕ್ಕೆ ಆಗುವವರು ನಾವು. ನಿಮ್ಮನ್ನು ಹಾಗೂ ಈ ಜಿಲ್ಲೆ ಬಿಟ್ಟು ಹೋಗುವುದಿಲ್ಲ. ನಾನು ದೊಡ್ಡಾಲಹಳ್ಳಿಯಲ್ಲಿ, ಯೋಗೇಶ್ವರ್ ಚಕ್ಕರೆಯಲ್ಲಿ ಮಣ್ಣಾಗುತ್ತೇವೆಯೇ ಹೊರತು, ಬೇರೆಲ್ಲೋ ಅಲ್ಲ. ನಮ್ಮೂರ ಮಗನನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.
ಸಭೆಯಲ್ಲಿ ಬಿಜೆಪಿ ಶಾಸಕ: ಚಕ್ಕರೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ವೇದಿಕೆ ಮುಂಭಾಗದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಕುಳಿತಿದ್ದ ಅವರು ಸಭೆ ಮುಗಿಯವವರೆಗೆ ಇದ್ದರು.
ಎಚ್‌ಡಿಕೆ ಭಾವುಕ: ತಮ್ಮ ಪುತ್ರ ನಿಖಿಲ್ ಪರವಾಗಿ ಸೊಸೆ ರೇವತಿ ಅವರ ಅಜ್ಜಿ ಊರಾದ ಸಾಮಂದಿಪುರದಲ್ಲಿ ಪ್ರಚಾರ ನಡೆಸಿದ ಕುಮಾರಸ್ವಾಮಿ, ‘ನಮಗೂ ಈ ಗ್ರಾಮಕ್ಕೂ ಬಾಂಧವ್ಯ ಇದೆ’ ಎಂದು ಭಾವುಕರಾದರು.
ಮೊಮ್ಮಗನ ಪರ ದೇವೇಗೌಡರು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಸೇರಿದಂತೆ ಮೈತ್ರಿ ನಾಯಕರು ಸಾಥ್ ನೀಡಿದರು.
ಕಳೆದೆರಡು ಚುನಾವಣೆಯಲ್ಲಿ ಕುತಂತ್ರದಿಂದ ಸೋಲಿಸಿದರು. ಈಗಲೂ ಗಿಫ್ಟ್ ಕೂಪನ್ ಹಂಚಿಕೆ ಸೇರಿದಂತೆ ಹಲವು ರೀತಿಯ ಕುತಂತ್ರ ಮಾಡುತ್ತಿದ್ದಾರೆ. ಯಾವ ಆಮಿಷಕ್ಕೂ ಒಳಗಾಗದೆ ನಿಮ್ಮ ಸೇವೆಗೆ ನನಗೊಂದು ಅವಕಾಶ ಕೊಡಿನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ
ರಾಜಕೀಯದಲ್ಲಿ ಸಾಕಷ್ಟು ಏಳುಬೀಳು ಸೋಲು-ಗೆಲುವು ಕಂಡಿದ್ದೇನೆ. ಸೋತಾಗ ಅಂಜದೆ ಗೆದ್ದಾಗ ಹಿಗ್ಗದೆ ಕೆಲಸ ಮಾಡಿದ್ದೇನೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.