ಚನ್ನಪಟ್ಟಣ (ರಾಮನಗರ): ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪ್ರಚಾರದ ಅಬ್ಬರ ಗುರುವಾರ ಜೋರಾಗಿತ್ತು. ನಿಖಿಲ್ ಪರ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಬಿ.ಸಿ.ಪಾಟೀಲ ಸೇರಿದಂತೆ ಪಕ್ಷದ ನಾಯಕರು ಪ್ರಚಾರ ನಡೆಸಿದರು.
ಯೋಗೇಶ್ವರ್ ಪರ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಶಾಸಕರು ಮತ್ತು ಮುಖಂಡರು ಸಾಥ್ ನೀಡಿದರು. ರಾಮನಗರದಲ್ಲಿ ಬಿಜೆಪಿ–ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ಗೆ ಬರ ಮಾಡಿಕೊಂಡರು.
ಪ್ರಚಾರದ ವೇಳೆ ಎಚ್‌ಡಿಕೆ ಎತ್ತಿನ ಬಂಡಿ ಏರಿದರೆ, ನಿಖಿಲ್ ಕಾರ್ಯಕರ ಬೈಕ್‌ನಲ್ಲಿ ಸುತ್ತಾಡಿದರು. ತೆರೆದ ವಾಹನದಲ್ಲಿ ಯೋಗೇಶ್ವರ್ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ ಮತ ಯಾಚಿಸಿದರು. ಅಭ್ಯರ್ಥಿಗಳು ಹಾಗೂ ನಾಯಕರಿಗೆ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಘೋಷಣೆ ಕೂಗಿ ಅಭಿಮಾನ ಮೆರೆದರು. ಸಂಜೆ ಶುರುವಾದ ಮಳೆ ಪ್ರಚಾರಕ್ಕೆ ಅಡ್ಡಿಯಾಯಿತು.
ನಿಖಿಲ್ ಕಣ್ಣೀರು: ‘ಸತತ ಎರಡು ಚುನಾವಣೆಗಳಲ್ಲಿ ಸೋತಿರುವ ನಾನು ಏನು ತಪ್ಪು ಮಾಡಿದ್ದೇನೆಂದು ಗೊತ್ತಾಗುತ್ತಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗನಾಗಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟನೋ ಗೊತ್ತಿಲ್ಲ’ ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದರು.
ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪ್ರಚಾರ ಸಭೆಯಲ್ಲಿ ಗುರುವಾರ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಾ ಭಾವುಕರಾದರು. ಆಗ ಕಾರ್ಯಕರ್ತರು, ‘ಕಣ್ಣೀರು ಹಾಕಬೇಡಿ. ನಿಮ್ಮನ್ನು ಗೆಲ್ಲಿಸುತ್ತೇವೆ. ಯಾವುದೇ ಕಾರಣಕ್ಕೂ ನೀವು ಸೋಲುವುದಿಲ್ಲ. ನಿಮ್ಮ ಗೆಲುವು ಖಚಿತ’ ಎಂದು ಕೂಗಿ ಭರವಸೆ ನೀಡಿದರು.
ಕುಮಾರಸ್ವಾಮಿ ಅವರಿಗೆ ಪಕ್ಷವೆಂದರೆ ಅವರ ಕುಟುಂಬದವರು ಮಾತ್ರ. ಅವರ ಮನೆಯವರು ಮಾತ್ರ ಅಭಿವೃದ್ಧಿ ಆಗಬೇಕು. ಬೇರಾರು ಬೆಳೆಯಬಾರದು. ಅದಕ್ಕೆ ಚನ್ನಪಟ್ಟಣದಲ್ಲೂ ತಮ್ಮ ಪುತ್ರನನ್ನೇ ನಿಲ್ಲಿಸಿದ್ದಾರೆಎನ್.ಚಲುವರಾಯಸ್ವಾಮಿ ಕೃಷಿ ಸಚಿವ
ಆಧುನಿಕ ಅಭಿಮನ್ಯು ನಿಖಿಲ್ ಒಂಟಿಯಲ್ಲ. ಅವರೊಂದಿಗೆ ಎಲ್ಲರೂ ಜತೆಗಿದ್ದಾರೆ. ಭೀಷ್ಮನಾಗಿ ಎಚ್.ಡಿ. ದೇವೇಗೌಡರು ದ್ರೋಣರಾಗಿ ಬಿ.ಎಸ್.ಯಡಿಯೂರಪ್ಪ ಅರ್ಜುನನಾಗಿ ಎಚ್.ಡಿ.ಕುಮಾರಸ್ವಾಮಿ ಇದ್ದಾರೆಬಿ.ಸಿ.ಪಾಟೀಲ ಮಾಜಿ ಸಚಿವ
‘ನಿಖಿಲ್ ಅಭ್ಯರ್ಥಿಯಾಗಿದ್ದು ದೇವರ ನಿರ್ಧಾರ’
‘ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿದ್ದು ದೇವರ ನಿರ್ಧಾರ. ಈಗಿನ ಕಾಂಗ್ರೆಸ್ ಅಭ್ಯರ್ಥಿ (ಸಿ.ಪಿ.ಯೋಗೇಶ್ವರ್) ಎನ್‌ಡಿಎ ಅಭ್ಯರ್ಥಿಯಾಗಬೇಕಿತ್ತು. ಯಾವ ಚಿಹ್ನೆಯಿಂದಾದರೂ ಟಿಕೆಟ್ ಕೊಡಿ ಎಂದು ಕೇಳಿದರು. ಅವರ ಮಾತುಗಳಿಗೆ ನಾವೂ ಮರುಳಾದೆವು. ಜೆಡಿಎಸ್ ಚಿಹ್ನೆ ನಿರಾಕರಿಸಿ ಕಮಲ ಚಿಹ್ನೆಯೇ ಬೇಕೆಂದು ವರಸೆ ತೆಗೆದರು. ಬಿಜೆಪಿ ನಾಯಕರಾದ ಜೆ.ಪಿ.ನಡ್ದಾ ಪ್ರಲ್ಹಾದ ಜೋಶಿ ಸಹ ಅದೇ ವ್ಯಕ್ತಿಗೆ ಟಿಕೆಟ್ ಕೊಡಿ ಎಂದರು. ಅವರ ಮಾತಿಗೆ ನಾವೂ ಒಪ್ಪಿ ಟಿಕೆಟ್ ಕೊಡಲು ತೀರ್ಮಾನಿಸಿದೆವು. ಆದರೆ ಆ ವ್ಯಕ್ತಿ ಎಲ್ಲರಿಗೂ ಟೋಪಿ ಹಾಕಿ ಹೋದರು’ ಎಂದು ಕುಮಾರಸ್ವಾಮಿ ಕಿಡಿಕಾರಿದರು. ‘ವಯಸ್ಸಾದ ರಾಜನ ಮಗನಿಗೆ ಪಟ್ಟಾಭಿಷೇಕ’ ‘ರಾಜನಿಗೆ ವಯಸ್ಸಾದ ಮೇಲೆ ಮಗನಿಗೆ ಪಟ್ಟಾಭಿಷೇಕ ಮಾಡುತ್ತಾರೆ. ಅದೇ ರೀತಿ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಕುಮಾರಸ್ವಾಮಿ ಅವರ ಕುಟುಂಬ ಯಾಕೆ ಚನ್ನಪಟ್ಟಣದ ಮೇಲೆ ಮುಗಿಬಿದ್ದಿದೆಯೊ ಗೊತ್ತಿಲ್ಲ. ಏನೂ ಸಂಬಂಧವೇ ಇಲ್ಲದೆ ಎಚ್‌ಡಿಕೆ ಪತ್ನಿ ಅನಿತಾ ಅವರು ಸ್ಪರ್ಧಿಸಿದ್ದರು. ನಂತರ ಸ್ವತಃ ಎಚ್‌ಡಿಕೆ ನನ್ನ ವಿರುದ್ಧ ಎರಡು ಸಲ ನಿಂತು ಗೆದ್ದರು. ಆಗ ಅವರು ತಾಲ್ಲೂಕಿನಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ? ನಾನು ತಂದಿದ್ದ ನೀರಾವರಿ ಯೋಜನೆಗಳನ್ನು ಸಹ ಮುಂದುವರಿಸಲಿಲ್ಲ. ಹೀಗಿರುವಾಗ ಯಾವ ನೈತಿಕತೆ ಮೇಲೆ ಪುತ್ರನಿಗೆ ಮತ ಕೇಳುತ್ತಿದ್ದಾರೆ?. ಅಭಿವೃದ್ಧಿಯಲ್ಲಿ ಪಾಲುದಾರನಾಗಬೇಕೆಂದು ನಾನು ಕಾಂಗ್ರೆಸ್ ಸೇರಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಒಬ್ಬ ದೈತ್ಯ ಹಾಗೂ ಪ್ರಾಮಾಣಿಕ ರಾಜಕಾರಣಿ ಸುರೇಶ್ ಅವರನ್ನು ಸೋಲಿಸಿರುವ ನೋವಿದೆ’ ಎಂದು ಕಾಂಗ್ರೆಸ್ ಸಿ.ಪಿ.ಯೋಗೇಶ್ವರ್ ತಮ್ಮ ಪ್ರಚಾರ ಭಾಷಣದಲ್ಲಿ ತಿಳಿಸಿದರು.
‘ಸುಳ್ಳಿಗೆ ಮತ್ತೊಂದು ಹೆಸರೇ ಎಚ್‌ಡಿಕೆ’
‘ಸುಳ್ಳಿಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ. ಎರಡೂ ಕಡೆ ಅವರು ರಾಜಕಾರಣ ಮಾಡಿದ್ದಾಯಿತು. ಅದನ್ನು ಮನಗಂಡ ಜನ ಬೇಸತ್ತು ಕಾಂಗ್ರೆಸ್ ಪರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಚ್‌ಡಿಕೆಗೆ ತಮ್ಮ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟ. ಅವರು ಕೇಳುವ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವ ಮೊದಲು ಬಿಜೆಪಿಯವರೇ ಮುಂದಿನ ದಿನಗಳಲ್ಲಿ ಅವರಿಗೆ ಉತ್ತರಿಸುತ್ತಾರೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಭವಿಷ್ಯವಿಲ್ಲ. ಎರಡೂ ಪಕ್ಷಗಳ ಕಾರ್ಯಕರ್ತರು ಈ ಬಗ್ಗೆ ಚಿಂತನೆ ನಡೆಸಿ ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರಬೇಕು’ ಎಂದು ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.