ಚನ್ನಪಟ್ಟಣ (ರಾಮನಗರ): ಉಪ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜೆಡಿಎಸ್‌ನಿಂದ ಕಣಕ್ಕಿಳಿದಿರುವ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ನಿರಂತರ ಪ್ರಚಾರಕ್ಕಿಳಿದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬುಧವಾರ ಪಟ್ಟಣದ ಅಲ್ಪಸಂಖ್ಯಾತರ ಮತಗಳತ್ತ ಚಿತ್ತ ಹರಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು ಹಳ್ಳಿಗಳತ್ತ ದೃಷ್ಟಿ ನೆಟ್ಟಿ ಮತ ಯಾಚಿಸುತ್ತಿದ್ದಾರೆ.
ಪಟ್ಟಣದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿರುವ ಸಯ್ಯದ್‌ವಾಡಿ ದರ್ಗಾ, ಟಿಪ್ಪುನಗರ, ಶೇರು ಹೋಟೆಲ್ ವೃತ್ತ ಸೇರಿದಂತೆ ವಿವಿಧೆಡೆ ತೆರೆದ ವಾಹನದಲ್ಲಿ ರೋಡ್ ಷೋ ನಡೆಸಿ ಮತ ಯಾಚಿಸಿದರು. ನಂತರ, ಬಡಾಮಕಾನ್‌ನ ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಅವರ ದರ್ಗಾಕ್ಕೆ ಭೇಟಿ ನೀಡಿ ಚಾದರ್ ಅರ್ಪಿಸಿದರು.
ನನಗೆ ಜಾತಿ–ಧರ್ಮವಿಲ್ಲ: ರೋಡ್ ಶೋನಲ್ಲಿ ಮಾತನಾಡಿದ ಎಚ್‌ಡಿಕೆ, ‘ನನಗೆ ಜಾತಿ–ಧರ್ಮವಿಲ್ಲ. ಎಲ್ಲರನ್ನೂ ಪ್ರೀತಿಸುವ ನಾನು, ಸರ್ವ ಜನಾಂಗದ ಶಾಂತಿ ತೋಟ ಎಂಬ ತತ್ವ ಅಳವಡಿಸಿಕೊಂಡಿದ್ದೇನೆ. ಅಲ್ಪಸಂಖ್ಯಾತರಿಗೆ ದೋಖಾ ಮಾಡುವ ಮಾತೇ ಇಲ್ಲ. ನಾಗಮಂಗಲದಲ್ಲಿ ಗಲಭೆಯಾದಾಗ ಅಂಗಡಿ ಕಳೆದುಕೊಂಡ ಹಿಂದೂ–ಮುಸ್ಲಿಮರಿಗೆ ವೈಯಕ್ತಿಕವಾಗಿ ನಾನೇ ಪರಿಹಾರ ಕೊಟ್ಟಿದ್ದೇನೆ. ಜೈಲು ಸೇರಿದ್ದ 54 ಮಂದಿಯನ್ನು ನಮ್ಮ ವಕೀಲರ ಮೂಲಕ ಬಿಡುಗಡೆಗೊಳಿಸಿದೆ. ಅದರಲ್ಲಿ 27 ಮುಸ್ಲಿಮರು ಸಹ ಇದ್ದರು’ ಎಂದರು.
‘ಹಿಂದೆ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ 900 ಮುಸ್ಲಿಮರು ಇನ್ನೂ ಜೈಲಿನಲ್ಲಿದ್ದಾರೆ. ನಾವು ಮುಸ್ಲಿಮರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಒಬ್ಬರೂ ಬಿಡುಗಡೆಯಾಗಿಲ್ಲ. ಇದೇ ನಮಗೂ ಅವರಿಗೂ ವ್ಯತ್ಯಾಸ’ ಎಂದರು.
ಕೆಂಗಲ್‌ನಲ್ಲಿ ಸಿಪಿವೈ ಪೂಜೆ: ಕೆಂಗಲ್‌ನ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಹೊಂಗನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಮಾಡಿದರು. ಮಾಜಿ ಸಂಸದ ಡಿ.ಕೆ.ಸುರೇಶ್, ನೆಲಮಂಗಲ ಶಾಸಕ ಶ್ರೀನಿವಾಸ್, ಮಾಜಿ ಶಾಸಕ ಎಂ.ಸಿ.ಅಶ್ವಥ್ ಸೇರಿದಂತೆ ಸ್ಥಳೀಯ ಮುಖಂಡರು ಅವರಿಗೆ ಸಾಥ್ ನೀಡಿದರು.
ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲುವ ಚಾಳಿಯ ಕಾಂಗ್ರೆಸ್ ಚನ್ನಪಟ್ಟಣಲ್ಲೂ ಕೂಪನ್ ಷಡ್ಯಂತ್ರ ಮಾಡಲು ಹೊರಟಿದೆ. ಈ ಕುಂತ್ರಕ್ಕೆ ಮತದಾರರು ಮರುಳಾಗಬಾರದುಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ನನಗೆ ಕಣ್ಣೀರು ಹಾಕುತ್ತಾ ಅಳುವುದಕ್ಕೆ ಬರೋದಿಲ್ಲ. ನಾನು ಕಣ್ಣೀರು ಹಾಕಲು ಕ್ಷೇತ್ರದ ಜನರು ಬಿಡುವುದಿಲ್ಲ. ಊರು ಮನೆಯವನಾದ ನನಗೆ ಮತ ಹಾಕಿ ಮತ್ತೆ ಸೇವೆಗೆ ಅವಕಾಶ ಮಾಡಿ ಕೊಡುತ್ತಾರೆಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ
ಸಿ.ಪಿ.ಯೋಗೇಶ್ವರ್ ಅವರು ಪಕ್ಷಾಂತರ ಮಾಡಿರುವುದು ನಮಗೆ ಹಿನ್ನಡೆಯಾಗಿದೆ. ಇದರಿಂದ ತೊಂದರೆ ಇಲ್ಲ. ಪಕ್ಷದ ಕಾರ್ಯಕರ್ತರು ಮುಖಂಡರು ನಮ್ಮ ಜತೆಗಿದ್ದಾರೆಅಶ್ವತ್ಥನಾರಾಯಣ ಬಿಜೆಪಿ ಶಾಸಕ
ಕಾಂಗ್ರೆಸ್ ಟಾರ್ಗೆಟ್ ಮುಸ್ಲಿಮರು’
‘ಶಿಗ್ಗಾವಿ ಕಾಂಗ್ರೆಸ್ ಮುಖಂಡ ಸೈಯದ್ ಅಜೀಂಪೀರ್ ಖಾದ್ರಿ ಅವರನ್ನು ಅಪಹರಿಸಿ ಒಂದು ವಾರದಿಂದ ಕೂಡಿ ಹಾಕಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ನಾಮಪತ್ರ ವಾಪಸ್ ತೆಗೆಸಿದ್ದಾರೆ. ಒಬ್ಬ ಸಚಿವ ಖಾದ್ರಿ ಅವರನ್ನು ಗೃಹ ಬಂಧನದಲ್ಲಿರಿಸಿ ಇದನ್ನೆಲ್ಲ ಮಾಡಿಸಿದ್ದಾರೆ. ಅವರಲ್ಲಿ ಗೆಲುವಿನ ವಿಶ್ವಾಸದ ಕೊರತೆ ಎಷ್ಟಿದೆ ಎಂಬುದು ಇದರಲ್ಲೇ ಗೊತ್ತಾಗುತ್ತಿದೆ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಎಲ್ಲಿ ಕಳೆದುಕೊಂಡಿದ್ದೇವೊ ಅಲ್ಲೇ ಹುಡುಕಬೇಕು: ಸಿಪಿವೈ
‘ನಾನು ಎರಡು ಸಲ ಸೋತಿದ್ದೇನೆ ಎಂದು ನಿಖಿಲ್ ಭಾವನಾತ್ಮಕವಾಗಿ ಪ್ರಚಾರ ಮಾಡುತ್ತಿದ್ದಾರೆ. ನಾವು ಎಲ್ಲಿ ಕಳೆದುಕೊಂಡಿದ್ದೇವೊ ಅಲ್ಲೇ ಹುಡುಕಬೇಕು. ನಿಖಿಲ್ ಮಂಡ್ಯ ಮತ್ತು ರಾಮನಗರದಲ್ಲಿ ಕಳೆದುಕೊಂಡಿದ್ದರೆ ಮತ್ತೆ ಅಲ್ಲೇ ಹೋಗಿ ಹುಡುಕಬೇಕು. ಅಲ್ಲೇ ಇದ್ದು ಅಭಿವೃದ್ಧಿ ಕೆಲಸ ಮಾಡಿ ಬೆಂಬಲ ಕೇಳಬೇಕು. ಎರಡು ಬಾರಿ ಸೋತಿರುವ ನಾನು ಸಹ ಈ ಬಾರಿ ಗೆಲ್ಲಬೇಕಲ್ಲವೇ’ ಎಂದು ಸಿ.ಪಿ.ಯೋಗೇಶ್ವರ್ ಹೇಳಿದರು.ತಾಲ್ಲೂಕಿನ ಚಂದ್ರಗಿರಿದೊಡ್ಡಿ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು ‘ಕುಮಾರಸ್ವಾಮಿ ಅವರು ಗಿಮಿಕ್ ಮಾಡಿ ತಮ್ಮ ಮಗನನ್ನು ತಂದು ನಿಲ್ಲಿಸಿ ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಸ್ವತಃ ಅವರಿಗೆ ತಾಲ್ಲೂಕಿನ ಪರಿಚಯವಿಲ್ಲ. ಹೀಗಿರುವಾಗ ಅವರ ಮಗನಿಗೇನು ಗೊತ್ತು? ಇದು ನನ್ನ ತಾಲ್ಲೂಕು. ಇಲ್ಲೇ ಹುಟ್ಟಿರುವ ನನಗೆ ಕ್ಷೇತ್ರದ ಸಮಸ್ಯೆ ಹಾಗೂ ಜನರ ಭಾವನೆ ಏನೆಂದು ಗೊತ್ತಿದೆ. ಮತದಾರರು ಈ ಸಲ ಸ್ಥಳೀಯ ಸ್ವಾಭಿಮಾನ ಬಿಡದೆ ಗೆಲ್ಲಿಸುವ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.