ರಾಮನಗರ: ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶಕ್ಕೆ ಇನ್ನು ನಾಲ್ಕು ದಿನವಷ್ಟೇ (ನ. 23ಕ್ಕೆ ಎಣಿಕೆ) ಬಾಕಿ ಇದ್ದು ಬೆಟ್ಟಿಂಗ್ ಭರಾಟೆ ಜೋರಾಗಿದೆ.
ಸ್ಥಳೀಯವಾಗಿ ಅಷ್ಟೇ ಅಲ್ಲದೆ ಹೊರಗಡೆಯೂ ಹೈವೋಲ್ಟೇಜ್ ಕಣವಾಗಿರುವ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಸದ್ಯದ ಬೆಟ್ಟಿಂಗ್ ಟ್ರೆಂಡ್ ಪ್ರಕಾರ ಸ್ಥಳೀಯ ಬುಕ್ಕಿಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಹಾಗೂ ಹೊರಗಿನವರಿಗೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಫೇವರಿಟ್ ಆಗಿದ್ದಾರೆ.
‘ಸಮಬಲದ ಪೈಪೋಟಿಯಲ್ಲಿ ಗೆಲುವಿನ ಅಂದಾಜು ಸವಾಲಾಗಿದೆ’ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೂ ಬೆಟ್ಟಿಂಗ್ ಪ್ರಿಯರು ರಾಜಕೀಯ, ಮಾಧ್ಯಮ ಹಾಗೂ ಸಮೀಕ್ಷೆ ಮೂಲಗಳನ್ನು ಆಧರಿಸಿ ಅಭ್ಯರ್ಥಿಗಳ ‘ಗೆಲುವಿನ ಅದೃಷ್ಟದ ಮೇಲೆ ಕೋಟಿವರೆಗೆ ಹೂಡಿಕೆ ಮಾಡುತ್ತಿದ್ದಾರೆ. ಕೆಲವೆಡೆ ಜಮೀನು, ಕುರಿ, ಕೋಳಿ ಮಟ್ಟಕ್ಕೂ ಬಾಜಿ ಕಟ್ಟಲಾಗುತ್ತಿದೆ.
ಲೆಕ್ಕಾಚಾರ ಬದಲು: ಮತದಾನ ನಡೆದ ಮಾರನೇ ದಿನ ಯೋಗೇಶ್ವರ್, ‘ಪ್ರಚಾರದ ವೇಳೆ ಸಚಿವ ಜಮೀರ್ ಅಹಮದ್ ಖಾನ್, ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡರ ಕುರಿತು ಆಡಿದ ಮಾತುಗಳಿಂದ ಲಾಭದಷ್ಟೇ ನಷ್ಟವೂ ಆಗಿದೆ. ನಿಖಿಲ್ ಮತ್ತು ನನ್ನ ಮಧ್ಯೆ ಸಮಬಲದ ಪೈಪೋಟಿ
ಇದ್ದು, ಯಾರೇ ಗೆದ್ದರೂ ಕೂದಲೆಳೆಯಷ್ಟೇ ಅಂತರವಿರಲಿದೆ’ ಎಂದಿದ್ದರು.
‘ಯೋಗೇಶ್ವರ್ ಈ ಮಾತು ಬೆಟ್ಟಿಂಗ್ ಲೆಕ್ಕಾಚಾರ ಬದಲಿಸಿರುವುದು ನಿಜ. ‘ಕೈ’ ಅಭ್ಯರ್ಥಿ ಫಲಿತಾಂಶಕ್ಕೆ ಮುಂಚೆಯೇ ಸೋಲು ಒಕೊಂಡಿದ್ದಾರೆ ಎಂಬ ಸಂದೇಶವನ್ನು ಅವರ ಮಾತುಗಳು ಹೊರಗಿನವರಿಗೆ ನೀಡಿವೆ. ಹಾಗಾಗಿ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಸೇರಿದಂತೆ ಹೊರಗಿನ ಹೆಚ್ಚಿನವರು ನಿಖಿಲ್ ಪರ ಬೆಟ್ಟಿಂಗ್ ಕಟ್ಟುತ್ತಿದ್ದಾರೆ’
ಎಂದು ಸ್ಥಳೀಯ ರಾಜಕೀಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಅತೀವ ವಿಶ್ವಾಸ: ‘ಉಪ ಚುನಾವಣೆ ಕುರಿತು ಯೋಗೇಶ್ವರ್ ಮಾತು ಗಳಲ್ಲಿರುವ ವಾಸ್ತವ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಹಿಂದಿನ ಚುನಾವಣೆಗಳಲ್ಲೂ ಅವರು ಸೋಲು ಒಪ್ಪಿಕೊಂಡಂತಹ ಮಾತುಗಳನ್ನಾಡಿದ್ದರು. ಅವರ ಬೆಂಬಲಿಗರು ಯೋಗೇಶ್ವರ್ ಗೆಲ್ಲುತ್ತಾರೆಂಬ ಅತೀವ ವಿಶ್ವಾಸದಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ’ ಎನ್ನುತ್ತಾರೆ ಬೆಟ್ಟಿಂಗ್ ಪ್ರಿಯರೊಬ್ಬರು.
ಜಾತಿವಾರು ಲೆಕ್ಕಾಚಾರ: ಕ್ಷೇತ್ರದಲ್ಲಿ ಜಾತಿವಾರು ಮತ ಹಂಚಿಕೆಯ ಚರ್ಚೆ ಬಿರುಸುಗೊಂಡಿದೆ. ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಜಾತಿವಾರು ಮತ ಹಂಚಿಕೆಯ ಪಟ್ಟಿ ಹರಿದಾಡುತ್ತಿದೆ. ಯಾವ ಬೂತ್, ಮತಗಟ್ಟೆಯಲ್ಲಿ ಯಾರಿಗೆ ಎಷ್ಟು ಮತ ಬಂದಿವೆ ಎಂಬ ಪಟ್ಟಿಗಳು ಹರಿದಾಡುತ್ತಿವೆ. ಇದನ್ನು ಆಧರಿಸಿಯೇ ಅಭ್ಯರ್ಥಿಗಳ ಗೆಲುವನ್ನು ತೀರ್ಮಾನಿಸಿ ಹಲವರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ರಾಜಕೀಯ ಕಾರ್ಯಕರ್ತರು.
ಬೆಟ್ಟಿಂಗ್‌ನಲ್ಲಿ ತೊಡಗಿರುವ ಕೆಲವರು ಬೆಟ್ ಕಟ್ಟುವ ಮೊದಲು ಮಾಧ್ಯಮ ಪ್ರತಿನಿಧಿಗಳು, ರಾಜಕೀಯ ವಿಶ್ಲೇಷಕರು, ರಾಜಕೀಯ ಕಾರ್ಯಕರ್ತರಿಗೆ ಫೋನಾಯಿಸಿ ಯಾರು ಗೆಲ್ಲಬಹುದು ಎಂಬ ಟಿಪ್ಸ್
ಪಡೆಯುತ್ತಿದ್ದಾರೆ.
ನಿಖಿಲ್ ಪರ ಹೆಚ್ಚಿದ ಟ್ರೆಂಡ್
‘ಮತದಾನದ ದಿನ ‘ಕೈ’ ಅಭ್ಯರ್ಥಿ ಮುಖದಲ್ಲಿ ಅಷ್ಟೊಂದು ಕಳೆ ಇರಲಿಲ್ಲ. ನಂತರದಲ್ಲೂ ಯೋಗೇಶ್ವರ್ ಅವರಲ್ಲಿ ಗೆಲುವಿನ ವಿಶ್ವಾಸ ಎದ್ದು ಕಾಣುತ್ತಿಲ್ಲ. ಆದರೆ, ನಿಖಿಲ್ ಮೊದಲ ದಿನದಿಂದ ಇಲ್ಲಿಯವರೆಗೆ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿದ್ದಾರೆ. ಮಾತುಗಳಲ್ಲೂ ಅದೇ ಭರವಸೆ ಇದೆ. ಯೂಟ್ಯೂಬ್, ಫೇಸ್‌ಬುಕ್‌ನಲ್ಲಿ ಕೆಲವರು ಫಲಿತಾಂಶದ ಕುರಿತು ಹರಿಬಿಟ್ಟಿರುವ ಬಸವ ಭವಿಷ್ಯ, ಗಿಣಿ ಭವಿಷ್ಯದಲ್ಲೂ ನಿಖಿಲ್ ಹೆಸರೇ ಮೊದಲ ಸ್ಥಾನದಲ್ಲಿದೆ. ಕೆಲ ಮತಗಟ್ಟೆ ಸಮೀಕ್ಷೆಯಲ್ಲೂ ನಿಖಿಲ್ ಮುಂದಿದ್ದಾರೆ. ಶಾಸ್ತ್ರ–ಸಮೀಕ್ಷೆ ನಂಬುವವರು ನಿಖಿಲ್ ಪರವಾಗಿಯೇ ಬೆಟ್ಟಿಂಗ್ ಹಾಕುತ್ತಿದ್ದಾರೆ. ಸದ್ಯ ನಿಖಿಲ್ ಅವರೇ ಟ್ರೆಂಡಿಂಗ್ ನಲ್ಲಿದ್ದಾರೆ’ ಎನ್ನುತ್ತಾರೆ ಬುಕ್ಕಿಯೊಬ್ಬರು.
ಮೂವರಿಗೂ ತಲಾ ಒಂದೊಂದು!
ಉಪ ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಪ್ರಮುಖ ಮೂರು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ತಲಾ ಒಂದೊಂದು ಕ್ಷೇತ್ರ ದೊರೆಯಲಿವೆ ಎಂಬ ವಿಶ್ಲೇಷಣೆ ಜೋರಾಗಿದೆ. ಈ ವಿಶ್ಲೇಷಣೆ ಆಧಾರದ ಮೇಲೆಯೂ ಕೆಲವರು ಬೆಟ್ಟಿಂಗ್ ನಡೆಸುತ್ತಿದ್ದಾರೆ.
ಈ ಮೊದಲು ಯಾವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೋ ಈಗಲೂ ಅದೇ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಆಧಾರದ ಮೇಲೆ ಬೆಟ್ಟಿಂಗ್
ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.