ಚನ್ನಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಭರ್ಜರಿ ಜಯ ಸಾಧಿಸುತ್ತಿದ್ದಂತೆ ತಾಲ್ಲೂಕಿನೆಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಉಪ ಚುನಾವಣೆಯಲ್ಲಿ ಸೈನಿಕನ ಗೆಲುವಿಗಾಗಿ ಸೈನಿಕರಂತೆ ದುಡಿದಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಯೋಗೇಶ್ವರ್ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.
ಶನಿವಾರ ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎದುರು ತಮ್ಮ ನೆಚ್ಚಿನ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಗೆಲುವಿನ ಸುದ್ದಿ ಕೇಳಿಸಿಕೊಳ್ಳಲು ಕಾತರರಾಗಿ ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತರು ಯೋಗೇಶ್ವರ್ ಸಾವಿರ ಮತಗಳ ಮುನ್ನಡೆ ಪಡೆಯುತ್ತಿದ್ದಂತೆ ವಿಜಯೋತ್ಸವ ಮೊಳಗಿಸಿದರು. ಕಾಂಗ್ರೆಸ್ ಬಾವುಟ, ಯೋಗೇಶ್ವರ್, ಡಿ.ಕೆ. ಸಹೋದರರ ಭಾವಚಿತ್ರ ಹಿಡಿದು ತಮಟೆ, ನಗಾರಿ ಬಾರಿಸಿಕೊಂಡು, ಕುಣಿದು ಸಂಭ್ರಮಿಸಿದರು.
ಮತ ಎಣಿಕೆ ಆರಂಭದ 6ನೇ ಸುತ್ತಿನ ಮತ ಎಣಿಕೆವರೆಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. 7ನೇ ಸುತ್ತಿನಲ್ಲಿ ಸಿ.ಪಿ. ಯೋಗೇಶ್ವರ್ ಸುಮಾರು 3,500 ಮತ ಮುನ್ನಡೆ ಪಡೆದುಕೊಳ್ಳುತ್ತಿದ್ದಂತೆ ಆರಂಭವಾದ ಕಾಂಗ್ರೆಸ್ ಕಾರ್ಯಕರ್ತರ ಜೈಕಾರ, ನರ್ತನ ಮತ್ತು ಸಡಗರ ಅಂತಿಮ 20 ಸುತ್ತಿನ ವರೆಗೂ ಮನೆ ಮಾಡಿತು.
ಪ್ರತಿ ಸುತ್ತಿನ ಮತ ಎಣಿಕೆಗಳಲ್ಲೂ ಯೋಗೇಶ್ವರ್ ಮುನ್ನಡೆ ಕಾಯ್ದುಕೊಂಡು ಸಾವಿರ ಸಾವಿರ ಮತಗಳನ್ನು ತಮ್ಮ ಖಾತೆಗೆ ಜಮೆ ಮಾಡಿಕೊಳ್ಳುತ್ತಿರುವ ಸುದ್ದಿ ತಿಳಿದು ಕಾರ್ಯಕರ್ತರು ಮತ್ತಷ್ಟು ಕುಣಿದು ಸಂಭ್ರಮಿಸಿದರು.
ಯೋಗೇಶ್ವರ್ ಅವರು ವಿಜಯಮಾಲೆ ಧರಿಸಲು ಅಂತಿಮಘಟ್ಟ ತಲುಪುತ್ತಿದ್ದಂತೆ ತಾಲ್ಲೂಕಿನ ಹಳ್ಳಿಹಳ್ಳಿಗಳಿಂದ ಆಗಮಿಸಿದ ಮತ್ತಷ್ಟು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಜಾತ್ರೆಯ ವಾತಾವರಣ ಸೃಷ್ಠಿಸಿದರು. ಗ್ರಾಮಗಳಿಂದ ತಮಟೆ ನಗಾರಿ ತಂದು ಬಾರಿಸಿ ನೃತ್ಯ ಮಾಡಿದರು. ಯೋಗೇಶ್ವರ್ ಅವರ ಗೆಲವು ನಿಶ್ಚಿತವಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿ ಹಂಚಿ, ಕೆಲವು ಮುಖಂಡರನ್ನು ಮೇಲಕ್ಕೆ ಎತ್ತಿ ಸಂಭ್ರಮಿಸಿದರು.
ವಿಶೇಷ ಪೂಜೆ, ಹಾಲಿನ ಅಭಿಷೇಕ: ಸಿ.ಪಿ. ಯೋಗೇಶ್ವರ್ ನೂತನ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಯೋಗೇಶ್ವರ್ ಅಭಿಮಾನಿಗಳು ತಾಲ್ಲೂಕಿನ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿಸಿದರು.
ಕೆಲವೆಡೆ ಅಭಿಮಾನಿಗಳು ಯೋಗೇಶ್ವರ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯೋಗೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್, ಮುಸ್ಲಿಂ ವಾರ್ಡ್‌ಗಳಲ್ಲಿ ಸಚಿವ ಜಮೀರ್ ಅಹಮದ್ ಸೇರಿದಂತೆ ಪ್ರಮುಖ ನಾಯಕರ ಕಟೌಟ್ ಹಾಕಿ ಸಂಭ್ರಮಿಸಿದರು. ಗ್ರಾಮೀಣ ಪ್ರದೇಶದಲ್ಲಿ ರಾತ್ರಿಯವರೆಗೂ ಪಟಾಕಿ ಸಿಡಿಸಿ, ಸಿಹಿ ಹಂಚಿ ತಮ್ಮ ನೆಚ್ಚಿನ ನಾಯಕನ ಗೆಲುವನ್ನು ಸ್ವಾಗತಿಸಿದರು.
ಕಾಲ್ಕಿತ್ತ ಜೆಡಿಎಸ್ ಕಾರ್ಯಕರ್ತರು ಮತ ಎಣಿಕೆ ಆರಂಭಗೊಂಡು 6ನೇ ಸುತ್ತಿನವರೆಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡಾಗ ಮತ ಎಣಿಕೆ ಕೇಂದ್ರದ ಎದುರಿನಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದದ್ದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದರು. ಒಂದರಿಂದ ಆರನೇ ಸುತ್ತಿನವರೆಗೂ ನಿಖಿಲ್ ಮುನ್ನಡೆ ಕಾಯ್ದುಕೊಂಡಿದ್ದರು. ಅಲ್ಲಿಯವರೆಗೂ ಸ್ಥಳದಲ್ಲಿ ನೃತ್ಯ ಮಾಡುತ್ತಾ ಸಂಭ್ರಮಾಚರಣೆ ಮಾಡುತ್ತಿದ್ದ ಜೆಡಿಎಸ್ ಕಾರ್ಯಕರ್ತರು 7ನೇ ಸುತ್ತಿನಲ್ಲಿ ಸಿ.ಪಿ. ಯೋಗೇಶ್ವರ್ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಸಂಭ್ರಮಾಚರಣೆ ನಿಲ್ಲಿಸಿದರು. 8ನೇ ಸುತ್ತಿನಲ್ಲಿ ಯೋಗೇಶ್ವರ್ ಮುನ್ನಡೆ 11 ಸಾವಿರಕ್ಕೆ ಹೆಚ್ಚಾದಾಗ ಗೆಲುವಿನ ಆಸೆ ಕಮರಿ ಜೆಡಿಎಸ್ ಪಕ್ಷದ ಬಹುತೇಕ ಕಾರ್ಯಕರ್ತರು ಮುಖಂಡರು ಸ್ಥಳದಿಂದ ಕಾಲ್ಕಿತ್ತರು.
ಅಭಿಮಾನಿಗಳೊಂದಿಗೆ ವಿಜಯೋತ್ಸವದ ಮೆರವಣಿಗೆ ಉಪ ಚುನಾವಣೆಯಲ್ಲಿ ಸುಮಾರು 25 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ ಸಿ.ಪಿ. ಯೋಗೇಶ್ವರ್ ಅವರು ಮತ ಎಣಿಕೆ ಕೇಂದ್ರದ ಬಳಿಯಿಂದ ನಗರದ ಚಿಕ್ಕಮಳೂರು ಕಾಂಗ್ರೆಸ್ ಕಚೇರಿವರೆಗೂ ತೆರೆದ ವಾಹನದಲ್ಲಿ ವಿಜಯೋತ್ಸವ ಮೆರವಣಿಗೆಯಲ್ಲಿ ತೆರಳಿದರು. ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಸಿ.ಪಿ. ಯೋಗೇಶ್ವರ್ ಅಲ್ಲಿ ಅಧಿಕಾರಿಗಳಿಂದ ಪ್ರಮಾಣಪತ್ರ ಸ್ವೀಕರಿಸಿ ನಂತರ ಹೊರಬಂದು ವಿಜಯೋತ್ಸವ ಆರಂಭಿಸಿದರು. ಅಪಾರ ಅಭಿಮಾನಿಗಳ ಜೊತೆ ಬೆಂಗಳೂರು–ಮೈಸೂರು ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಯೋಗೇಶ್ವರ್ ಅವರಿಗೆ ಕಾರ್ಯಕರ್ತರು ಅಭಿಮಾನಿಗಳು ಜಯಘೋಷದೊಂದಿಗೆ ಭವ್ಯ ಸ್ವಾಗತ ನೀಡಿದರು. ಮೆರವಣಿಗೆಯಲ್ಲಿ ಇದ್ದಕ್ಕೂ ಕಾಂಗ್ರೆಸ್ ಬಾವುಟ ಶಾಲುಗಳು ರಾರಾಜಿಸಿದವು. ಸಿ.ಪಿ. ಯೋಗೇಶ್ವರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಜಿ ಸಂಸದ ಡಿ.ಕೆ. ಸುರೇಶ್ ಸಚಿವ ಜಮೀರ್ ಅಹಮದ್ ಸೇರಿದಂತೆ ಹಲವು ಪ್ರಮುಖರ ಭಾವಚಿತ್ರ ಹಿಡಿದು ಕಾರ್ಯಕರ್ತರ ಜೈ ಕಾರ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.