ಚನ್ನಪಟ್ಟಣ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಗುರುವಾರ ನಾಮಪತ್ರ ಸಲ್ಲಿಸಲಿದ್ದು, ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ಉಪಚುನಾವಣೆ ಕಣಕ್ಕಿಳಿಯಲು ತಯಾರಿ ನಡೆಸಿದ್ದ ಯೋಗೇಶ್ವರ್ ಕಳೆದ ಕೆಲವು ದಿನಗಳಿಂದ ಯಾವ ಪಕ್ಷದಿಂದ ಕಣಕ್ಕಿಳಿಯುತ್ತೇನೆ ಎಂಬ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಬಿಜೆಪಿಯಿಂದ, ಜೆಡಿಎಸ್, ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮಿ, ಪಕ್ಷೇತರವಾಗಿ ಕಣಕ್ಕಿಳಿಯುತ್ತಾರೆ ಎನ್ನುವ ಸುದ್ದಿಗಳ ನಡುವೆ ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿರುವ ಯೋಗೇಶ್ವರ್ ಈಗ ನನಗೆ ಜನಬಲ ಇದೆ ಎಂಬುದನ್ನು ಸಾಬೀತುಪಡಿಸಲು ನಾಮಪತ್ರ ಸಲ್ಲಿಸುವ ವೇಳೆ ಸಾವಿರಾರು ಮಂದಿಯನ್ನು ಸೇರಿಸಲು ಮುಂದಾಗಿದ್ದಾರೆ.
2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯ ಸಾಧಿಸಿ ನಂತರ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರು. ನಂತರ ತಾಲ್ಲೂಕಿನಲ್ಲಿ ಕಾಂಗ್ರೆಸ್‌ಗೆ ಸೂಕ್ತ ನಾಯಕ ಇಲ್ಲದೆ ಪಕ್ಷ ಸೊರಗಿತ್ತು. 2023ರ ವಿಧಾನಸಭಾ ಚುನಾವಣೆವರೆಗೂ ಪ್ರಬಲ ಅಭ್ಯರ್ಥಿ ಇಲ್ಲದೆ ಜೆಡಿಎಸ್ ಹಾಗೂ ಬಿಜೆಪಿಗೆ ಸ್ಪರ್ಧೆಯೊಡ್ಡಲಾರದೆ ಸೋಲು ಕಂಡಿತ್ತು.
ಯೋಗೇಶ್ವರ್ಬಿಜೆಪಿ ಸೇರಿದ ನಂತರ ಬಂದ ಚುನಾವಣೆಗಳಲ್ಲಿ ಸ್ಥಳೀಯ ನಾಯಕ ಟಿ.ಕೆ.ಯೋಗೇಶ್, ರಘುನಂದನ್ರಾಮಣ್ಣ, ಮಾಗಡಿಯ ಎಚ್.ಎಂ.ರೇವಣ್ಣ, ಎಸ್.ಗಂಗಾಧರ್ ಅವರನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಕೆಲವು ಚುನಾವಣೆಗಳಲ್ಲಿ ಠೇವಣಿಯನ್ನು ಕಳೆದುಕೊಂಡು ಸೋಲು ಕಂಡಿತ್ತು.
ಯೋಗೇಶ್ವರ್ ಅವರು ಕಾಂಗ್ರೆಸ್ ತೊರೆದ ನಂತರ ಅಲ್ಪ ಮತಗಳಿಗೆ ಕುಸಿದಿದ್ದ ಕಾಂಗ್ರೆಸ್‌ಗೆ ಈಗ ಮತ್ತೆ ಬಲ ಬಂದಂತಾಗಿದೆ. ತಮ್ಮದೇ ಮುಖಂಡರ ಹಾಗೂ
ಯುವಕರ ಪಡೆ ಹೊಂದಿರುವ ಯೋಗೇಶ್ವರ್ ಅವರು ಕಾಂಗ್ರೆಸ್‌ಗೆ ಬಂದಿರುವುದರಿಂದ ನೆಲಕಚ್ಚಿದ್ದ ಕಾಂಗ್ರೆಸ್ ಈಗ ಸೆಟೆದು ನಿಂತಂತಾಗಿದೆ. ಯೋಗೇಶ್ವರ್ ಅವರು ಗುರುವಾರ ನಾಮಪತ್ರ ಸಲ್ಲಿಸುವ ವೇಳೆ ಸಾವಿರಾರು ಮಂದಿಯನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ವಿರೋಧಿಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಆಗಮಿಸುವ ನಿರೀಕ್ಷೆ ಇದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ತಿಳಿಸಿದರು.
ತಾಲ್ಲೂಕಿನ ಐದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಮುಖಂಡರ ನೇತೃತ್ವದಲ್ಲಿ ವಾಹನ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಖಾಸಗಿ ಬಸ್, ಟೆಂಪೊ, ಆಟೊ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.