ಚನ್ನಪಟ್ಟಣ: ಪ್ರಾಚೀನ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಅಗತ್ಯವಿದೆ ಎಂದು ರಾಜ್ಯ ಎಸ್.ಡಿ.ಎಂ.ಸಿ. ಸಮನ್ವಯ ಸಮಿತಿ ಉಪಾಧ್ಯಕ್ಷ ಎನ್.ಎಂ.ಶಂಭುಗೌಡ ಹೇಳಿದರು.
ತಾಲ್ಲೂಕಿನ ನಾಗವಾರ ಗ್ರಾಮದ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ದಶವಾರ ಗ್ರಾಮದ ವಿ.ಎಂ. ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ‘ಹಾಡಿರಿ ರಾಗಗಳ, ನುಡಿಸಿರಿ ತಾಳಗಳ ಗೀತಗಾಯನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಣ್ಮರೆಯಾಗುತ್ತಿರುವ ಜಾನಪದ, ಜನಪದದ ಅಸ್ಮಿತೆ ಸಾರುವ ಪಳೆಯುಳಿಕೆಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ನಾಗವಾರ ಗ್ರಾ.ಪಂ. ಅಧ್ಯಕ್ಷ ಹರೀಶ್ ಕುಮಾರ್, ಜನಪದವನ್ನು ಪಠ್ಯದಲ್ಲಿ ಅಳವಡಿಸಿ, ಮಕ್ಕಳಿಗೆ ಬಾಲ್ಯದಿಂದಲೆ ಜಾನಪದದ ಬಗೆಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ಶಿವಮಾದು,ಶಾಲೆಯ ಮುಖ್ಯ ಶಿಕ್ಷಕ ಜಯರಾಮು ಮಾತನಾಡಿದರು.
ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕೆಂಚೇಗೌಡ, ಟ್ರಸ್ಟ್ ಅಧ್ಯಕ್ಷ ಡಿ.ಎಂ. ರವಿ, ಮುಖಂಡರಾದ ನಾಗರಾಜು ದಾಸೇಗೌಡನದೊಡ್ಡಿ, ಮಂಜು ಚಿಕ್ಕೇನಹಳ್ಳಿ, ವಿದ್ಯಾಸಂಸ್ಥೆಯ ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು.
ಜಾನಪದ ಕಲಾವಿದರಾದ ಬೇವೂರು ರಾಮಯ್ಯ, ದೊಡ್ಡಮಳೂರು ಮಹದೇವ ತಂಡ, ಕನಕಪುರ ಶ್ರೀನಿವಾಸ ತಂಡ, ಚಕ್ಕೆರೆ ಸಿದ್ದರಾಜು ತಂಡದಿಂದ ಸಿದ್ದಪ್ಪಾಜಿ, ಮಹದೇಶ್ವರ ಗೀತೆ ಹಾಡಿದರು. ಉಪನ್ಯಾಸಕ ಬಿ.ಪಿ. ಸುರೇಶ್ ಸ್ವಾಗತಿಸಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.