ಕನಕಪುರ: ನಗರದ ಜನತೆಯ ಆರೋಗ್ಯದ ದೃಷ್ಟಿಯಿಂದ ನಾರಾಯಣಪ್ಪನ ಕೆರೆಯ ಕಾನಕಾನಹಳ್ಳಿ ಪಾರ್ಕ್‌ನಲ್ಲಿ ನಿರ್ಮಿಸಿರುವ ತೆರೆದ ಜಿಮ್ ಮತ್ತು ಆಟದ ಪರಿಕರಗಳು ಮುರಿದು ಹೋಗಿ, ಬಳಕೆಗೆ ಬರುತ್ತಿಲ್ಲ.
2017ರಲ್ಲಿ ನಾರಾಯಣಪ್ಪನ ಕೆರೆಯನ್ನು ಕಾನಕಾನಹಳ್ಳಿ ಉದ್ಯಾನವಾಗಿ ಅಭಿವೃದ್ಧಿಪಡಿಸಿ, ತೆರೆದ ಜಿಮ್ ನಿರ್ಮಾಣ ಮಾಡಲಾಗಿತ್ತು. ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ವ್ಯಾಯಾಮ ಪರಿಕರ ಅಳವಡಿಸಲಾಗಿತ್ತು.
ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಉದ್ಯಾನವನದಲ್ಲಿ ವಾಯು ವಿಹಾರದ ಜೊತೆಗೆ ಜನ ವ್ಯಾಯಾಮ ಮಾಡುತ್ತಿದ್ದರು.
ಆದರೆ ನಿರ್ವಹಣೆ ಕೊರತೆಯಿಂದ ವ್ಯಾಯಾಮ ಪರಿಕರಗಳು ಬಿಸಿಲು ಮತ್ತು ಮಳೆಯಿಂದ ತುಕ್ಕು ಹಿಡಿದಿವೆ. ಕೆಲವು ಪರಿಕರಗಳು ಮರಿದಿದೆ. ಇದರಿಂದ ಕಳೆದೆರಡು ವರ್ಷಗಳಿಂದ ಜಿಮ್ ಉಪಕರಣ ಬಾರದಾಗಿದೆ.
ನಗರ ಸಭೆಯು ಉದ್ಯಾನ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಿದೆ. ಉದ್ಯಾನವು ಸುಂದರವಾಗಿದೆ. ಆದರೆ ವ್ಯಾಯಾಮ ಪರಿಕರಗಳು ಹಾಳಾಗಿರುವುದು ಜನರು ವ್ಯಾಯಾಮ ಮಾಡಲು ಅಡ್ಡಿ ಉಂಟು ಮಾಡಿವೆ.
ಜಿಮ್ ಉಪಕರಣ ಮತ್ತು ಮಕ್ಕಳು ಆಡುವ ಉಪಕರಣಗಳನ್ನು ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಎರಡು ವರ್ಷದಿಂದ ಜಿಮ್ ಪರಿಕರ ಉಪಯೋಗಕ್ಕೆ ಬರುತ್ತಿಲ್ಲ. ನಗರಸಭೆಯವರು ರಿಪೇರಿ ಮಾಡಿಸಿ ಸಾರ್ವಜನಿಕರ ಬಳಕೆ ಅನವು ಮಾಡಿಕೊಡಬೇಕು.ಭಟ್ಟರು ಅಂದಾನಿಗೌಡ ಸ್ಥಳೀಯ
ಜಿಮ್ ಪರಿಕರ ದುರಸ್ತಿಗೊಳಿಸುವಂತೆ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವ ಸ್ಪಂದನೆ ದೊರೆತಿಲ್ಲ. ಶೀಘ್ರ ದುರಸ್ತಿಗೊಳಿಸಬೇಕುಎಸಿಎನ್ ಜಗದೀಶ್ ಜನಪರ ವೇದಿಕೆ ಅಧ್ಯಕ್ಷ
ಚುನಾವಣೆ ಬಳಿಕ ದುರಸ್ತಿ ಇತ್ತೀಚೆಗೆ ಜಿಮ್ ಉಪಕರಣಗಳು ಹಾಳಾಗಿದ್ದು ಅವುಗಳನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ದುರಸ್ತಿಗೊಳಿಸಲು ಸಭೆಯಲ್ಲಿ ಒಪ್ಪಿಗೆ ಪಡೆದಿದ್ದು ನೀತಿ ಸಂಹಿತೆ ಮುಗಿದ ಕಾಮಗಾರಿ ನಡೆಸಲಾಗುವುದುಎಂ.ಎಸ್. ಮಹದೇವ್ ಪೌರಾಯುಕ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.