ADVERTISEMENT

ಮಕ್ಕಳಿಗೆ ವ್ಯವಹಾರ ಜ್ಞಾನ ಅಗತ್ಯ: ಯೋಗೇಶ್ ಚಕ್ಕೆರೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 5:16 IST
Last Updated 21 ಡಿಸೆಂಬರ್ 2023, 5:16 IST
ಚನ್ನಪಟ್ಟಣದ ನ್ಯೂಡಾನ್ ಬಾಸ್ಕೊ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಆಹಾರಮೇಳ ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಉದ್ಘಾಟಿಸಿದರು. ಶಾಲೆಯ ಕಾರ್ಯದರ್ಶಿ ಎಂ.ಎನ್. ಸುಧಾಕರ್ ಇತರರು ಹಾಜರಿದ್ದರು.
ಚನ್ನಪಟ್ಟಣದ ನ್ಯೂಡಾನ್ ಬಾಸ್ಕೊ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಆಹಾರಮೇಳ ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಉದ್ಘಾಟಿಸಿದರು. ಶಾಲೆಯ ಕಾರ್ಯದರ್ಶಿ ಎಂ.ಎನ್. ಸುಧಾಕರ್ ಇತರರು ಹಾಜರಿದ್ದರು.   

ಚನ್ನಪಟ್ಟಣ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವ್ಯವಹಾರ ಜ್ಞಾನ ಅವಶ್ಯಕವಾಗಿದ್ದು, ಆಹಾರ ಮೇಳದಂತಹ ಕಾರ್ಯಕ್ರಮಗಳು ಮಕ್ಕಳ ವ್ಯವಹಾರ ಜ್ಞಾನಕ್ಕೆ ಸಹಕಾರಿ ಎಂದು ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ತಿಳಿಸಿದರು.

ನಗರದ ಅಪ್ಪಗೆರೆ ಬಳಿಯ ನ್ಯೂಡಾನ್ ಬಾಸ್ಕೊ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಆಹಾರಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ಆಹಾರ ಮೇಳ ಮಾಡುವುದರಿಂದ ವಿದ್ಯಾರ್ಥಿಗಳಿಗೆ ವ್ಯವಹಾರದ ಜ್ಞಾನ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳಲ್ಲಿರುವ ಕೌಶಲವನ್ನು ವಿದ್ಯಾರ್ಥಿ ಜೀವನದಿಂದಲೇ ಯಾವ ರೀತಿ ಬಳಸಿಕೊಳ್ಳಬೇಕು. ಯಾವ ರೀತಿ ಹಣ ಹೂಡಿಕೆ ಮಾಡಬೇಕು ಎಂಬುದು ತಿಳಿಯುತ್ತದೆ. ಅಲ್ಲದೆ ಲಾಭ– ನಷ್ಟಗಳ ಅರಿವು ಮೂಡುವುದರೊಂದಿಗೆ, ಮುಂದಿನ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬ ತಿಳಿವಳಿಕೆ ಮೂಡುತ್ತದೆ ಎಂದರು.

ADVERTISEMENT

ಶಾಲೆಯ ಕಾರ್ಯದರ್ಶಿ ಎಂ.ಎನ್. ಸುಧಾಕರ್ ಮಾತನಾಡಿ, ಪ್ರತಿ ದಿನ ತರಗತಿಯಲ್ಲಿ ಕುಳಿತು ಪಾಠ ಪ್ರವಚನಕ್ಕಷ್ಟೇ ಸೀಮಿತವಾಗಿದ್ದ ಮಕ್ಕಳು, ತಾವು ತಯಾರಿಸಿದ ಆಹಾರ ಖಾದ್ಯಗಳನ್ನು ಆಹಾರ ಮೇಳಕ್ಕೆ ಬಂದ ಗ್ರಾಹಕರ ಮನವೊಲಿಸಿ ಮಾರಾಟ ಮಾಡುವ ಚಾಕಚಕ್ಯತೆ ಮೆಚ್ಚುವಂಥದ್ದು. ಮಕ್ಕಳಲ್ಲಿ ವ್ಯವಹಾರ ಜ್ಞಾನ, ವ್ಯಾಪಾರ ಕೌಶಲವನ್ನು ಕಲಿಸುವ ಉದ್ದೇಶದಿಂದ ಈ ಆಹಾರ ಮೇಳವನ್ನು ಪ್ರತಿ ವರ್ಷವೂ ನಮ್ಮ ಶಾಲೆಯಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

ಶಾಲೆಯ ಆಡಳಿತಾಧಿಕಾರಿ ಭಾರತಿ ಸುಧಾಕರ್, ಮುಖ್ಯಶಿಕ್ಷಕಿ ಜಯಶ್ರೀ, ಶಿಕ್ಷಕರಾದ ಅನುಪಮಾ, ಮಮತಾ, ಶಿವಕುಮಾರ್, ಯೋಗೇಶ್, ಸುಕನ್ಯಾ, ಅರ್ಜೂ ಲುಬ್ನಾ, ಸೌಮ್ಯ, ಶ್ವೇತಾ, ಕೋಮಲ, ಇತರರು ಭಾಗವಹಿಸಿದ್ದರು.

ಆಹಾರ ಮೇಳದಲ್ಲಿ ಪಾನಿಪುರಿ, ಸೇವ್ ಪುರಿ, ಗೋಬಿ ಮಂಚೂರಿ, ಪವ ಭಾಜಿ, ಉದ್ದಿನ ವಡೆ, ಮಸಾಲೆ ಅವಲಕ್ಕಿ, ಚುರುಮುರಿ, ಸಮೋಸ, ಜಾಮೂನು, ತರಕಾರಿ ಸಲಾಡ್, ಕೋಸಂಬರಿ, ಪಾನಕ ಇತರ ತಿಂಡಿ ತಿನಿಸುಗಳನ್ನು ತಯಾರು ಮಾಡಿ, ಉತ್ಸಾಹದಿಂದ ಮಾರಾಟ ಮಾಡಿದರು. ಪೋಷಕರು ಹಾಗೂ ಸಾರ್ವಜನಿಕರು ತಿನಿಸುಗಳನ್ನು ಕೊಂಡು ಮಕ್ಕಳ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.