ADVERTISEMENT

ಕನಕಪುರ | ನೀರಿನ ತೊಟ್ಟಿ ಸ್ವಚ್ಛಗೊಳಿಸಿದ ಮಕ್ಕಳು: ಪೋಷಕರ ದೂರು

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 7:26 IST
Last Updated 24 ಜೂನ್ 2024, 7:26 IST
ಕನಕಪುರ ಹುಲಿಬೆಲೆ ಸರ್ಕಾರಿ ಶಾಲೆಯಲ್ಲಿ ನೀರಿನ ತೊಟ್ಟಿ
ಕನಕಪುರ ಹುಲಿಬೆಲೆ ಸರ್ಕಾರಿ ಶಾಲೆಯಲ್ಲಿ ನೀರಿನ ತೊಟ್ಟಿ   

ಕನಕಪುರ: ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಯಾವುದೇ ಕೆಲಸಗಳಿಗೆ ಬಳಸಿಕೊಳ್ಳಬಾರದೆಂದು ಸರ್ಕಾರ ಕಾನೂನು ರೂ‍ಪಿಸಿದೆ. ಆದರೆ, ಹುಲಿಬಲೆ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ನೀರಿನ ತೊಟ್ಟಿಗೆ ಇಳಿಸಿ ಸ್ವಚ್ಛ ಮಾಡುವ ಕೆಲಸ ಮಾಡಿಸಿದ್ದಾರೆ ಎಂದು ದೂರಲಾಗಿದೆ.

ಶಾಲೆಯ ಐವರು ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕರು ಶನಿವಾರ ನೀರಿನ ತೊಟ್ಟಿಗೆ ಇಳಿಸಿ ಸ್ವಚ್ಛಗೊಳಿಸುವ ಕೆಲಸ ಮಾಡಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಏಣಿ ಸಹಾಯದಿಂದ ಮಕ್ಕಳನ್ನು ನೀರಿನ ಟ್ಯಾಂಕ್ ಒಳಗೆ ಇಳಿದು ಸ್ವಚ್ಛ ಮಾಡಿದ್ದಾರೆ. ಈ ವಿಷಯ ತಿಳಿದ ಪೋಷಕರು ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಮುಖ್ಯ ಶಿಕ್ಷಕಿ ರಾಜಲಕ್ಷ್ಮಿ, ನೀರಿನ ತೊಟ್ಟಿ ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚಿಸಲಾಗಿತ್ತು. ಅವರ ಜತೆ ವಿದ್ಯಾರ್ಥಿಗಳು ಹೋಗಿರುವುದು ಗೊತ್ತಾಗಿಲ್ಲ ಎಂದು ಪೋಷಕರನ್ನು ಸಮಾಧಾನಪಡಿಸಲು ಯತ್ನಿಸಿದರು.

ಇದರಿಂದ ಸಮಾಧಾನಗೊಳ್ಳದ ಪೋಷಕರು ಮುಖ್ಯ ಶಿಕ್ಷಕಿ ರಾಜಲಕ್ಷ್ಮಿ ವಿರುದ್ಧ ಶಿಕ್ಷಣ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಇಒ ಅವರಿಗೆ ದೂರವಾಣಿ ಮೂಲಕ ಪೋಷಕರು ಮಾಹಿತಿ ನೀಡಿದರು.

10 ಅಡಿ ಎತ್ತರದ ನೀರಿನ ತೊಟ್ಟಿಗೆ ಇಳಿಸಿ ಮಕ್ಕಳಿಂದ ಕೆಲಸ ಮಾಡಿಸಿದ್ದಾರೆ. ಒಂದು ವೇಳೆ ಏನಾದರೂ ಅನಾಹುತ ಆಗಿದ್ದರೆ ಅದಕ್ಕೆ ಯಾರು ಜವಾಬ್ದಾರರು ಎಂದು ವಿದ್ಯಾರ್ಥಿ ವಿನಯ್‌ ಗೌಡ ತಂದೆ ತಿಮ್ಮೇಗೌಡ, ಮಿಥುನ್ ತಾಯಿ ಕಾವ್ಯ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯಲ್ಲಿ ಶಿಕ್ಷಕರ ನಡುವೆ ಹೊಂದಾಣಿಕೆ ಕೊರತೆಯಿರುವುದರಿಂದ ಇಂದಿನ ಸಮಸ್ಯೆ ಉಲ್ಬಣಿಸಿದೆ. ಮುಂದೆ ಈ ರೀತಿ ಆಗದಂತೆ ಗಮನ ಹರಿಸಲಾಗುವುದು ಎಂದು ಮುಖ್ಯಶಿಕ್ಷಕಿ ರಾಜಲಕ್ಷ್ಮಿ ತಿಳಿಸಿದರು.

ನೀತಿನ ತೊಂಬೆ ಸ್ವಚ್ಛಗೊಳಿಸಿರುವುದ ವಿದ್ಯಾರ್ಥಿಗಳು

ಸಿಆರ್‌ಪಿ ಮತ್ತು ಇಸಿಒ ಸ್ಥಳ ಮಹಜರು ಮಾಡಲಿದ್ದಾರೆ. ಶಿಕ್ಷಕರು ಮತ್ತು ಪೋಷಕರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಹಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ.ರಾಮಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.