ADVERTISEMENT

ಚನ್ನಪಟ್ಟಣ: ಸೃಜನಶೀಲತೆಗೆ ‘ನನ್ನ ಒಳಿತಿಗಾಗಿ ಗ್ರಂಥಾಲಯ’

ಭವಿಷ್ಯದಲ್ಲಿ ಜವಾಬ್ದಾರಿ ಪ್ರಜೆಯಾಗಲು ತರಬೇತಿ

ಎಚ್.ಎಂ.ರಮೇಶ್
Published 23 ಅಕ್ಟೋಬರ್ 2024, 4:51 IST
Last Updated 23 ಅಕ್ಟೋಬರ್ 2024, 4:51 IST
ಜಿ.ಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರು 'ನನ್ನ ಒಳಿತಿಗಾಗಿ ಗಂಥಾಲಯ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭ
ಜಿ.ಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರು 'ನನ್ನ ಒಳಿತಿಗಾಗಿ ಗಂಥಾಲಯ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭ   

ಚನ್ನಪಟ್ಟಣ: ಮಕ್ಕಳನ್ನು ಶಿಕ್ಷಣ, ಆಟ, ಹೆಚ್ಚು ಅಂಕ ಗಳಿಕೆ ವಿಚಾರಕ್ಕೆ ಮಾತ್ರ ಸೀಮಿತ ಮಾಡುವುದು ಸೂಕ್ತವಲ್ಲ. ಅವರಿಗೆ ಎಳೆ ವಯಸ್ಸಿನಲ್ಲೇ ಭವಿಷ್ಯದ ಜವಾಬ್ದಾರಿಯುತ ಪ್ರಜೆಯಾಗಲು ಬೇಕಾದ ವಾತಾವರಣ ಮೂಡಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಬೆಂಗಳೂರಿನ ಚಿಲ್ಡ್ರನ್ಸ್ ಮೂವ್ ಮೆಂಟ್ ಫಾರ್ ಸಿವಿಕ್ ಅವೇರ್ ನೆಸ್ ಸಂಸ್ಥೆಯು (ಸಿಎಂಸಿಎ) ಎರಡು ದಶಕಗಳಿಂದ ಜಿಲ್ಲೆಯ ಸುಮಾರು 60 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ‘ನನ್ನ ಒಳಿತಿಗಾಗಿ ಗಂಥಾಲಯ’ ಕಾರ್ಯಕ್ರಮ ನಡೆಸುತ್ತಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಶಾಲಾ– ಕಾಲೇಜು, ಯುವಜನರೊಂದಿಗೆ ಕೆಲಸ ಮಾಡುತ್ತಿದೆ.

ಸಂಸ್ಥೆಯು ಈ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಪ್ರಜಾಪ್ರಭುತ್ವ, ಸಮಾನತೆ, ಲಿಂಗ ಸಮಾನತೆ, ಬಹುತ್ವ, ಸೌಹಾರ್ದತೆ ಕಲಿಸಲಾಗುತ್ತಿದೆ. ಆಡಳಿತದಲ್ಲಿ ಭಾಗವಹಿಸುವಿಕೆ, ಉತ್ತಮ ಭವಿಷ್ಯಕ್ಕೆ ಬೇಕಾದ ಯೋಜನೆ ಬಗ್ಗೆಯೂ ಕಲಿಸಲಾಗುತ್ತದೆ.

ADVERTISEMENT

ಕಾರ್ಯಕ್ರಮ ನಡೆಯುತ್ತಿರುವ 60 ಗ್ರಂಥಾಲಯಗಳಿಗೆ ಪ್ರತಿವಾರ ಸುಮಾರು 1000-1200 ಮಕ್ಕಳು ಭೇಟಿ ನೀಡುತ್ತಿದ್ದಾರೆ. ಮಕ್ಕಳಿಗೆ ಜೀವನ ಕೌಶಲ, ಸ್ವಅರಿವು, ಪರಿಸರ ಸ್ವಚ್ಛತೆ, ಆರ್ಥಿಕ ಸಾಕ್ಷರತೆ, ಸಾಹಿತ್ಯ, ಕಲೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಚಟುವಟಿಕೆ ಕಲಿಸಲಾಗುತ್ತಿದೆ.

ಮಕ್ಕಳ ಹಕ್ಕುಗಳ ಅರಿವು, ಅನುಭವಾತ್ಮಕ ಕಲಿಕೆ, ವಾಚಾನಾಭಿರುಚಿ ವೃದ್ಧಿ, ಪರಿಸರ ಕಾಳಜಿ, ಕೈತೋಟದ ಬಗ್ಗೆಯೂ ಕಲಿಸಲಾಗುತ್ತದೆ ಎನ್ನುತ್ತಾರೆ  ಸಂಸ್ಥೆ ಕಾರ್ಯಕ್ರಮಾಧಿಕಾರಿ ವಿಜಯ್ ರಾಂಪುರ.

ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಎಂಸಿಎ ಸಂಸ್ಥೆಯು ಸುಸ್ಥಿರ ದೇಶದ ನಿರ್ಮಾಣಕ್ಕಾಗಿ ಯುವಜನರಲ್ಲಿ ಸಾಮಾಜಿಕ ಕಳಕಳಿ ಮೂಡಿಸಿ, ಅವರನ್ನು ಚಿಂತನಶೀಲರನ್ನಾಗಿ ರೂಪಿಸುತ್ತಿದೆ. ಸಕ್ರಿಯ ನಾಗರಿಕರಾಗುವಂತೆ ಪ್ರೇರೇಪಿಸಿ ಪರಿವರ್ತಿಸುವುದು ಸಂಸ್ಥೆ ಧ್ಯೇಯವಾಗಿದೆ.
ಯಶಸ್ವಿಗೆ ಎಲ್ಲರ ಸಹಕಾರ: ಸಂಸ್ಥೆ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಜಿ.ಪಂ ಸಿಇಒ, ತಾ.ಪಂ ಇಒ, ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ, ಗ್ರಂಥಾಲಯ ಮೇಲ್ವಿಚಾರಕರು, ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಸಿಎಂಸಿಎ ಸಹಾಯಕ ನಿರ್ದೇಶಕ ಪಿ.ಆರ್. ಮರುಳಪ್ಪ.


ಮಕ್ಕಳಲ್ಲಿ ಪರಿಸರ ಜಾಗೃತಿ
ಗಿಡಗಳನ್ನು ನೆಟ್ಟು ಪರಿಸರ ಪೋಷಣೆಯ ಪಾಠ
ಮಕ್ಕಳಿಗೆ ಗ್ರಂಥಾಲಯದ ಜಾಗೃತಿ ಪಾಠ
ಮಕ್ಕಳಿಗೆ ಕಲೆ ಚಟುವಟಿಕೆ

60 ಗ್ರಾ.ಪಂ ಗ್ರಂಥಾಲಗಳಿಗೆ ವಿಸ್ತರಣೆ

2022 ಏಪ್ರಿಲ್ ತಿಂಗಳಿನಲ್ಲಿ ಈ ಕಾರ್ಯಕ್ರಮ ಪ್ರಾರಂಭಗೊಂಡಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ‘ಓದುವ ಬೆಳಕು’ ಕಾರ್ಯಕ್ರಮ ಭಾಗವಾಗಿ ಸಿಎಂಸಿಎ ಮೆಂಟರ್ಸ್‌ಗಳು ಮನೆ ಸರ್ಕಾರಿ ಶಾಲೆ ಹಾಗೂ ಗ್ರಂಥಾಲಯಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಕ್ರಿಯಾತ್ಮಕ ಚಟುವಟಿಕೆ ಮೂಲಕ ಈ ಕಾರ್ಯಕ್ರಮ ಆರಂಭಿಸಿದರು. ಪ್ರತಿ ಭಾನುವಾರ ಗ್ರಂಥಾಲಯಗಳಿಗೆ ಭೇಟಿ ನೀಡಿ ಅಲ್ಲಿ ಈ ಕಾರ್ಯಕ್ರಮದ ಭಾಗವಾಗಿ ನಡೆಸುವ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಕೇಳಿ ಕೊಳ್ಳಲಾಯಿತು. ನಂತರ ಸಕ್ರಿಯವಾಗಿ ಮಕ್ಕಳು ಭಾಗವಹಿಸುವಂತೆ ಪ್ರೇರೇಪಿಸಲಾಯಿತು. ಹೀಗೆ ಪ್ರಾರಂಭವಾದ ಕಾರ್ಯಕ್ರಮ ನಂತರ ಜಿಲ್ಲೆಯ ಆಯ್ದ 30 ಗ್ರಂಥಾಲಯಗಳಿಗೆ ವಿಸ್ತರಣೆಯಾಯಿತು. ಇದೀಗ ಜಿಲ್ಲೆಯಲ್ಲಿ ಒಟ್ಟು 60 ಗ್ರಾ.ಪಂ.ಗ್ರಂಥಾಲಯಗಳಿಗೆ ವಿಸ್ತರಣೆಯಾಗಿದೆ.

ಸಿಎಂಸಿಎ ಕ್ರಿಯಾತ್ಮಕ ಚಟುವಟಿಕೆ ಇಷ್ಟವಾಗುತ್ತಿದೆ. ಪರಿಸರ ಕುರಿತ ಚಟುವಟಿಕೆ ನನಗಿಷ್ಟ. ಹುಟ್ಟುಹಬ್ಬದ ದಿನದಂದು ಗಿಡ ಹಾಕಿದೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ
-ಭುವನ್, 6ನೇ ತರಗತಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ ನೀಲಸಂದ್ರ ಚನ್ನಪಟ್ಟಣ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.