ADVERTISEMENT

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ: ಬೈಕ್ ಏರಿ ದೇಶದುದ್ದಕ್ಕೂ ಸಂದೇಶದ ಸವಾರಿ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚಿತ್ರ ರಾವ್ ಏಕಾಂಗಿ ಸವಾರಿ; ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳಿಸದಂತೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 5:38 IST
Last Updated 12 ಜನವರಿ 2024, 5:38 IST
ಚಿತ್ರಾ ರಾವ್
ಚಿತ್ರಾ ರಾವ್   

ರಾಮನಗರ: ‘ಕರುಳ ಕುಡಿಗಳು ಕೈತುಂಬಾ ಸಂಬಳ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನದಲ್ಲಿದ್ದರೂ, ಹೆತ್ತವರ ಕಾಳಜಿಯ ಕರ್ತವ್ಯ ಭಾರವೆಂದು ವೃದ್ಧಾಶ್ರಮಕ್ಕೆ ತಂದು ಬಿಡುತ್ತಿದ್ದಾರೆ. ಅಲ್ಲಿ ಎಷ್ಟೇ ಕಾಳಜಿ ಮಾಡಿದರೂ ಕುಟುಂಬದ ಪ್ರೀತಿ ಸಿಗದು. ತಮ್ಮ ಸ್ಥಿತಿಯ ಕುರಿತು ಎದೆಯೊಳಗಿರುವ ದುಃಖ ಸದಾ ಅವರನ್ನು ಕಾಡುತ್ತಲೇ ಇರುತ್ತದೆ. ಅಮ್ಮ ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ವರ್ಷಗಳಿಂದ ಅಂತಹ ಮುಖಗಳನ್ನು ನೋಡಿ, ಒಡನಾಡಿದ್ದೇ ಇಂತಹದ್ದೊಂದು ಜಾಗೃತಿ ಸಂದೇಶದ ಬೈಕ್ ಸವಾರಿಗೆ ಪ್ರೇರಣೆಯಾಯಿತು...’

‘ಹೆತ್ತವರನ್ನು ಅನಾಥರನ್ನಾಗಿ ಮಾಡಿ ವೃದ್ಧಾಶ್ರಮಕ್ಕೆ ಕಳಿಸಬೇಡಿ. ಅವರ ಕೊನೆಯ ದಿನಗಳನ್ನು ಸುಖಾಂತ್ಯಗೊಳಿಸೋಣ’– ಎಂಬ ಸಂದೇಶದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4,850 ಕಿ.ಮೀ. ದೂರ ಏಕಾಂಗಿಯಾಗಿ ಬೈಕ್ ಸವಾರಿ ಮಾಡಿ ಜಾಗೃತಿ ಮೂಡಿಸಿದ 24 ವರ್ಷದ ಚಿತ್ರಾ ರಾವ್, ತಮ್ಮ ಸವಾರಿಯ ಹಿಂದಿನ ಪ್ರೇರಣೆಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಬೈಕ್ ಸವಾರಿ ಹೊಸದೇನಲ್ಲ. ಸ್ನೇಹಿತರೊಂದಿಗೆ ರಾಜ್ಯದ ವಿವಿಧ ಭಾಗಗಳಿಗೆ ಹೋಗಿ ಬಂದಿದ್ದೇನೆ. ಏಕಾಂಗಿಯಾಗಿ ರಾಜ್ಯ ಬಿಟ್ಟು ಹೋಗಿದ್ದು ಇದೇ ಮೊದಲು. ಈ ಕುರಿತು ಮನೆಯವರಿಗೆ ಹೇಳಿದಾಗ, ಮೊದಲಿಗೆ ವಿರೋಧ ವ್ಯಕ್ತವಾಯಿತು. ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಮನೆಯವರನ್ನು ಮನವೊಲಿಸಿದೆ. ನನ್ನ ಕನಸಿಗೆ ಅಮ್ಮ ಬೆಂಗಾವಾಲಾಗಿ ನಿಂತರು’ ಎಂದು ಕುಟುಂಬದ ಬೆಂಬಲ ನೆನೆದರು.

ADVERTISEMENT

ನಿತ್ಯ 12 ತಾಸು ಸವಾರಿ: ‘ಉತ್ತಮ ಸಂದೇಶದೊಂದಿಗೆ ಸವಾರಿ ಹೋಗಬೇಕೆಂಬುದನ್ನು ಬಿಟ್ಟರೆ, ವಿಶೇಷ ತಯಾರಿ ಮಾಡಿಕೊಂಡಿರಲಿಲ್ಲ. ಅದರಂತೆ, ಅ. 26ಕ್ಕೆ ಹೊರಟು ಸೆ. 14ರಂದು ಲಡಾಕ್‌ನಲ್ಲಿ ಅಂತ್ಯಗೊಳಿಸಿದೆ. ನಿತ್ಯ ಬೆಳಿಗ್ಗೆ 6ಕ್ಕೆ ಸವಾರಿ ಶುರು ಮಾಡಿದರೆ ಸಂಜೆ 6ಕ್ಕೆ ಮುಗಿಸುತ್ತಿದ್ದೆ. ಸುರಕ್ಷತೆಗಾಗಿ ಪೆಪ್ಪರ್ ಸ್ಪ್ರೇ ಮತ್ತು ಒಂದೆರಡು ಚಾಕು ಇಟ್ಟುಕೊಂಡಿದ್ದೆ’ ಎಂದರು.

‘ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯಕ್ಕೆ ಹೋಗಿ, ಬಂದಿರುವ ಉದ್ದೇಶ ತಿಳಿಸಿದೆ. ಆದರೆ, ವಿ.ವಿ ಒಳಕ್ಕೆ ಬಿಡಲಿಲ್ಲ. ನಾನು ಅಲ್ಲಿಯೇ ಉಳಿದುಕೊಳ್ಳುವ ಆಲೋಚನೆ ಮಾಡಿದ್ದೆ. ಅಲ್ಲಿ ಪ್ರವೇಶ ಸಿಗದಿದ್ದರಿಂದ ವಸತಿ ವ್ಯವಸ್ಥೆ ಸಮಸ್ಯೆಯಾಯಿತು. ನಂತರ,  ಸಂಜೆ ಹೊರಟು ರಾತ್ರಿಯೇ ದುರ್ಗಮ ಹಾದಿಯಲ್ಲಿ ಭಯದಿಂದಲೇ 60 ಕಿ.ಮೀ. ವಾಪಸ್ ಕಾಶ್ಮೀರಕ್ಕೆ ಬಂದೆ’ ಎಂದು  ಹೇಳಿದರು.

ಲೈವ್ ಲೋಕೇಷನ್ ನಿಗಾ: ‘ಸವಾರಿ ಮಾಡಿದ ಅಷ್ಟೂ ದಿನವೂ ಅಮ್ಮನಿಗೆ ಲೈವ್ ಲೋಕೇಷನ್ ಶೇರ್ ಮಾಡುತ್ತಿದ್ದೆ. ನಾನು ಎಲ್ಲಿದ್ದೇನೆ? ಎಲ್ಲಿ ಬೈಕ್ ನಿಲ್ಲಿಸಿದ್ದೇನೆ ಎಂಬೆಲ್ಲಾ ವಿವರ ಅಮ್ಮನಿಗೆ ಗೊತ್ತಾಗುತ್ತಿತ್ತು. ಅವರು ಲೈವ್ ಲೋಕೇಷನ್‌ನಲ್ಲೇ ನನ್ನ ನಿಗಾ ವಹಿಸುತ್ತಿದ್ದರು. ಬೈಕ್ ನಿಲ್ಲಿಸಿದರೂ ಕರೆ ಮಾಡಿ ಕ್ಷೇಮ ವಿಚಾರಿಸಿ ಹುರಿದುಂಬಿಸುತ್ತಿದ್ದರು’ ಎಂದರು.

‘ಸವಾರಿಯುದ್ದಕ್ಕೂ ಶಾಲಾ–ಕಾಲೇಜು, ಸಂಘ–ಸಂಸ್ಥೆ ಹಾಗೂ ಸರ್ಕಾರಿ ಕಚೇರಿಗಳಿಗೆ ಭೇಟಿ, ವಿದ್ಯಾರ್ಥಿಗಳು, ಗಣ್ಯರು, ಸೈನಿಕರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ಮಾಡಿದೆ. ಪ್ರತಿ ರಾಜ್ಯದಲ್ಲೂಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರು ಮೆಚ್ಚುಗೆಯ ಮಾತುಗಳನ್ನಾಡಿ ಪ್ರೋತ್ಸಾಹಿಸಿದರು. ಹವ್ಯಾಸಿ ಬೈಕ್‌ ರೈಡರ್‌ಗಳು ನನ್ನೊಂದಿಗೆ ಕೆಲ ದೂರ ಸವಾರಿ ಮಾಡಿ ಹುರಿದುಂಬಿಸಿದರು. ಮಾಧ್ಯಮದವರು ಸಂದರ್ಶನ ಮಾಡುತ್ತಿದ್ದರು. ಪತ್ರಿಕೆಗಳಲ್ಲೂ ಸುದ್ದಿಯಾಗುತ್ತಿತ್ತು. ಕೆಲವೆಡೆ ಸಂಘ–ಸಂಸ್ಥೆಗಳು ಮೆರವಣಿಗೆ ಮಾಡಿ ಸನ್ಮಾನಿಸಿ ಕಳಿಸುತ್ತಿದ್ದರು’ ಎಂದು ಪ್ರಯಾಣದ ಅನುಭವವನ್ನು ಬಿಚ್ಚಿಟ್ಟರು.

ರಾಮನಗರ ತಾಲ್ಲೂಕಿನ ಕೃಷ್ಣಾಪುರ ದೊಡ್ಡಿಯ ಚಿತ್ರಾ ರಾವ್, ಎಂ.ಬಿ.ಎ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ನೃತ್ಯ ಮತ್ತು ಸಂಗೀತ ಕಲಾವಿದೆ ಕೂಡ. ‘ಯು–ಧರ್ಮ’ ಎಂಬ ಸರ್ಕಾರೇತರ ಸಂಸ್ಥೆ ಸ್ಥಾಪಿಸಿರುವ ಅವರು, ಯುವಜನರ ನೇತೃತ್ವದಲ್ಲಿ ಪರಿಸರ ಜಾಗೃತಿ, ವೃದ್ಧರ ಕಾಳಜಿ ಹಾಗೂ ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡುವ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಏಕಾಂಗಿ ಸವಾರಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಜನರ ಪ್ರತಿಕ್ರಿಯೆ ಮೆಚ್ಚುಗೆಯ ಮಾತುಗಳು ಮತ್ತಷ್ಟು ಪ್ರಯತ್ನಗಳಿಗೆ ಹುರುಪು ತುಂಬಿದೆ. ಮುಂದೆಯೂ ದೇಶದ ಇತರ ಭಾಗಗಳಿಗೆ ಏಕಾಂಗಿ ಸವಾರಿ ಕೈಗೊಳ್ಳುವ ಯೋಜನೆ ಇದೆ
– ಚಿತ್ರ ರಾವ್ ರಾಮನಗರ

20 ದಿನ 10 ರಾಜ್ಯ ಭೇಟಿ

ತಮಿಳುನಾಡಿನ ಕನ್ಯಾಕುಮಾರಿಯಿಂದ ಸವಾರಿ ಆರಂಭಿಸಿದ ಚಿತ್ರಾ ರಾವ್ ಅವರು 4850 ಕಿ.ಮೀ. ದೂರದ ಸವಾರಿಯನ್ನು 20 ದಿನಗಳಲ್ಲಿ ಮುಗಿಸಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಮಧ್ಯಪ್ರದೇಶ ರಾಜಸ್ಥಾನ ಹರಿಯಾಣ ಪಂಜಾಬ್ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಸೇರಿ ಹತ್ತು ರಾಜ್ಯಗಳಲ್ಲಿ ತಮ್ಮ ಸಂದೇಶ ಸಾರಿದ್ದಾರೆ.

ತ್ರಿವರ್ಣ ಧ್ವಜದ ಕಾಣಿಕೆ ‘ನನ್ನ ಬೈಕ್‌ಗೆ ಕಟ್ಟಿಕೊಂಡಿದ್ದ ತ್ರಿವರ್ಣ ಧ್ವಜವು ವೇಗದಿಂದಾಗಿ ಆಗಾಗ ಬಾಗುತ್ತಿತ್ತು. ಬೀಳಗಿಗೆ ಭೇಟಿ ನೀಡಿದ್ದಾಗ ಅಲ್ಲಿನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೊಬ್ಬರು ಅದನ್ನು ಗಮನಿಸಿದರು. ನನ್ನನ್ನು ಅಲ್ಲಿನ ಗ್ಯಾರೇಜ್‌ಗೆ ಕರೆದೊಯ್ದು ಬೈಕ್‌ ಮುಂಭಾಗಕ್ಕೆ ಪೈಪ್‌ ಫಿಕ್ಸ್ ಮಾಡಿಸಿ ಹೊಸ ರಾಷ್ಟ್ರಧ್ವಜವೊಂದನ್ನು ತಂದು ಬೈಕ್‌ಗೆ ಕಟ್ಟಿದರು. ಅಲ್ಲಿಂದ ಸವಾರಿ ಅಂತ್ಯಗೊಳ್ಳುವವರಿಗೆ ಧ್ವಜ ಅಲುಗಾಡದೆ ಇತ್ತು’ ಎಂದು ಚಿತ್ರಾ ರಾವ್ ಹೇಳಿದರು.

ಕಾಶ್ಮೀರದ ತಲುಪಿದ ದಿನವೇ ಹೈ ಅಲರ್ಟ್ ಜಮ್ಮು ಮತ್ತು ಕಾಶ್ಮೀರವನ್ನು ತಲುಪಿದ ದಿನವೇ ಅಲ್ಲಿ ಉಗ್ರರ ದಾಳಿ ನಡೆದು ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದರಿಂದ ಹೈ ಅಲರ್ಟ್ ಇತ್ತು. ದಾರಿಯುದ್ದಕ್ಕು ಬಂದೂಕು ಹಿಡಿದಿರುವ ಸೈನಿಕರೇ ಕಾಣುತ್ತಿದ್ದರು. ಗಡಿ ಪ್ರವೇಶಿಸುತ್ತಿದ್ದಂತೆ ನನ್ನ ಮೊಬೈಲ್ ಸಿಮ್ ಆಫ್ ಆಯಿತು. ಅಲ್ಲಿ ಸ್ಥಳೀಯ ಸಿಮ್‌ಗಳನ್ನಷ್ಟೇ ಬಳಸಬೇಕು. ಇದು ನನಗೆ ಗೊತ್ತಿರಲಿಲ್ಲ. ಬಳಿಕ ಅಲ್ಲಿ ಬೇರೆ ಸಿಮ್ ಖರೀದಿಸಿ ಅಮ್ಮನಿಗೆ ಕರೆ ಮಾಡಿದ್ದೆ. ಅಲ್ಲಿಯವರೆಗೆ ನಾನು ಸಂಪರ್ಕಕ್ಕೆ ಸಿಗದಿದ್ದರಿಂದ ಗಾಬರಿಗೊಂಡಿದ್ದ ಅಮ್ಮ ನಿರಾಳರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.