ADVERTISEMENT

ಹಾರೋಹಳ್ಳಿ: ಚಾರಣಿಗರ ನೆಚ್ಚಿನ ತಾಣ ಚುಳಕನ ಬೆಟ್ಟ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 8:14 IST
Last Updated 31 ಆಗಸ್ಟ್ 2024, 8:14 IST
<div class="paragraphs"><p>ಹಾರೋಹಳ್ಳಿ ಸಮೀಪದ ಚುಳುಕನ ಬೆಟ್ಟದ ವಿಹಂಗನ ನೋಟ</p></div>

ಹಾರೋಹಳ್ಳಿ ಸಮೀಪದ ಚುಳುಕನ ಬೆಟ್ಟದ ವಿಹಂಗನ ನೋಟ

   

ಹಾರೋಹಳ್ಳಿ: ನಗರ–ಪಟ್ಟಣಗಳ ಜಂಜಡದ ಬದುಕಿನಿಂದ ದೂರ ಸರಿದು, ಕೆಲ ಸಮಯ ಪ್ರಕೃತಿಯ ನಿರಾಳ–ನೆಮ್ಮದಿಯ ಆಹ್ಲಾಕರ ವಾತಾವರಣದಲ್ಲಿ ಕಾಲ ಕಳೆಯಬೇಕು ಎನ್ನುವ ಹಂಬಲಕ್ಕೆ ಹೇಳಿ ಮಾಡಿಸಿದ ಜಾಗವಿದು. ಎಲ್ಲಿ ನೋಡಿದರೂ ಹಸಿರು, ಕಡಿದಾದ ಬೆಟ್ಟ, ತಾಜಾ ಗಾಳಿ, ಅಲ್ಲಿರುವಷ್ಟು ಹೊತ್ತು ಪ್ರಶಾಂತವಾದ ಅನುಭವ ನೀಡುವ ಈ ಬೆಟ್ಟ ಚಾರಣಿಗರನ್ನು ಮಾತ್ರವಲ್ಲ, ಪ್ರವಾಸಿಗರನ್ನೂ ಬರಸೆಳೆಯುವ ಚುಂಬಕ ಶಕ್ತಿಯನ್ನು ಹೊಂದಿದೆ.

ಹಾರೋಹಳ್ಳಿ–ಆನೇಕಲ್‌ ರಸ್ತೆಯ ಅಂಚಿಬೋರೆ ಬಳಿಯ ಕಾಲಭೈರವೇಶ್ವರನ ಈ ಕ್ಷೇತ್ರವನ್ನು ಚುಳುಕನ ಬೆಟ್ಟ, ಚುಳುಕನ ಗಿರಿ ಎಂದು ಕರೆಯಲಾಗುತ್ತದೆ. 

ADVERTISEMENT

ಸಮುದ್ರ ಮಟ್ಟದಿಂದ 1500-1800 ಅಡಿ ಎತ್ತರದಲ್ಲಿರುವ ಚುಳಕನ ಬೆಟ್ಟವು ನೂರಾರು ಎಕರೆ ಭೂ ಪ್ರದೇಶವನ್ನು ಹೊಂದಿದ್ದು, 50-60 ಎಕರೆಯಷ್ಟು ವಿಸ್ತೀರ್ಣವನ್ನು ಹೊಂದಿದೆ. ಬೆಂಗಳೂರಿನಿಂದ ಕೇವಲ 45 ಕಿಲೋ ಮೀಟರ್ ಹಾಗೂ ರಾಮನಗರ 28 ಕಿಲೋ ಮೀಟರ್‌ ಅಂತರದಲ್ಲಿರುವ ಈ ಬೆಟ್ಟಕ್ಕೆ ರಜಾದಿನಗಳಲ್ಲಿ ಹಾಗೂ ವಾರಾಂತ್ಯದಲ್ಲಿ ಚಾರಣಿಗರ ದಂಡೇ ಹರಿದು ಬರುತ್ತದೆ.  

ಧಾರ್ಮಿಕ ಕ್ಷೇತ್ರ:  ಕಾಲಭೈರವೇಶ್ವರ ನೆಲೆಸಿರುವ ಈ ಬೆಟ್ಟದಲ್ಲಿ ಮಾರಮ್ಮ–ಮುತ್ತಪ್ಪನ ದೇವಾಲಯಗಳೂ ಇವೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಂದು ಸುತ್ತಮುತ್ತಲಿನ ಜನ ತಪ್ಪದೇ ಬೆಟ್ಟ ಹತ್ತಿ ಬರುತ್ತಾರೆ. ಶ್ರದ್ಧೆಯಿಂದ ಭೈರವೇಶ್ವರ, ಮಾರಮ್ಮ, ಮುತ್ತಪ್ಪ ದೇವರಿಗೆ ನಡೆದುಕೊಳ್ಳುತ್ತಾರೆ. ಜಿಲ್ಲೆಯ ಆದಿ ಚುಂಚನಗಿರಿ ಕ್ಷೇತ್ರ ಎಂದೇ ಚುಳಕನ ಬೆಟ್ಟ ಚಿರಪರಿಚಿತವಾಗಿದ್ದು ಹಲವಾರು ಕಾರ್ಯಗಳು ದೇವರ ಸೇವೆಗಳು ಇಲ್ಲಿ ನಡೆಯಲಿವೆ. ಹಾರೋಹಳ್ಳಿ, ಮಾರಸಂದ್ರ ದ್ಯಾವಸಂದ್ರ ಸೇರಿದಂತೆ ಹಲವಾರು ಗ್ರಾಮದ ಭಕ್ತರು ಸೇವೆಗಳನ್ನು ನಡೆಸಿಕೊಡಲಿದ್ದು ಗಿರಿ ಪ್ರದಕ್ಷಿಣೆ ಸಮಿತಿ ಸದಸ್ಯರು ಪ್ರತಿ ಹುಣ್ಣಿಮೆಯ ದಿನದಂದು ಗಿರಿ ಪ್ರದಕ್ಷಿಣೆ ಹಾಕುವ ಸಂಪ್ರದಾಯವೂ ಇದೆ.

ತನ್ನದೇ ಆದ ಧಾರ್ಮಿಕ ಮೌಲ್ಯ ಹಾಗೂ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಚುಳಕನ ಬೆಟ್ಟ ಯಾವುದೇ ಅಭಿವೃದ್ಧಿ ಕಾಣದೇ ಸೊರಗುತ್ತಿದೆ. ಬೆಟ್ಟಕ್ಕೆ ಬರುವ ಚಾರಣಿಗರಿಗೆ ಹಾಗೂ ಭಕ್ತರಿಗೆ ಅನುಕೂಲವಾಗುವ ಯಾವುದೇ ಮೂಲಭೂತ ಸೌಕರ್ಯ ಇಲ್ಲಿಲ್ಲ. ದಿನದಿಂದ ದಿನಕ್ಕೆ ಒತ್ತುವರಿಗೆ ಒಳಗಾಗುತ್ತಿರುವುದರಿಂದ ಬೆಟ್ಟ ತನ್ನ ಅಸ್ತಿತ್ವ, ಹಿರಿಮೆ ಹಾಗೂ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ಒತ್ತುವರಿಯನ್ನು ತಡೆದು, ಮೂಲಸೌಕರ್ಯವನ್ನು ಕಲ್ಪಿಸಿದರೆ ಚುಳುಕನ ಬೆಟ್ಟ ಈ ಭಾಗದ ಮತ್ತೊಂದು ಅದ್ಭುತ ಪ್ರವಾಸಿ ತಾಣವಾಗುವುದರಲ್ಲಿ ಅನುಮಾನವಿಲ್ಲ.

ಕಳೆದ 5-6 ವರ್ಷಗಳಿಂದ ಈ ಬೆಟ್ಟದಲ್ಲಿ ನಡೆಯುತ್ತಿರುವ ಒತ್ತುವರಿಯನ್ನು ನೋಡುತ್ತಿದ್ದೇನೆ. ತಾಲ್ಲೂಕು ಆಡಳಿತ ಇದರ ಬಗ್ಗೆ ಗಮನಹರಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಬೆಟ್ಟಕ್ಕೆ ಭೇಟಿ ಕೊಟ್ಟು ಇಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು.

ಪ್ರಭುಸ್ವಾಮಿ, ಗಿರಿ ಪ್ರದಕ್ಷಿಣೆ ಸಮಿತಿ ಸದಸ್ಯರು

ಚುಳುಕನ ಬೆಟ್ಟದಲ್ಲಿರುವ ಕಾಲ ಬೈರವೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.