ADVERTISEMENT

ಸ್ಥಾಯಿ ಸಮಿತಿಗೆ 11 ಸದಸ್ಯರ ಆಯ್ಕೆ

ಜೂನ್ 27ಕ್ಕೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ; ಶಾಸಕರಿಗೆ ಪೌರ ಸನ್ಮಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 14:35 IST
Last Updated 19 ಜೂನ್ 2023, 14:35 IST
ರಾಮನಗರದ ನಗರಸಭೆಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಪೌರಾಯುಕ್ತ ಎಲ್. ನಾಗೇಶ್ ಅವರು ಪ್ರಸ್ತಾಪಿಸಿದ ವಿಷಯವೊಂದಕ್ಕೆ ಸದಸ್ಯ ಕೆ. ಶೇಷಾದ್ರಿ ಪ್ರತಿಕ್ರಿಯಿಸಿದರು. ಅಧ್ಯಕ್ಷೆ  ಬಿ.ಕೆ. ಪವಿತ್ರ, ಉಪಾಧ್ಯಕ್ಷ ಸೋಮಶೇಖರ್ ಇದ್ದರು
ರಾಮನಗರದ ನಗರಸಭೆಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಪೌರಾಯುಕ್ತ ಎಲ್. ನಾಗೇಶ್ ಅವರು ಪ್ರಸ್ತಾಪಿಸಿದ ವಿಷಯವೊಂದಕ್ಕೆ ಸದಸ್ಯ ಕೆ. ಶೇಷಾದ್ರಿ ಪ್ರತಿಕ್ರಿಯಿಸಿದರು. ಅಧ್ಯಕ್ಷೆ  ಬಿ.ಕೆ. ಪವಿತ್ರ, ಉಪಾಧ್ಯಕ್ಷ ಸೋಮಶೇಖರ್ ಇದ್ದರು   

ರಾಮನಗರ: ಆಡಳಿತಾರೂಢ ಕಾಂಗ್ರೆಸ್‌ನ 10 ಸದಸ್ಯರು ಸೇರಿದಂತೆ ಒಟ್ಟು 11 ಮಂದಿ ನಗರಸಭೆಯ ಸ್ಥಾಯಿ ಸಮಿತಿಗೆ ಸೋಮವಾರ ಆಯ್ಕೆಯಾದರು. ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರ ಅಧ್ಯಕ್ಷೆ ನೇತೃತ್ವದಲ್ಲಿ ಬೆಳಿಗ್ಗೆ ನಡೆದ ವಿಶೇಷ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು.

ಬೆಳಿಗ್ಗೆ ನಡೆದ ಸಭೆಗೆ ಜೆಡಿಎಸ್‌ ಸದಸ್ಯರ ಪೈಕಿ ವಾರ್ಡ್ 2ರ ಜೆಡಿಎಸ್‌ ಸದಸ್ಯ ಶಿವಸ್ವಾಮಿ ಹೊರತುಪಡಿಸಿದರೆ, ಉಳಿದವರು ಗೈರಾಗಿದ್ದರು.

ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ. ಶೇಷಾದ್ರಿ (ಶಶಿ) ಅವರು, ಸ್ಥಾಯಿ ಸಮಿತಿ ಸದಸ್ಯರಾಗಿ ತಮ್ಮ ಪಕ್ಷದ 10 ಸದಸ್ಯರ ಜೊತೆಗೆ, ಶಿವಸ್ವಾಮಿ ಅವರು ಒಳಗೊಂಡ ಹೆಸರನ್ನು ಸೂಚಿಸಿದರು. ಎಲ್ಲರೂ ಒಕ್ಕೊರಲಿನಿಂದ ಅನುಮೋದಿಸಿದರು.

ADVERTISEMENT

ಕ್ರಿಯಾಯೋಜನೆಗೆ ಒಪ್ಪಿಗೆ:  ರಾಜ್ಯ ಹಣಕಾಸು ಆಯೋಗದ (ಎಸ್‌ಎಫ್‌ಸಿ) ಮುಕ್ತ ನಿಧಿಯಡಿ ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕೆ ₹34 ಲಕ್ಷ ವೆಚ್ಚದಲ್ಲಿ ಮತ್ತು ಪರಿಶಿಷ್ಟ ಪಂಗಡದವರಿಗೆ ₹14 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳ ಕ್ರಿಯಾಯೋಜನೆಯನ್ನ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ನಗರಸಭೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ (ಎಸ್‌ಸಿಪಿ–ಟಿಎಸ್‌ಪಿ), ಶೇ 24.10 ಅನುದಾನದ ₹30 ಲಕ್ಷ ಅನುದಾನದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಕೈಗೊಂಡಿರುವ ಕ್ರಿಯಾಯೋಜನೆಯ ವಿವರವನ್ನು ಅಧಿಕಾರಿಗಳು ಸಭೆಯಲ್ಲಿ ಮಂಡಿಸಿದರು. ಸದಸ್ಯರು ಅದಕ್ಕೆ ಒಪ್ಪಿಗೆ ನೀಡಿದರು.

ಪೌರ ಸನ್ಮಾನ, ಇಂದೋರ್ ಪ್ರವಾಸ: ‘ರಾಮನಗರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಇಕ್ಬಾಲ್ ಹುಸೇನ್ ಅವರಿಗೆ ನಗರಸಭೆ ವತಿಯಿಂದ ಪೌರ ಸನ್ಮಾನ ಹಮ್ಮಿಕೊಳ್ಳಬೇಕು. ಯಾವ ರೀತಿ ಮಾಡಬೇಕು ಮತ್ತು ಯಾವಾಗ ಕಾರ್ಯಕ್ರಮ ಆಯೋಜಿಸಬೇಕು ಎಂಬುದರ ಬಗ್ಗೆ ನಿರ್ಧರಿಸಿ. ಚಾಮುಂಡೇಶ್ವರಿ ಕರಗಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಶೇಷಾದ್ರಿ ಸಲಹೆ ನೀಡಿದರು.

‘ಸ್ವಚ್ಛತೆ ವಿಷಯದಲ್ಲಿ ದೇಶಕ್ಕೆ ಮಾದರಿಯಾಗಿರುವ ಮಧ್ಯಪ್ರದೇಶದ ಇಂದೋರ್‌ ನಗರಕ್ಕೆ ನಗರಸಭೆ ಸದಸ್ಯರನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಬೇಕು. ಈ ಬಗ್ಗೆಯೂ ತೀರ್ಮಾನಿಸಿ’ ಎಂದು ಸಭೆಯ ಗಮನ ಸೆಳೆದರು.

ಸ್ವಾಗತ ಕೋರಿದ ಪೌರಾಯುಕ್ತ ಎಲ್. ನಾಗೇಶ್ ಅವರು, ಅಧ್ಯಕ್ಷೆ ಬಿ.ಕೆ. ಪವಿತ್ರ ಅವರ ಹೆಸರನ್ನು ಸುಮಿತ್ರ ಎಂದು, ವಾರ್ಡ್‌ಗಳ ಒಟ್ಟು ಸಂಖ್ಯೆಯನ್ನು 31ರ ಬದಲು 29 ಎಂದು ಹೇಳಿ ಮುಜಗರಕ್ಕೀಡಾದರು.

ಸಭೆಯಲ್ಲಿ ಉಪಾಧ್ಯಕ್ಷ ಸೋಮಶೇಖರ್, ಅಧೀಕ್ಷಕ ಶಿವಣ್ಣ, ವ್ಯವಸ್ಥಾಪಕಿ ರೇಖಾ, ಎಇಇ ರಂಗರಾಜು ಹಾಗೂ ಸದಸ್ಯರು ಇದ್ದರು.

ಅಂಕಿ ಅಂಶ... 31 ನಗರಸಭೆ ಸದಸ್ಯರ ಸಂಖ್ಯೆ 20 ಕಾಂಗ್ರೆಸ್ ಸದಸ್ಯರು 11 ಜೆಡಿಎಸ್ ಸದಸ್ಯರು

ಸ್ಥಾಯಿ ಸಮಿತಿಗೆ ಆಯ್ಕೆಯಾದವರು
1. ತೇಜಸ್ವಿನಿ ಕೆ. ಸುರೇಶ್ (ವಾರ್ಡ್ 4) 2. ಮಜ್ಹತ್ ಜಹಾ (ವಾರ್ಡ್ 10) 3. ನಿಜಾಮುದ್ದೀನ್ ಷರೀಫ್ (ವಾರ್ಡ್ 14) 4. ಗಿರಿಜಮ್ಮ (ವಾರ್ಡ್ 17) 5. ಆಯೇಷಾ ಬಾನು (ವಾರ್ಡ್ 20) 6. ಅಜ್ಮತ್ ಉಲ್ಲಾಖಾನ್‌ (ವಾರ್ಡ್ 22) 7. ನರಸಿಂಹ (ವಾರ್ಡ್ 26) 8. ಸೈಯ್ಯದ್ ಫಯಾಜ್ (ವಾರ್ಡ್ 29) 9. ಆರ್. ಮುತ್ತುರಾಜು (ವಾರ್ಡ್ 25) 10. ಮಹಮ್ಮದ್ ಆರೀಫ್ (ವಾರ್ಡ್ 18) 11. ಶಿವಸ್ವಾಮಿ ಜಿ. (ವಾರ್ಡ್ 2) (ಶಿವಸ್ವಾಮಿ ಹೊರತುಪಡಿಸಿ ಉಳಿದವರೆಲ್ಲರೂ ಕಾಂಗ್ರೆಸ್‌ ಸದಸ್ಯರು)
ಶೇ 17 ಪಾವತಿ ಹೊರೆ; ಪತ್ರ ಬರೆಯಲು ಸೂಚನೆ
‘ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರ ಕಾಯಂ ನೌಕರರಿಗೆ ಶೇ 17ರಷ್ಟು ವೇತನ ಹೆಚ್ಚಳ ಮಾಡಿದೆ. ಈ ಮೊತ್ತವನ್ನು ನಗರಸಭೆಯೇ ತನ್ನ ಸ್ವಂತ ಸಂಪನ್ಮೂಲದಿಂದ ನೌಕರರಿಗೆ ಭರಿಸಬೇಕು ಎಂಬ ಅಧಿಸೂಚನೆಯನ್ನು ಇಲಾಖೆ ಹೊರಡಿಸಿದೆ’ ಎಂಬ ವಿಷಯವನ್ನು ಅಧೀಕ್ಷಕ ಶಿವಣ್ಣ ಅವರು ಸಭೆಯ ಗಮನಕ್ಕೆ ತಂದರು. ಅದಕ್ಕೆ ಶೇಷಾದ್ರಿ ಅವರು ‘ನಗರಸಭೆ ಆರ್ಥಿಕವಾಗಿ ಅಷ್ಟೊಂದು ಶಕ್ತವಾಗಿಲ್ಲ. ಅಷ್ಟು ಮೊತ್ತ ಪಾವತಿಸಬೇಕಾದರೆ ತಿಂಗಳಿಗೆ ಸುಮಾರು ₹7 ಲಕ್ಷದಿಂದ ₹8 ಲಕ್ಷದಂತೆ ವರ್ಷಕ್ಕೆ ಅಂದಾಜು ₹1 ಕೋಟಿ ಬೇಕಾಗಬಹುದು. ಈ ಕುರಿತು ಸಂಬಂಧಪಟ್ಟವರಿಗೆ ಪತ್ರ ಬರೆದು ಇಲ್ಲಿನ ಆರ್ಥಿಕ ಸ್ಥಿತಿಯನ್ನು ಮನವರಿಕೆ ಮಾಡಿಕೊಡಿ’ ಎಂದು ಸಲಹೆ ನೀಡಿದರು. ‘ನಗರಸಭೆಯ ವಾರ್ಷಿಕ ಆದಾಯ ₹5.5 ಕೋಟಿಯಾಗಿದ್ದರೆ ನಿರ್ವಹಣಾ ವೆಚ್ಚವೇ ವರ್ಷಕ್ಕೆ ₹6 ಕೋಟಿ ಇದೆ. ಹೀಗಿರುವಾಗ ಶೇ 17ರಷ್ಟು ಪಾವತಿ ಹೊರೆಯನ್ನು ನಗರಸಭೆ ಭರಿಸುವ ಸ್ಥಿತಿಯಲ್ಲಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.