ADVERTISEMENT

ಗಾಂಧೀಜಿ ಸ್ಮರಣೆಗೆ ‘ಸ್ವಚ್ಛತೆಯೇ ಸೇವೆ’ ಅಭಿಯಾನ

ಅ. 2ರವರೆಗೆ ಅಭಿಯಾನ; ಸಾಮೂಹಿಕ ಸ್ವಚ್ಛತಾ ಶ್ರಮದಾನ; ಪ್ರತಿಜ್ಞಾ ವಿಧಿ ಬೋಧನೆ

ಓದೇಶ ಸಕಲೇಶಪುರ
Published 25 ಸೆಪ್ಟೆಂಬರ್ 2024, 6:21 IST
Last Updated 25 ಸೆಪ್ಟೆಂಬರ್ 2024, 6:21 IST
ಮಹಾತ್ಮ ಗಾಂಧೀಜಿ ಅವರ ಜನ್ಮದಿನದ ಜಿಲ್ಲಾ ಪಂಚಾಯಿತಿಯು ಹಮ್ಮಿಕೊಂಡಿರುವ ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಭಾಗವಾಗಿ, ವಿದ್ಯಾರ್ಥಿಗಳು ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕರಿಸಿದರು
ಮಹಾತ್ಮ ಗಾಂಧೀಜಿ ಅವರ ಜನ್ಮದಿನದ ಜಿಲ್ಲಾ ಪಂಚಾಯಿತಿಯು ಹಮ್ಮಿಕೊಂಡಿರುವ ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಭಾಗವಾಗಿ, ವಿದ್ಯಾರ್ಥಿಗಳು ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕರಿಸಿದರು   

ರಾಮನಗರ: ಮಹಾತ್ಮ ಗಾಂಧೀಜಿ ಅವರ ಜನ್ಮದಿನದ (ಅ. 2) ಅಂಗವಾಗಿ ಜಿಲ್ಲಾ ಪಂಚಾಯಿತಿಯು ‘ಸ್ವಚ್ಛತೆಯೇ ಸೇವೆ’ ಎಂಬ ಅಭಿಯಾನ ಆರಂಭಿಸಿದೆ. ಸ್ವಚ್ಛ ಭಾರತ್ ಯೋಜನೆಯಡಿ ನಡೆಯುತ್ತಿರುವ ಅಭಿಯಾನದಲ್ಲಿ ಗುಂಪು ಸ್ವಚ್ಛತಾ ಶ್ರಮದಾನದ ಜೊತೆಗೆ, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಲಾಗುತ್ತದೆ.

ಎರಡು ವಾರ ನಡೆಯುವ ಅಭಿಯಾನವು ಸೆ. 17ರಿಂದ ಶುರುವಾಗಿದ್ದು, ಗಾಂಧಿ ಜಯಂತಿ ದಿನವಾದ ಅ. 2ರವರೆಗೆ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಶಾಲಾ–ಕಾಲೇಜುಗಳ ಜೊತೆಗೆ ಸರ್ಕಾರೇತರ ಸಂಸ್ಥೆಗಳು ಸಹ ಈ ಅಭಿಯಾನಕ್ಕೆ ಕೈ ಜೋಡಿಸಿವೆ.

ವಿಭಿನ್ನ ಕಾರ್ಯಕ್ರಮ: ‘ಸ್ವಚ್ಛತೆಯನ್ನು ಸೇವೆ ಎಂದು ಪರಿಗಣಿಸಿ ಅದಕ್ಕೆ ಹೆಚ್ಚು ಒತ್ತು ನೀಡಿದ್ದ ಗಾಂಧೀಜಿ ಅವರು, ಸಾರ್ವಜನಿಕ ಸ್ವಚ್ಛತೆಯ ಮಹತ್ವವನ್ನು ಸಾರಿದರು. ಅವರ ಜನ್ಮದಿನವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನ ಆರಂಭಿಸಿ, ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಹಾಗೂ ಅಭಿಯಾನದ ನೋಡಲ್ ಅಧಿಕಾರಿ ಚಿಕ್ಕಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಭಿಯಾನದಡಿ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಸದ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ಮುಚ್ಚಲಾಗುತ್ತಿದೆ. ಅಭಿಯಾನದಲ್ಲಿಲ್ಲಿ ಶಾಲಾ ಮಕ್ಕಳನ್ನು ಸಹ ಒಳಗೊಂಡು, ಅವರಲ್ಲಿ ಈಗಿನಿಂದಲೇ ಸ್ವಚ್ಛತೆಯ ಪ್ರಜ್ಞೆಯನ್ನು ಮೂಡಿಸಲಾಗುತ್ತಿದೆ. ಶಾಲಾ ಮಟ್ಟದಲ್ಲಿ ಸ್ವಚ್ಛತೆಯ ಸಾಮೂಹಿಕ ಪ್ರತಿಜ್ಞಾ ವಿಧಿ ಬೋಧಿಸಲಾಗುತ್ತದೆ’ ಎಂದರು.

‘ಸ್ಥಳೀಯವಾಗಿರುವ ಸರ್ಕಾರೇತರ ಸಂಸ್ಥೆಗಳು, ಸಾಮಾಜಿಕ ಕ್ಲಬ್‌ಗಳು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರನ್ನು ಸಹ ಅಭಿಯಾನದಲ್ಲಿ ಒಳಗೊಳ್ಳಲಾಗಿದೆ. ಅಲ್ಲಲ್ಲಿ ಜಾಗೃತಿ ಜಾಥಾ ಮೂಡಿಸಲಾಗುತ್ತಿದೆ. ಒಟ್ಟಿನಲ್ಲಿ ಸ್ವಚ್ಛತೆಯ ಕುರಿತು ಸಾರ್ವಜನಿಕವಾಗಿ ಅರಿವು ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ’ ಎಂದರು.

ಸ್ವಚ್ಛತೆಯ ಸೇವೆ ಅಭಿಯಾನದಡಿ ಪ್ರತಿಜ್ಞಾ ವಿಧಿ ಸ್ವೀಕಾರ ಸ್ವಚ್ಛತಾ ಶ್ರಮದಾನದ ಜೊತೆಗೆ ಸಸಿ ನೆಡುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳುತ್ತಾ ಸ್ವಚ್ಛತೆ ಮತ್ತು ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ.
–ಚಿಕ್ಕಸುಬ್ಬಯ್ಯ, ‘ಸ್ವಚ್ಛತೆಯೇ ಸೇವೆ’ ಅಭಿಯಾನದ ನೋಡಲ್ ಅಧಿಕಾರಿ ಜಿ.ಪಂ. ರಾಮನಗರ

ಚಿತ್ರದ ಮೂಲಕವೂ ಜಾಗೃತಿ

‘ಅಭಿಯಾನದ ಭಾಗವಾಗಿ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಅತ್ಯುತ್ತಮ ಚಿತ್ರಗಳಿಗೆ ಬಹುಮಾನ ನೀಡಲಾಗುತ್ತಿದೆ. ನಂತರ ಪ್ರತಿಜ್ಞಾ ವಿಧಿ ಬೋಧಿಸಲಾಗುತ್ತದೆ. ಗ್ರಾಮಗಳ ಮಟ್ಟದಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲೆಂದರಲ್ಲಿ ಕಸವನ್ನು ಎಸೆದು ತಮ್ಮ ಗ್ರಾಮವನ್ನು ಅನೈರ್ಮಲ್ಯ ಮಾಡದೆ ತಮ್ಮ ಬೀದಿಗೆ ಬರುವ ಪಂಚಾಯಿತಿಯ ತ್ಯಾಜ್ಯ ಸಂಗ್ರಾಹಕ ವಾಹನಕ್ಕೆ ಕಡ್ಡಾಯವಾಗಿ ಕಸವನ್ನು ಕೊಡಬೇಕು. ಹಸಿ ಮತ್ತು ಒಣ ಕಸ ವಿಂಗಡಿಸಬೇಕು ಎಂಬುದರ ಬಗ್ಗೆ ಅಭಿಯಾನದಲ್ಲಿ ತಿಳಿವಳಿಕೆ ನೀಡಲಾಗುತ್ತಿದೆ’ ಎಂದು ನೋಡಲ್ ಅಧಿಕಾರಿ ಚಿಕ್ಕಸುಬ್ಬಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.